ಬಾಗಲಕೋಟೆ: ಬರಲಿರುವ ಚುನಾವಣೆಯಲ್ಲಿ ಕೋಮುವಾದಿ, ಭ್ರಷ್ಟಾಚಾರ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯಲು ರಾಜ್ಯದ ಜನರೇ ನಿರ್ಧರಿಸಿದ್ದಾರೆ. ಚುನಾವಣೆ ವೇಳೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಪಕ್ಷ ಯಾರಿಗೇ ಟಿಕೆಟ್ ಕೊಡಲಿ. ಅಭ್ಯರ್ಥಿಗಳ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಟಿಕೆಟ್ ನಿರೀಕ್ಷೆಯಲ್ಲಿ ಇರುವವರು, ಟಿಕೆಟ್ ಸಿಗದಿದ್ದರೆ ಅಸಮಾಧಾನಗೊಳ್ಳಬಾರದು ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಹೇಳಿದರು.
ನವನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ಮತದಾರರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಪಿಎಸ್‌ಐ ಸಹಿತ ಹಲವು ನೇಮಕಾತಿ, ಪ್ರತಿಯೊಂದು ಕಾಮಗಾರಿಯಲ್ಲಿ ಭ್ರಷ್ಟಾಚಾರದಿಂದ ಜನರು ಬೇಸತ್ತು ಹೋಗಿದ್ದಾರೆ. ಇಂತಹ ಅತ್ಯಂತ ಕೆಟ್ಟ ಆಡಳಿತಕ್ಕೆ ಅಂತ್ಯ ಹಾಡಲು ಜನರೇ ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗಳನ್ನು ಜನರಿಗೆ ತಲುಪಿಸಬೇಕು. ಇದಕ್ಕಾಗಿ 10 ದಿನಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಪಕ್ಷ, ಜನರಿಗೆ ನೀಡಿದ ಭರವಸೆಗಳ ಪ್ರತಿಯನ್ನು ಗ್ಯಾರಂಟಿ ಕಾರ್ಡ್ ಸಮೇತ ತಲುಪಿಸಿ ಎಂದರು. ಕಾಂಗ್ರೆಸ್ ನೀಡಿದ ಗೃಹ ಲಕ್ಷ್ಮೀ ಯೋಜನೆ, ಉಚಿತ ವಿದ್ಯುತ್ ಬಗ್ಗೆ ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಕುರಿತು ಜನರಿಗೆ ಯಾವುದೇ ಅನುಮಾನ ಬರುವುದು ಬೇಡ. ಅದಕ್ಕಾಗಿ ಪಕ್ಷದ ಗ್ಯಾರಂಟಿ ಕಾರ್ಡ್ ನೀಡಲಾಗುತ್ತಿದೆ. ಬಿಜೆಪಿಯವರು ಈ ವರೆಗೆ ಕಮೀಷನ್ ರೂಪದಲ್ಲಿ ತಿಂದಿರುವ ಹಣದಲ್ಲಿ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ 2 ಸಾವಿರ ನೀಡಬಹುದು ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ. ಇಂತಹ ದ್ವೇಷದ ಹಾಗೂ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದರೂ ಅವರನ್ನು ಸಚಿವ ಸ್ಥಾನದಿಂದ ತೆಗೆದಿಲ್ಲ. ಕೂಡಲೇ ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕೇರಳ ಶಾಸಕ ವಿಷ್ಣು ನಾಥನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೋಳಿ, ನಜೀರ ಅಹ್ಮದ್, ಜಿಲ್ಲಾಧ್ಯಕ್ಷ ಎಸ್ .ಜಿ.ನಂಜಯ್ಯನಮಠ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ. ಮೇಟಿ, ಆರ್.ಬಿ.ತಿಮ್ಮಾಪುರ, ಮುಖಂಡರಾದ ಬಸವಪ್ರಭು ಸರನಾಡಗೌಡ, ಡಾ|ದೇವರಾಜ ಪಾಟೀಲ, ಡಾ|ಎಂ.ಎಸ್.ದಡ್ಡೇನವರ, ನಾಗರಾಜ ಹದ್ಲಿ, ಎಂ.ಬಿ.ಸೌದಾಗರ ಮುಂತಾದವರು ಉಪಸ್ಥತರಿದ್ದರು.
ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿಗರೇ ಆಕ್ರೋಶಗೊಂಡಿದ್ದಾರೆ. ಅವರದೇ ಪಕ್ಷ ಶಾಸಕ ಯತ್ನಾಳ, ತುಮಕೂರು ಶಾಸಕರು ಬಹಿರಂಗವಾಗಿಯೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸರ್ಕಾರದ ಭ್ರಷ್ಟಾಚಾರಕ್ಕೆ ಗುತ್ತಿಗೆದಾರರು ಜೀವ ಕಳೆದುಕೊಂಡಿದ್ದಾರೆ. ಆದರೂ ಸಂಬಂಧಿಸಿದ ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇಂತಹ ಭ್ರಷ್ಟ, ಕೋಮು-ದ್ವೇಷ ಹುಟ್ಟು ಹಾಕುವ, ಜನ ವಿರೋಧಿ ಸರ್ಕಾರ ಕಿತ್ತೂಗೆಯಲು ಈಗ ಕಾಲ ಒದಗಿ ಬಂದಿದೆ.
ರಣದೀಪಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ರಾಜ್ಯ ಉಸ್ತುವಾರಿ
ಕಾಂಗ್ರೆಸ್ ಪಕ್ಷದ ಪರಮೋಚ್ಛ ನಾಯಕರ ತೀರ್ಮಾನದಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಜನೋಪಯೋಗಿ ಹಾಗೂ ಜನಪರ ಭರವಸೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಗ್ಯಾರಂಟಿ ಕಾರ್ಡ್‌ಗಳನ್ನು ಯೋಗ್ಯ ಫಲಾನುಭವಿದಾರರನ್ನು ಗುರುತಿಸಿ ಹಂಚಿಕೆ ಮಾಡಲಿದ್ದೇವೆ. ಪಕ್ಷದ ಯೋಜನೆಗಳನ್ನು ನಿಜವಾದ ಬಡಜನರಿಗೆ ತಲುಪಿಸಿ ಕಾಂಗ್ರೆಸ್ ಪಕ್ಷದ ಮೂಲ ಧೇಯೋದ್ದೇಶಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುತ್ತೇವೆ.
ಎಸ್.ಆರ್. ಪಾಟೀಲ, ಮಾಜಿ ಸಚಿವರು