Advertisement

ಬೊಜ್ಜು ದೇಹದವರಾಗದಿರಿ!

01:19 AM Mar 01, 2020 | mahesh |

ಹೃದ್ರೋಗಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಅವಲಂಬಿಯಲ್ಲದ ಟೈಪ್‌ 2 ಮಧುಮೇಹ, ಸಂಧಿವಾತ, ಪಿತ್ತಕೋಶದ ಕಲ್ಲುಗಳು ಮತ್ತು ಎಂಡೊಮೆಟ್ರಿಕ್‌ ಕ್ಯಾನ್ಸರ್‌ ವರೆಗೆ ಅನೇಕ ವಿಧದ ಕಾಯಿಲೆಗಳು ಉಂಟಾಗುವ ಅಪಾಯಕ್ಕೂ ಅಧಿಕ ದೇಹತೂಕ, ಬೊಜ್ಜಿಗೂ ನಿಕಟ ಸಂಬಂಧ ಇದೆ.

Advertisement

18 ವರ್ಷ ವಯಸ್ಸಿನಲ್ಲಿ ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) 30ಕ್ಕಿಂತ ಹೆಚ್ಚು ಇರುವವರಿಗೆ ಜೀವಿತ ಕಾಲದಲ್ಲಿ ಮಧುಮೇಹ ಉಂಟಾಗುವ ಅಪಾಯವು ಇದೇ ವಯಸ್ಸಿನಲ್ಲಿ ಬಿಎಂಐಯು 18.5ರಿಂದ 24.9ರ ನಡುವೆ ಇರುವವರಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಇರುತ್ತದೆ. ಅಧಿಕ ದೇಹತೂಕವನ್ನು ಇಳಿಸಿಕೊಳ್ಳುವುದಕ್ಕೆ ಅಗತ್ಯವಾದ ಪಥ್ಯಾಹಾರ ಯೋಜನೆಯೊಂದನ್ನು ಹಾಕಿಕೊಳ್ಳುವಲ್ಲಿ ಮೊದಲ ಹೆಜ್ಜೆ ಎಂದರೆ ಆಯಾ ವ್ಯಕ್ತಿಯ ಶಕ್ತಿಯ ಅಗತ್ಯ ಮತ್ತು ಶಕ್ತಿ ಪೂರೈಸುವ ಆಹಾರಗಳ ಸೇವನೆಯನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ನಿಗದಿ ಪಡಿಸುವುದು. ಈ ಮೂಲಕ ಬಿಎಂಐಯನ್ನು ಅಗತ್ಯ ಮಟ್ಟದಲ್ಲಿ ಕಾಪಾಡಿಕೊಳ್ಳಬಹುದು.

ಬಿಎಂಐ+
ಸಹಜ ಮಟ್ಟ= 18.5-24.9
ಈ ಗುರಿಯನ್ನು ಸಾಧಿಸುವುದಕ್ಕೆ ಕೆಳಗೆ ವಿವರಿಸಿರುವ ಕೆಲವು ಸಲಹೆ ಸೂಚನೆಗಳನ್ನು ಪಾಲಿಸಬೇಕು:
ದಿನಂಪ್ರತಿಯ ಆಧಾರದಲ್ಲಿ ದೈಹಿಕವಾಗಿ  ಚಟುವಟಿಕೆಯಿಂದ ಇರಬೇಕು:
ಜಡ ಜೀವನಪದ್ಧತಿಯನ್ನು ದೂರವಿರಿಸಿ. ದಿನಂಪ್ರತಿ ನಿಯಮಿತವಾಗಿ ದೈಹಿಕ ಚಟುವಟಿಕೆ, ವ್ಯಾಯಾಮಗಳನ್ನು ನಡೆಸುವುದರಿಂದ ಕ್ಯಾಲೊರಿಗಳು ದೇಹದಲ್ಲಿ ಶೇಖರವಾಗದೆ ಉಪಯೋಗವಾಗುವಂತೆ ಮಾಡಬಹುದು. ಇದರಿಂದ ಹೃದಯ (ಕಾರ್ಡಿಯೊ ವ್ಯಾಸ್ಕಾಲಾರ್‌)ಕ್ಕೆ ಸಂಬಂಧಪಟ್ಟ ಸದೃಢತೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಇದು ಹೃದಯ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಕರುಳಿನ ಕ್ಯಾನ್ಸರ್‌ ಮತ್ತು ಟೈಪ್‌ 2 ಮಧುಮೇಹ ಉಂಟಾಗುವ ಅಪಾಯವನ್ನೂ ಕಡಿಮೆ ಮಾಡುತ್ತದೆ. ಜತೆಗೆ, ಸ್ನಾಯು ಸಾಮರ್ಥ್ಯ ಮತ್ತು ಬಾಳಿಕೆ ಹೆಚ್ಚುವುದರ ಮೂಲಕ ಹಾಗೂ ಎಲುಬುಗಳ ಆರೋಗ್ಯ ಚೆನ್ನಾಗಿರುವಂತೆ ಮಾಡುವುದರ ಮೂಲಕ ಸಂಧಿವಾತ (ಓಸ್ಟಿಯೊಪೊರೋಸಿಸ್‌) ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆಯಲ್ಲದೆ, ಒಟ್ಟಾರೆ ಮಾನಸಿಕ ಕ್ಷೇಮವೂ ಸಿದ್ಧಿಸುವಂತೆ ಮಾಡುತ್ತದೆ.

ಪ್ರತೀ ಒಂದು ತಾಸು ದೈಹಿಕ ವ್ಯಾಯಾಮದಿಂದ ಖರ್ಚಾಗುವ ಕ್ಯಾಲೊರಿ (ಕೆಸಿಎಎಲ್‌ಗ‌ಳಲ್ಲಿ) ಗಳ ಲೆಕ್ಕಾಚಾರ (ದೈನಿಕವಾಗಿ ಮಾಡುವಂತೆ):
 ಮನೆಯ ಕೈತೋಟದಲ್ಲಿ ಕೆಲಸ: 330
 ಪ್ರತೀ ತಾಸಿಗೆ 3.5 ಮೈಲು ವೇಗದಲ್ಲಿ ನಡಿಗೆ: 280
 ನೃತ್ಯ ಮಾಡುವುದು: 330
 ಗಾಲ್ಫ್ ಆಟವಾಡುವುದು: 330
 ತಾಸಿಗೆ 10 ಮೈಲಿಗಿಂತ ಕಡಿಮೆ ವೇಗದಲ್ಲಿ ಸೈಕಲ್‌ ಸವಾರಿ: 290
 ತೂಕ ಎತ್ತುವುದು: 220
 ದೇಹ ವಿಸ್ತರಿಸುವ ವ್ಯಾಯಾಮ (ಸ್ಟ್ರೆಚಿಂಗ್‌): 180
 ತಾಸಿಗೆ 5 ಮೈಲು ವೇಗದಲ್ಲಿ ಓಟ/ ಜಾಗಿಂಗ್‌: 590
 ಈಜಾಡುವುದು: 510
 ಏರೋಬಿಕ್ಸ್‌: 480
 ಬಾಸ್ಕೆಟ್‌ಬಾಲ್‌ ಆಟವಾಡುವುದು: 440

ದಿನಂಪ್ರತಿ ನಿಯಮಿತವಾಗಿ ದೈಹಿಕ ಚಟುವಟಿಕೆಗಳನ್ನು ನಡೆಸುವುದರ ಜತೆಗೆ ಶಿಫಾರಸು ಮಾಡಲಾದ ಪ್ರಮಾಣದ ಕ್ಯಾಲೊರಿ ಸೇವನೆಯನ್ನು ನಡೆಸುವ ಮತ್ತು ದೇಹದಲ್ಲಿ ಸೂಕ್ತ ಪ್ರಮಾಣದ ದ್ರವಾಂಶವನ್ನು ಕಾಪಾಡಿಕೊಳ್ಳುವ ವ್ಯಕ್ತಿಯು ಕ್ಷಿಪ್ರವಾಗಿ ದೇಹತೂಕವನ್ನು ಇಳಿಸಿಕೊಳ್ಳುತ್ತಾರೆ. ದೈನಿಕ ಆಧಾರದಲ್ಲಿ ಶಕ್ತಿಯನ್ನು ಸಾಕಷ್ಟು ಪ್ರಮಾಣದಲ್ಲಿ ಖರ್ಚು ಮಾಡುವವರಿಗೆ ದೇಹತೂಕ ಹೆಚ್ಚುವ ಅಪಾಯ ಕಡಿಮೆಯಾಗುತ್ತದೆ.

Advertisement

ವೈವಿಧ್ಯಮಯ ಆಹಾರಗಳನ್ನು ಸೇವಿಸಿ
ಯಾವುದೇ ಒಂದು ಆಹಾರವಸ್ತುವು ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶ, ಪೌಷ್ಟಿಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲು ಶಕ್ತವಾಗಿರುವುದಿಲ್ಲ. ಈ ಕಾರಣಕ್ಕಾಗಿ ನಾವು ವಿವಿಧ ಆಹಾರ ಗುಂಪುಗಳಿಂದ ಆಯ್ದುಕೊಂಡ ವೈವಿಧ್ಯಮಯ ಆಹಾರವಸ್ತುಗಳನ್ನು ಸೇವಿಸಬೇಕು. ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಹಾಲು ಮತ್ತು ಹೈನು ಉತ್ಪನ್ನಗಳು, ಮಾಂಸ, ಕೋಳಿ ಮಾಂಸ ಮತ್ತು ಉತ್ಪನ್ನಗಳು, ಮೀನು, ಒಣ ಬೀನ್ಸ್‌, ಮೊಟ್ಟೆ ಮತ್ತು ಕಾಳುಗಳು- ಹೀಗೆ ನಾವು ವಿವಿಧ ಆಹಾರ ವರ್ಗಗಳಿಂದ ಆಹಾರಗಳನ್ನು ಆರಿಸಿಕೊಂಡು ಸೇವಿಸಬೇಕು. ಒಂದೊಂದು ವಿಧವಾದ ಆಹಾರವೂ ವಿವಿಧ ಬಗೆಯ ಪೌಷ್ಟಿಕಾಂಶಗಳನ್ನು ಗಣನೀಯ ಪ್ರಮಾಣದಲ್ಲಿ ಹೊಂದಿರುವ ಕಾರಣ ಈ ಎಲ್ಲ ವರ್ಗದ ಆಹಾರವಸ್ತುಗಳನ್ನೂ ನಮ್ಮ ದೈನಿಕ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಇದಲ್ಲದೆ, ಆಹಾರದಲ್ಲಿ ವೈವಿಧ್ಯವಿದ್ದರೆ ಸೇವನೆಯ ರುಚಿ ಮತ್ತು ಸ್ವಾದವೂ ಅಧಿಕವಿರುತ್ತದೆ. ಪೌಷ್ಟಿಕಾಂಶ ಸಮೃದ್ಧವಾಗಿರುವ ಆಹಾರವಸ್ತುಗಳು ವಿಟಮಿನ್‌ ಮತ್ತು ಖನಿಜಾಂಶಗಳಂತಹ ಅಗತ್ಯ ಪೋಷಕಾಂಶಗಳನ್ನೂ ಗಣನೀಯ ಪ್ರಮಾಣದಲ್ಲಿ ಹೊಂದಿರುತ್ತವೆ. ಎಣ್ಣೆಗಳು, ಕೊಬ್ಬುಗಳು ಮತ್ತು ಆಲ್ಕೊಹಾಲ್‌ನಂತಹವುಗಳಲ್ಲಿ ಕ್ಯಾಲೊರಿ ಅಧಿಕ ಪ್ರಮಾಣದಲ್ಲಿದ್ದರೂ ಪೌಷ್ಟಿಕಾಂಶಗಳ ಕೊರತೆ ಇರುತ್ತದೆ.

ವೈವಿಧ್ಯಮಯ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯ
ಉತ್ಪನ್ನಗಳನ್ನು ಸೇವಿಸಿ ಇವುಗಳಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿರುತ್ತವೆ. ಕ್ಯಾಲೊರಿ ಕಡಿಮೆಯಿರುತ್ತದೆ. ನಾರಿನಂಶ ಸಮೃದ್ಧವಾಗಿದ್ದು ಕರುಳಿನಲ್ಲಿ ಆಹಾರದ ಚಲನೆ ಚೆನ್ನಾಗಿ ನಡೆಯುತ್ತದೆ. ರಕ್ತದಲ್ಲಿ ಕೊಲೆಸ್ಟರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತವೆಯಲ್ಲದೆ, ಅಗತ್ಯ ದೇಹತೂಕ ಕಾಪಾಡಿಕೊಳ್ಳಲು ನೆರವಾಗುತ್ತವೆ. ಭಿನ್ನ ಬಗೆಯ ತರಕಾರಿಗಳು ಭಿನ್ನ ಬಗೆಯ ಪೌಷ್ಟಿಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಕಡು ಹಸಿರು ವರ್ಣದ ತರಕಾರಿಗಳು, ಸೊಪ್ಪು ತರಕಾರಿಗಳು, ದ್ವಿದಳ ಧಾನ್ಯಗಳು, ಶರ್ಕರ ಪಿಷ್ಟವುಳ್ಳ ತರಕಾರಿಗಳು, ಕಿತ್ತಳೆ ಬಣ್ಣದ ತರಕಾರಿಗಳು ಮತ್ತು ಇತರ ತರಕಾರಿಗಳನ್ನು ಸೇವಿಸುವುದು ಉತ್ತಮ. ಸಾಧ್ಯವಿದ್ದಾಗಲೆಲ್ಲ ತಾಜಾ ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆ ಹಾಗೂ ಕೊಬ್ಬಿನಂಶ ಕಡಿಮೆ ಇರುವ ಕಾಳುಗಳನ್ನು ಸೇವಿಸಬೇಕು. ಇವು ಕೊಬ್ಬುಳ್ಳ ಆಹಾರವಸ್ತುಗಳಿಗೆ ಉತ್ತಮ ಪರ್ಯಾಯವಾಗಿರುತ್ತವೆ.

ಸ್ಯಾಚುರೇಟೆಡ್‌ ಕೊಬ್ಬುಗಳು ಮತ್ತು ಕೊಲೆಸ್ಟರಾಲ್‌ ಕಡಿಮೆ ಪ್ರಮಾಣದಲ್ಲಿರುವ ಆಹಾರಗಳನ್ನು ಆರಿಸಿಕೊಳ್ಳಿ ಆಹಾರದ ಮೂಲಕ ಕೊಬ್ಬಿನಂಶವು ದೇಹಕ್ಕೆ ಸೇರುವುದನ್ನು ಕಡಿಮೆ ಮಾಡುವುದರಿಂದ ಹೆಚ್ಚುವರಿ ಶಕ್ತಿಯು ದೇಹ ಸೇರುವುದನ್ನು ತಡೆಯುವುದಕ್ಕೆ ಸಹಾಯವಾಗಬಹುದು. ದಿನವೂ ಸೇವಿಸುವ ಮಾಂಸ, ಮೀನು, ಕೋಳಿಮಾಂಸ, ಮೊಟ್ಟೆ ಇತ್ಯಾದಿಗಳನ್ನು ಕಡಿಮೆ ಮಾಡುವುದು ಕೊಲೆಸ್ಟರಾಲ್‌ ಮತ್ತು ಒಟ್ಟಾರೆ ಸ್ಯಾಚುರೇಟೆಡ್‌ ಕೊಬ್ಬಿನಂಶವು ದೇಹ ಸೇರುವುದನ್ನು ಕಡಿಮೆ ಮಾಡುವುದಕ್ಕೆ ಇರುವ ಕೀಲಿಕೈ.

ಉಪ್ಪು ಮತ್ತು ಸಕ್ಕರೆಯ ಸೇವನೆಯಲ್ಲಿ ಮಾರ್ಪಾಡು ತರುವುದು
ಡಿಎಎಸ್‌ಎಚ್‌ ಆಹಾರ ಶೈಲಿಯನ್ನು ಅಳವಡಿಸಿಕೊಳ್ಳುವುದಕ್ಕೆ ಅತ್ಯುತ್ತಮ ವಿಧಾನವೆಂದರೆ ಕೊಬ್ಬು ಕಡಿಮೆ ಹಾಗೂ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು. ಹೆಚ್ಚು ಕ್ಯಾಲೊರಿ ದೇಹ ಸೇರುವುದನ್ನು ತಡೆದು ತೂಕ ಗಳಿಸಿಕೊಳ್ಳುವುದನ್ನು ನಿಯಂತ್ರಿಸುವುದಕ್ಕಾಗಿ ಸಕ್ಕರೆಯ ಸೇವನೆ ಶಿಫಾರಸು ಮಾಡಲಾದ ಪ್ರಮಾಣದಲ್ಲಷ್ಟೇ ಇರುವಂತೆ ನೋಡಿಕೊಳ್ಳಬೇಕು.

ಮದ್ಯಪಾನ ಮಾಡುವುದೇ ಆಗಿದ್ದಲ್ಲಿ ಅದು ನಿಯಂತ್ರಣದಲ್ಲಿರಲಿ; ಧೂಮಪಾನ ಬೇಡ
ಮಹಿಳೆಯರು ಮತ್ತು ಪುರುಷರಲ್ಲಿ ಹೃದ್ರೋಗಗಳು ಉಂಟಾಗುವ ಅಪಾಯವನ್ನು ಒಂದೆರಡು ಬಾರಿಯ ಮದ್ಯಪಾನ ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಆದರೆ ಮಿತಿಮೀರಿದರೆ ಅದು ಅಧಿಕ ರಕ್ತದೊತ್ತಡ, ಲಕ್ವಾ, ಪಿತ್ತಕೋಶದ ಕಾಯಿಲೆಗಳನ್ನು ಹಾಗೂ ಅಪಘಾತಗಳನ್ನು ಉಂಟುಮಾಡುತ್ತದೆ.

ಪ್ರೊಟೀನ್‌ ಸೇವನೆ ಮಿತ ಪ್ರಮಾಣದಲ್ಲಿರಲಿ ಸಹಜ ಆರೋಗ್ಯವಂತ ವ್ಯಕ್ತಿಯೊಬ್ಬನಿಗೆ ದಿನಕ್ಕೆ ಪ್ರತೀ ಕಿ.ಗ್ರಾಂ ದೇಹತೂಕ/0.8 ಗ್ರಾಂ ಪ್ರೊಟೀನ್‌ ಶಿಫಾರಸು ಮಾಡಲಾದ ಪ್ರಮಾಣವಾಗಿದೆ. ಪ್ರಾಣಿಜನ್ಯ ಪ್ರೊಟೀನ್‌ಗಳು ದುಬಾರಿ ಮಾತ್ರವಲ್ಲದೆ ಅವುಗಳಲ್ಲಿ ಕೊಬ್ಬು, ಕ್ಯಾಲೊರಿ, ಸ್ಯಾಚುರೇಟೆಡ್‌ ಫ್ಯಾಟ್‌ ಮತ್ತು ಕೊಲೆಸ್ಟರಾಲ್‌ ಅಧಿಕ ಪ್ರಮಾಣದಲ್ಲಿರುತ್ತವೆ. ಪ್ರಾಣಿಜನ್ಯ ಪ್ರೊಟೀನ್‌ಗಳನ್ನು ದೀರ್ಘ‌ಕಾಲ ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರಪಿಂಡ ವೈಫ‌ಲ್ಯ ಕಾಯಿಲೆಗಳ ಅಪಾಯ ಹೆಚ್ಚುತ್ತದೆ ಎನ್ನಲಾಗುತ್ತದೆಯಾದರೂ ಇದಕ್ಕೆ ಪುರಾವೆಗಳಿಲ್ಲ. ಆದರೆ ಇವು ಬಿ12 ವಿಟಮಿನ್‌ಗಳ ಏಕಮಾತ್ರ ಮೂಲಗಳಾಗಿವೆ. ಪ್ರಾಣಿಜನ್ಯ ಪ್ರೊಟೀನ್‌ಗಳಿಗೆ ಹೋಲಿಸಿದರೆ ಸಸ್ಯಜನ್ಯ ಪ್ರೊಟೀನ್‌ಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬಹುದಾಗಿದೆ.

ಕ್ಯಾಲ್ಸಿಯಂ ಸೇವನೆ ಸಮರ್ಪಕ ಪ್ರಮಾಣದಲ್ಲಿರಲಿ
ಕ್ಯಾಲ್ಸಿಯಂ ಸೇವನೆಯು ಸರಿಯಾದ ಪ್ರಮಾಣದಲ್ಲಿ ನಡೆಯುವಂತೆ ನೋಡಿಕೊಳ್ಳುವ ಉತ್ತಮ ವಿಧಾನ ಎಂದರೆ ಕಡಿಮೆ ಕೊಬ್ಬಿರುವ ಅಥವಾ ಕೊಬ್ಬಿನಂಶ ತೆಗೆಯಲಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹಾಗೂ ಹೆಚ್ಚುವರಿ ಕ್ಯಾಲ್ಸಿಯಂ ಸೇರಿಸಲಾದ ಹಣ್ಣಿನ ರಸಗಳು, ಸೋಯಾ ಉತ್ಪನ್ನಗಳನ್ನು ಸೇವಿಸುವುದು. ಓಸ್ಟಿಯೊಪೊರೋಸಿಸ್‌ ಲಕ್ಷಣಗಳು ಕಾಣಿಸಿಕೊಳ್ಳದಿರಲು ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ದೇಹಕ್ಕೆ ಪೂರೈಕೆಯಾಗುವುದು ಬಹಳ ಮುಖ್ಯ.

ಯಾವುದೇ ಡಯಟರಿ ಸಪ್ಲಿಮೆಂಟ್‌ಗಳನ್ನು ಅನವಶ್ಯಕವಾಗಿ ಅಧಿಕ ಪ್ರಮಾಣದಲ್ಲಿ ಸೇವಿಸಬಾರದು
ಯಾವುದೇ ವಿಟಮಿನ್‌ ಅಥವಾ ಖನಿಜಾಂಶಗಳ ಕೊರತೆ ಇದ್ದಾಗ ಮಾತ್ರ ಡಯಟರಿ ಸಪ್ಲಿಮೆಂಟ್‌ಗಳನ್ನು ಶಿಫಾರಸು ಮಾಡಲಾಗುತ್ತದೆ. ವೈದ್ಯರ ಶಿಫಾರಸಿನ ಅನುಸಾರ ಮಾತ್ರ ಇವುಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಔಷಧ/ ಡಯಟರಿ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆ ಇಲ್ಲದೆ ನೇರವಾಗಿ ಔಷಧದ ಅಂಗಡಿಗಳಿಂದ ಖರೀದಿಸಿ ಉಪಯೋಗಿಸಬೇಡಿ.

ಅರುಣಾ ಮಲ್ಯ
ಹಿರಿಯ ಪಥ್ಯಾಹಾರ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next