ತಬ್ಬಿಕೊಂಡು ಅತ್ತಳು, ಒಂದು ಬಾರಿಯೂ ಗದರಲಿಲ್ಲ. ಆಗ ನನಗೆ ನಿನ್ನ ಹುಚ್ಚು ಪ್ರೀತಿಯನ್ನು ನಂಬಿಕೊಂಡು ನನ್ನವರಿಗೇ ಮೋಸ ಮಾಡಿ ಬಿಟ್ಟೆನೆಲ್ಲ ಅನ್ನಿಸಿತು…
Advertisement
ನಿನಗೊಂದು ಭಿನ್ನಹ. ಈ ಬದುಕಿಗೆ ಮರಳಿ ಬರಬೇಡ. ಬದುಕು ತುಂಬಾನೇ ಕಲಿಸಿಕೊಟ್ಟಿದೆ. ಒಂದು ಕ್ಷಣ ನನ್ನ ಮನದಾಳದ ಮಾತುಗಳನ್ನು ಗಮನವಿಟ್ಟು ಕೇಳಿಸಿಕೋ. ನೀನು ತೊರೆದು ಹೋದೆ ಎಂದು ಕಣ್ಣೀರು ಸುರಿಸುವವಳು ನಾನಲ್ಲ, ನೆನಪಿರಲಿ. ನೀನು ಮಾಡಿದ ತಪ್ಪಿಗೆ ದಂಡ ತೀರಿಸದೇ ಇರಲಾರೆಯಾ? ನಿನಗೂ ಈಗ ಅನಿಸಬಹುದು. ಮುಗ್ಧ ಮನಸ್ಸಿನ ಮುದ್ದು ಹುಡುಗಿ ಇಷ್ಟು ಕಠೊರವಾದಳಾ ಎಂದು. ಬದುಕು ನಿನ್ನಿಂದ ನಗುವುದನ್ನು ಎಷ್ಟು ರಸವತ್ತಾಗಿ ಕಲಿಸಿತೋ, ಅಷ್ಟೇ ಸೊಗಸಾಗಿ ಅಳುವುದನ್ನೂ ನಿರಂತರವಾಗಿ ಕಲಿಸುತ್ತಾ ಹೋಯಿತು.
Related Articles
Advertisement
ಒಂದು ದಿನ ನನಗೆ ಗೊತ್ತಿಲ್ಲದೇನೇ ನಿನ್ನ ಪೋನ್ ನಂಬರ್ ಬದಲಾಯಿತು. ಎಷ್ಟು ಕಾಲ್ ಮಾಡಿದ್ದರೂ ಪೋನ್ ರೀಚ್ ಆಗುತ್ತಿರಲಿಲ್ಲ. ದಿನವಿಡೀ ಚಡಪಡಿಸಿದೆ. ದಿನ ದಿನ ಕಳೆದಂತೆ ಮೌನಿಯಾಗುತ್ತಾ ಹೋದೆ. ಯಾರಿಗೂ ಗೊತ್ತಿಲ್ಲದೇ ರಾತ್ರಿ ಇಡೀ ಕಣ್ಣೀರಿಟ್ಟೆ. ಮನದ ನೋವನ್ನು ತಡೆಯಲಾಗದೇ ಅಮ್ಮನ ಬಳಿ ಧೈರ್ಯ ಮಾಡಿ ತಿಳಿಸಿಯೇ ಬಿಟ್ಟೆ. ಅವಳು ನನ್ನ ತಬ್ಬಿಕೊಂಡು ಅತ್ತಳು, ಒಂದು ಬಾರಿಯೂ ಗದರಲಿಲ್ಲ.ಆಗ ನನಗೆ ನಿನ್ನ ಹುಚ್ಚು ಪ್ರೀತಿಯನ್ನು ನಂಬಿಕೊಂಡು ನನ್ನವರಿಗೇ ಮೋಸ ಮಾಡಿ ಬಿಟ್ಟೆನೆಲ್ಲ ಅನ್ನಿಸಿತು. ಇಂದೂ ನೀನು ಇಲ್ಲ ಎಂಬ ಕೊರಗು ನನಗಿಲ್ಲ. ನಿನಗಾಗಿ ಸುರಿಸಲು ಒಂದು ಹನಿ ಕಣ್ಣೀರೂ ಉಳಿದಿಲ್ಲ. ಬದಲಾಗಿ ಅಮ್ಮ, ಅಪ್ಪ, ಅಣ್ಣಂದಿರಿಗಾಗಿ ಪ್ರತಿದಿನ ನಗುತ್ತೇನೆ. ನೀನು ಮರಳಿ ಬಂದು ಸಮಜಾಯಿಷಿ ನೀಡಿದರೂ ಕೇಳುವಷ್ಟು ವ್ಯವಧಾನ ನನಗಿಲ್ಲ. ನೀನಿಲ್ಲದೆಯೇ ಇಲ್ಲಿ ಸುಖವಾಗಿದ್ದೇನೆ. ನನ್ನ ನಗುವಲ್ಲಿ ನನ್ನವರ ಪ್ರಪಂಚ ಅಡಗಿದೆ. ನೆನಪಿರಲಿ; ಈ ಪ್ರಪಂಚದಿಂದ ನಗುವನ್ನು ಲೂಟಿ ಮಾಡಲು ನಿನ್ನಿಂದ ಆಗದು. ಮರಳಿ ಬರಬೇಡ, ಬಂದು ನೋಯಿಸಬೇಡ. ಸಾಯಿನಂದಾ ಚಿಟ್ಪಾಡಿ