ಮೈಸೂರು: ದಲಿತರ ಮನೆಗೆ ನಿಮ್ಮನ್ನ ಕರೆದಿದ್ದು ಯಾರು ? ಇದೆಲ್ಲಾ ನಮಗೆ ಬೇಡ. ನೀವು ತಟ್ಟೆ ಲೋಟ, ಹೋಟೆಲ್ ನಿಂದ ಊಟ ತಿಂಡಿ ಎಲ್ಲವನ್ನು ತಂದು ತಿನ್ನೋದು ಬೇಕಾ? ನಮಗೆ ಅವಮಾನ ಮಾಡಬೇಡಿ. ನೀವು ನಿಮ್ಮ ರಾಜಕೀಯ ಲಾಭಕ್ಕಾಗಿ ಬರಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು . ದಲಿತರ ಮನೆಗೆ ಸಿಎಂ ಭೇಟಿ ವಿಚಾರವಾಗಿ ಕಿಡಿಕಾರಿದರು.
ದಲಿತರ ಮನೆಗೆ ನೀವು ಬಂದರೆ ನಿಮಗೆ ಲಾಭ, ನಮಗೇನು ಲಾಭ? ದಯಮಾಡಿ ಬರಬೇಡಿ, ಬಂದು ನಮಗೆ ಅವಮಾನ ಮಾಡಬೇಡಿ. ದಲಿತರ ಮನೆಗೆ ಹೋಗುವುದಾದರೆ ಹಾಗಾದರೆ ನೀವು ಒಂದು ಕಾರ್ಯಕ್ರಮದೊಂದಿಗೆ ಹೋಗಿ. ಅದುಬಿಟ್ಟು ನೀವು ಬ್ರಾಂಡ್ ಹೋಟೆಲ್ ಊಟತಿಂಡಿ ತಿನ್ನಲು ದಲಿತರ ಮನೆಗೆ ಹೋಗಬೇಕೆ? ಬ್ರಾಹ್ಮಣರು, ಲಿಂಗಾಯತರ ಹೋಟೆಲ್ ಊಟ ತರಿಸಿ ತಿನ್ನೋಕೆ ದಲಿತರ ಮನೆಗೆ ಯಾಕೆ ಹೋಗುತ್ತೀರಿ? ದಲಿತರ ಮನೆಗೆ ಬರೊದಾದರೆ ಒಂದು ಕಾರ್ಯಕ್ರಮದೊಂದಿಗೆ ಊಟಕ್ಕೆ ಬನ್ನಿ. ರಾಜಕೀಯ ಲಾಭಕ್ಕಾಗಿ ಬರಬೇಡಿ ಎಂದರು.
ದಲಿತರ ಮನೆಯಲ್ಲಿ ಊಟ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಮುಂಚಿತವಾಗಿಯೇ ಅವರ ಸಿಬ್ಬಂದಿ ಹೋಗಿ ಬೇಕಾಗಿರುವುದನ್ನು ಸಿದ್ದ ಮಾಡಿ ಬಂದಿರುತ್ತಾರೆ. ಇದು ಅವಮಾನ ಮಾಡಿದಂತೆ. ದಲಿತರೇನು ಕರೆದಿಲ್ಲ, ತಾವೇ ತಟ್ಟೆ ಲೋಟ ತೆಗೆದುಕೊಂಡು ಬರುತ್ತಿದ್ದೀರಿ. ಭಾವನೆಗಳಿಗೆ ಅವಮಾನ ಮಾಡುವ ಕೆಲಸವಾಗುತ್ತಿದೆ. ಹೋಟೆಲ್ ತಿಂಡಿ ತಿನ್ನಲು ಯಾಕೆ ದಲಿತರ ಮನೆಗೆ ಹೋಗ್ಬೇಕು. ಇದು ಅವಮಾನದ ಕೆಲಸ ಎಂದು ವಿಶ್ವನಾಥ್ ಕಿಡಿಕಾರಿದರು.