Advertisement

ಮೀಸಲಾತಿ ಪ್ರಸ್ತಾವ ದಿಲ್ಲಿಗೆ ತರಬೇಡಿ : ರಾಜ್ಯ ಸರಕಾರಕ್ಕೆ ಬಿಜೆಪಿ ವರಿಷ್ಠರ ಸೂಚನೆ 

08:50 AM Mar 03, 2021 | Team Udayavani |

ಬೆಂಗಳೂರು: ಯಾವುದೇ ಮೀಸಲಾತಿ ಪ್ರಸ್ತಾವವನ್ನು ದಿಲ್ಲಿಗೆ ತರಬೇಡಿ ಎಂದು ಬಿಜೆಪಿ ವರಿಷ್ಠ ನಾಯಕತ್ವ ರಾಜ್ಯ ಸರಕಾರಕ್ಕೆ ಪರೋಕ್ಷ ಸೂಚನೆ ನೀಡಿದೆ.

Advertisement

ರಾಜ್ಯದಲ್ಲಿ 3 ಸಮುದಾಯಗಳು ಮೀಸಲಾತಿ ಗಾಗಿ ಹೋರಾಟ ನಡೆಸುತ್ತಿವೆ. ಇನ್ನೂ ಅನೇಕ ಸಮುದಾಯಗಳು ಒತ್ತಡ ಹೇರುವ ಪ್ರಯತ್ನ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆ ಮಹತ್ವ ಪಡೆದಿದೆ.

ಮೀಸಲಾತಿ ಪ್ರಮಾಣವನ್ನು ಶೇ. 50 ಕ್ಕಿಂತ ಹೆಚ್ಚಿಸದಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದರೆ ಸಾಮಾಜಿಕವಾಗಿ ಮುಂದುವರಿದ ಸಮುದಾಯಗಳೂ ಮೀಸಲಾತಿಗಾಗಿ ಆಗ್ರಹಿಸುತ್ತಿರುವುದು ಕೇಂದ್ರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ವೀರಶೈವ ಲಿಂಗಾಯತವು ಸಾಮಾಜಿಕವಾಗಿ ಮುಂದುವರಿದ ಸಮುದಾಯಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಅದಕ್ಕೆ ಹಿಂದುಳಿದ ಮೀಸಲಾತಿ ನೀಡಿದರೆ ರಾಷ್ಟ್ರ ಮಟ್ಟದಲ್ಲಿ ಬೇರೆ ರಾಜ್ಯಗಳಿಂದಲೂ ಇಂಥದ್ದೇ ಮೀಸಲಾತಿಯ ಕೂಗು ಕೇಳಿ ಬರಲಿದೆ. ಇದರಿಂದ ಇಕ್ಕಟ್ಟು ಉಂಟಾಗುತ್ತದೆ ಎಂಬ ಕಾರಣದಿಂದ ಈ ತಾಕೀತು ಮಾಡಲಾಗಿದೆ ಎನ್ನಲಾಗಿದೆ. ರಾಜ್ಯ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳುವಂತೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ.

ವಿರೋಧದ ಆತಂಕ
ವೀರಶೈವ ಲಿಂಗಾಯತ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸದೆ ಇದ್ದರೆ ಕೇಂದ್ರ ಸರಕಾರದ ಬಗ್ಗೆ ಆ ಸಮುದಾಯಕ್ಕೆ ತಪ್ಪು ಅಭಿಪ್ರಾಯ ಉಂಟಾಗಿ, ರಾಜಕೀಯವಾಗಿ ಪಕ್ಷಕ್ಕೂ ತೊಂದರೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ತಜ್ಞರು ಹೇಳುವುದೇನು?
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ರಾಜ್ಯ ಹಿಂ. ವರ್ಗಗಳ ಆಯೋಗಕ್ಕೆ ಅಧಿಕಾರ ಇದೆ. ಆದರೆ ಪ್ರವರ್ಗ 2ಎಯಲ್ಲಿರುವ ಹಿಂ. ಸಮುದಾಯಗಳಿಗೆ ಹೋಲಿಸಿದಾಗ ಸಾಮಾಜಿಕ – ಶೈಕ್ಷಣಿಕವಾಗಿ ಆ ಸಮುದಾಯ ಹಿಂದುಳಿದಿರುವುದಕ್ಕೆ ಪೂರಕ ದಾಖಲೆಗಳಿರಬೇಕು. ಹಿಂ. ವರ್ಗಕ್ಕೆ ಸೇರಿಸಲು ಬಡತನವಷ್ಟೇ ಮಾನದಂಡವಲ್ಲ. ರಾಜ್ಯ ಹಿಂ. ವರ್ಗಗಳ ಆಯೋಗವು ಪಂಚಮಸಾಲಿ ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಅಧ್ಯಯನ ಮಾಡಿ ವರದಿ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next