ಬೆಂಗಳೂರು: ನನ್ನನ್ನು ದಲಿತ ನಾಯಕ ಎನ್ನಬೇಡಿ, ನಾನು ಕಾಂಗ್ರೆಸ್ ಮ್ಯಾನ್. ದಲಿತ ನಾಯಕ ಮುಖ್ಯಮಂತ್ರಿಯಾಗಲು ಮೀಸಲಾತಿ ಇದೆಯಾ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿ ಪ್ರಶ್ನಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪದೇಪದೆ ದಲಿತ ಮುಖ್ಯಮಂತ್ರಿ ವಿಚಾರ, ದಲಿತ ನಾಯಕ ಎಂದು ಪದೇಪದೆ ಹೇಳುವುದೇಕೆ ಎಂದು ಪ್ರಶ್ನಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನಾನು ಯಾವುದೇ ಒಂದು ಜಾತಿ ಸಮುದಾಯಕ್ಕೆ ಮಾತ್ರ ಮೀಸಲಲ್ಲ. “ಡೋಂಟ್ ಕಾಲ್ ಮಿ ದಲಿತ, ನಾನೊಬ್ಬ ಕಾಂಗ್ರೆಸ್ ಮ್ಯಾನ್’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಉಪ ಚುನಾವಣೆ ಬಳಿಕ ಮೈತ್ರಿ ವಿಚಾರ ಕುರಿತು ಎನ್‌ಸಿಪಿ ನಾಯಕ ಶರದ್ ಪವಾರ್ ರಾಜ್ಯ ನಾಯಕರ ಜತೆ ಮಾತಾಡಿದ ವಿಚಾರ ನನಗೆ ಗೊತ್ತಿಲ್ಲ. ಫಲಿತಾಂಶ ನೋಡಿ ಆಮೇಲೆ ಆ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ಮಾಡಿ ಮುಂದಿನ ರಾಜಕೀಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಮತ್ತೆ “ಆಪರೇಶನ್ ಕಮಲ’ದ ವಿಚಾರ ಬಗ್ಗೆ ನನಗೇನೂ ಗೊತ್ತಿಲ್ಲ. ಅದೆಲ್ಲ ಡಿ. 9ರ ಬಳಿಕ ಸ್ಪಷ್ಟ ಅಗಲಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗೆ ಎಷ್ಟು ಸ್ಥಾನಗಳು ಬರಲಿವೆ ಎನ್ನುವುದನ್ನು ಕಾದು ನೋಡಬೇಕು. ಗೊತ್ತಿಲ್ಲದ ವಿಚಾರದ ಬಗ್ಗೆ ಈಗಲೇ ಹೇಳಿಕೆ ನೀಡುವುದಿಲ್ಲ ಎಂದರು.
ಇನ್ನು ಆಪರೇಷನ್ ಕಮಲದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ತಮ್ಮ ಪಾತ್ರವೂ ಇತ್ತು ಎಂದು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ಅವರು ಕಾಂಗ್ರೆಸ್‌ನಲ್ಲಿ ಒಳ್ಳೆಯ ಕೆಲಸ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಅವರು ಏನು ಮಾಡಿದ್ದಾರೆ ಎಂದು ಅವರಿಗೆ ಗೊತ್ತು. ಅವರು ಹಿರಿಯರು, ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಮಾರ್ಮಿಕವಾಗಿ ನುಡಿದರು.
ಚಿದಂಬರಂ ಜಾಮೀನಿಗೆ ಸ್ವಾಗತ
ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಜಾಮೀನು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚಿದಂಬರಂ ಅವರಿಗೆ ಯಾವಾಗಲೋ ಜಾಮೀನು ಸಿಗಬೇಕಿತ್ತು. ಆದರೆ ಬಹಳ ವಿಳಂಬವಾಗಿ ಕೋರ್ಟ್ ತೀರ್ಪು ಬಂದಿದೆ. ಮೂರು ತಿಂಗಳುಗಳಿಂದ ಜೈಲು ವಾಸ ಮಾಡಬೇಕಾಗಿ ಬಂತು. ಚಿದಂಬರಂ ಒಬ್ಬ ಆರ್ಥಿಕ ತಜ್ಞ, ರಾಜಕೀಯ ಧುರೀಣ, ಕಾನೂನು ತಜ್ಞರಾಗಿದ್ದಾರೆ. ಅವರಿಗೆ ಐಟಿ, ಇಡಿಯಿಂದ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ನಡೆದಿದೆ. ಉತ್ತಮ ವ್ಯಕ್ತಿತ್ವ ಹೊಂದಿರುವ ಅವರು ಸಾಕ್ಷ್ಯ ನಾಶ ಮಾಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ತಡವಾಗಿಯಾದರೂ ಸಮಂಜಸವಾದ ತೀರ್ಪು ಬಂದಿದ್ದು ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದರು.