Advertisement

“Modi ಗ್ಯಾರಂಟಿ’ಗೆ ಮರುಳಾಗದಿರಿ: ಸಿಎಂ ಸಿದ್ದರಾಮಯ್ಯ

09:25 PM Feb 05, 2024 | Team Udayavani |

ಬೆಂಗಳೂರು: ಗ್ಯಾರಂಟಿಗಳನ್ನು ಮೂದಲಿಸಿದವರೇ ಈಗ “ಮೋದಿ ಗ್ಯಾರಂಟಿ’ ಎಂಬ ಹೊಸ ಮಂತ್ರ ಆರಂಭಿಸಿದ್ದಾರೆ. ಆದರೆ ಈ ಸುಳ್ಳು ಭರವಸೆಗೆ ಜನ ಮರುಳಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ವಿಧಾನಸೌಧ ಮುಂಭಾಗದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂರು ಹೊಸ ವಿನ್ಯಾಸದ “ಅಶ್ವಮೇಧ’ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದರೂ ನಾವು (ರಾಜ್ಯ ಕಾಂಗ್ರೆಸ್‌ ಸರಕಾರ) ನೀಡಿದಂತಹ ಒಂದೇ ಒಂದು ಗ್ಯಾರಂಟಿಗಳನ್ನು ಜನರಿಗೆ ಬಿಜೆಪಿ ನೀಡಲಿಲ್ಲ. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಭಾರತದ ಪ್ರತಿ ಕುಟುಂಬಕ್ಕೂ 15 ಲಕ್ಷ ರೂ. ನೀಡುವ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ ಯಾವುದನ್ನೂ ಈಡೇರಿಸದವರು ಈಗ “ಮೋದಿ ಗ್ಯಾರಂಟಿ’ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

1.17 ಕೋಟಿ ಯಜಮಾನಿಗೆ ತಿಂಗಳಿಗೆ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ 4,530 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯದಡಿ 5 ಕೆಜಿ ಅಕ್ಕಿ ಜತೆ 5 ಕೆಜಿ ಅಕ್ಕಿಯ ಮೊತ್ತ, ಯುವನಿಧಿ ಯೋಜನೆಯಡಿ ಯುವಕರಿಗೆ ಆರ್ಥಿಕ ಸಹಾಯ ನೀಡುತ್ತಿದ್ದೇವೆ. ರಾಜ್ಯದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4ರಿಂದ 5 ಸಾವಿರ ರೂ. ಆರ್ಥಿಕ ಸಹಾಯ ನೀಡುವ ಮೂಲಕ ಜನರ ಖರೀದಿಸುವ ಶಕ್ತಿಯನ್ನು ಹೆಚ್ಚಿಸಲಾಗಿದೆ. ನಮ್ಮ ಪಂಚಗ್ಯಾರಂಟಿಗಳು ರಾಜ್ಯದ ನಾಲ್ಕೂವರೆ ಕೋಟಿ ಜನರಿಗೆ ತಲುಪುತ್ತಿವೆ. ಬಡವರಿಗೆ ನಾವು ನೀಡಿದ ಈ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಇದೇ ಬಿಜೆಪಿಯವರು ಮೂದಲಿಸಿದರು. ಬಡವರ ಬಗ್ಗೆ ಕಾಳಜಿ ಇದ್ದು, ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಬಡವರಿಗೆ ಆರ್ಥಿಕ ಶಕ್ತಿ ತುಂಬುವುದು ಕಾಂಗ್ರೆಸ್‌ನ ಬದ್ಧತೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ್‌ (ವಾಸು), ವಿಧಾನ ಪರಿಷತ್‌ ಸದಸ್ಯ ನಾಗರಾಜ್‌ ಯಾದವ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next