ನವದೆಹಲಿ: ಹಿಜಾಬ್ ಧರಿಸುವುದು ಮತ್ತು ಸಿಖ್ ಸಮುದಾಯದವರು ಧರಿಸುವ ಪೇಟಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಗುರುವಾರವೂ ಮುಂದುವರಿದ ಸಂದರ್ಭದಲ್ಲಿ ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ನೇತೃತ್ವದ ನ್ಯಾಯಪೀಠ ಈ ಮಾತುಗಳನ್ನಾಡಿದೆ.
ಸಿಖ್ ಧರ್ಮ ಹೊಂದಿರುವ ಐದು ಕಡ್ಡಾಯ ಧಾರ್ಮಿಕ ಅಂಶಗಳಲ್ಲಿ ಪೇಟ ಧರಿಸುವುದೂ ಮತ್ತು ಕೃಪಾಣ್ ಧರಿಸುವುದು ಕೂಡ ಒಂದಾಗಿದೆ. ಸುಪ್ರೀಂಕೋರ್ಟ್ ಕೂಡ ಅದಕ್ಕೆ ಅನುಮೋದನೆ ನೀಡಿದೆ ಎಂದು ನ್ಯಾ.ಹೇಮಂತ್ ಗುಪ್ತಾ ಹೇಳಿದರು. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಅರ್ಜಿದಾರರ ಪರ ವಾದ ಮಾಡಿದ ನ್ಯಾಯವಾದಿ ನಿಜಾಂ ಪಾಶಾ ಅವರು, “ಮುಸ್ಲಿಂ ಮುದಾಯದ ಮಹಿಳೆಯರಿಗೆ ಕೂಡ ಹಿಜಾಬ್ ಧರಿಸುವುದು ಅಗತ್ಯವೇ ಆಗಿದೆ. ಸಿಖ್ ಸಮುದಾಯದವರು ಹೊಂದಿರುವ ಐದು ಕಡ್ಡಾಯ ಧಾರ್ಮಿಕ ಅಂಶಗಳಂತೆ ಮುಸ್ಲಿಂ ಸಮುದಾಯದಲ್ಲಿ ಕೂಡ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿರುವ ಅಂಶಗಳು ಇವೆ.’ ಎಂದರು.
ಅದಕ್ಕೆ ಉತ್ತರಿಸಿದ ನ್ಯಾ.ಹೇಮಂತ್ ಗುಪ್ತಾ ಅವರು, “ಅದನ್ನು ಸಿಖ್ ಸಮುದಾಯದ ಧಾರ್ಮಿಕ ಆಚರಣೆ ಜತೆಗೆ ಹೋಲಿಕೆಯನ್ನು ದಯವಿಟ್ಟು ಮಾಡಬೇಡಿ. ಅದು ಭಾರತೀಯ ಸಂಸ್ಕೃತಿಯ ಜತೆಗೆ ಸಮ್ಮಿಳನವಾಗಿದೆ’ ಎಂದರು. ಅದಕ್ಕೆ ಉತ್ತರಿಸಿದ ನ್ಯಾಯವಾದಿ ನಜೀಂ ಪಾಶ “ಇಸ್ಲಾಂ ಧರ್ಮ 1,400 ವರ್ಷಗಳಿಂದ ಇದೆ. ಅದರ ಜತೆಗೆ ಹಿಜಾಬ್ ಕೂಡ ಸಮುದಾಯದ ಭಾಗವಾಗಿಯೇ ಮುಂದುವರಿದಿದೆ’ ಎಂದರು.
12ರಂದು ವಿಚಾರಣೆ: ಪ್ರಕರಣದ ಮುಂದಿನ ವಿಚಾರಣೆ ಸೆ.12ರಂದು ಮುಂದುವರಿಯಲಿದೆ. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಸಲ್ಮಾನ್ ಖುರ್ಷಿದ್ ವಾದ ಮುಂದುವರಿಸಲಿದ್ದಾರೆ.