Advertisement

ಒಕ್ಕೂಟದ ಸಮಾಜಪರ ಕಾರ್ಯಗಳಿಗೆ ದಾನಿಗಳ ಸಹಕಾರ ಮುಖ್ಯ

04:17 PM Sep 06, 2019 | Team Udayavani |

ಮುಂಬಯಿ, ಸೆ. 5: ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಮಹಾದಾನಿಗಳ ನೆರವಿನಿಂದ ಅಸಹಾಯಕ ಬಡ ಕುಟುಂಬಗಳ ಕಣ್ಣೀರೊರೆಸುವಲ್ಲಿ ಪ್ರಯತ್ನಶೀಲವಾಗಿದೆ. ಜತೆಗೆ ಒಕ್ಕೂಟವು ವಿಶ್ವವ್ಯಾಪಿ ಹೆಸರು ಗಳಿಸಲು ಸಾಧ್ಯವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ನುಡಿದರು.

Advertisement

ಆ. 31ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ ತುಂಗಾ ಸಮಾಜ ಕಲ್ಯಾಣ ಎನೆಕ್ಸ್‌ ಸಂಕೀರ್ಣದಲ್ಲಿ ಜರಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ 23ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು 32 ವರ್ಷಗಳ ಹಿಂದೆ ಸಂಸ್ಥಾಪಕ ಅಧ್ಯಕ್ಷ ಪಳ್ಳಿ ಜಯರಾಮ ಶೆಟ್ಟಿಯವರ ನೇತೃತ್ವದಲ್ಲಿ ಕೆ. ಬಿ. ಜಯಪಾಲ್ ಶೆಟ್ಟಿ, ಕೆ. ಸತೀಶ್ಚಂದ್ರ ಹೆಗ್ಡೆ, ಐ. ಎಂ. ಜಯರಾಮ ಶೆಟ್ಟಿ, ಕೆ. ಅಜಿತ್‌ಕುಮಾರ್‌ ರೈ ಮಾಲಾಡಿಯವರಂತಹ ಗಣ್ಯ ವ್ಯಕ್ತಿಗಳ ಕಾರ್ಯಾಧ್ಯಕ್ಷತೆಯಲ್ಲಿ ಬೆಳೆದು ಬಂದಿರುವುದಕ್ಕೆ ಅವರನ್ನು ಸ್ಮರಣಿಸುವುದು ನನ್ನ ಕರ್ತವ್ಯವಾಗಿದೆ. ಕೆಲವೊಂದು ಕಾರಣಗಳಿಂದ ಸ್ಥಗಿತಗೊಂಡ ಒಕ್ಕೂಟವು ಯಾವುದೇ ಚಟುವಟಿಕೆಗಳನ್ನು ಮುಂದುವರಿಸಲು ಅಸಾಧ್ಯವಾದ ಸಂದರ್ಭದಲ್ಲಿ ಅದಕ್ಕೆ ಹೊಸ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ ಕಾರ್ಯಾಧ್ಯಕ್ಷ ಅಜಿತ್‌ ಕುಮಾರ್‌ ಮಾಲಾಡಿಯವರು ನನ್ನನ್ನು ಉಪಾಧ್ಯಕ್ಷನನ್ನಾಗಿ ಸೇರಿಸಿಕೊಂಡರು. ಕೆಲವು ಸಮಯದ ಬಳಿಕ ಅವರು ಸ್ವತಃ ರಾಜೀನಾಮೆ ನೀಡಿದರು. ಬಳಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಬೆಂಬಲದಿಂದ ಒಕ್ಕೂಟದ ಕಾರ್ಯಾಧ್ಯಕ್ಷನಾಗಿ ಮುಂದುವರಿಯುವಂತಾಯಿತು. ಬಂಟ ಸಮಾಜದಲ್ಲಿರುವ ಆರ್ಥಿಕ ಅಶಕ್ತ ಕುಟುಂಬಗಳ ಸೇವೆಗೈಯುವ ಸಂಕಲ್ಪ ಕೈಗೆತ್ತಿಕೊಂಡು ದಾನಿಗಳು ತುಂಬು ಹೃದಯದ ಸಹಕಾರ ನೀಡಿ ಬೆನ್ನುತಟ್ಟಿದ ಪರಿಣಾಮ ಇಂದು ಒಕ್ಕೂಟದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತಿದೆ. ಒಕ್ಕೂಟವು ಈಗಾಗಲೇ ಮೂರು ಬಂಟ ವಿಶ್ವಸಮ್ಮಿನವನ್ನು ಆಯೋಜಿಸಿ ಬಂಟರ ಏಕತೆಗಾಗಿ ಪ್ರಯತ್ನಿಸಿದೆ. ವಿಶ್ವಾದ್ಯಂತ ಇರುವ ಬಂಟರ ಕುಟುಂಬಗಳ ವಾಸಕ್ಕೆ ಮನೆ, ಅನಾರೋಗ್ಯಕ್ಕೆ ಚಿಕಿತ್ಸೆ, ಮಕ್ಕಳ ಶಿಕ್ಷಣ, ವಿವಾಹ ಮೊದಲಾದ ಕಾರ್ಯಗಳಿಗಾಗಿ ಸಹಾಯ ನೀಡುತ್ತಾ ಬಂದಿದೆ. ನಮ್ಮ ಈ ಉತ್ತಮ ಕಾರ್ಯಯೋಜನೆಯನ್ನು ಗುರುತಿಸಿ ಅನೇಕ ಬಂಟರು ಒಕ್ಕೂಟದ ಸದಸ್ಯರಾಗಲು ಮುಂದೆ ಬರುತ್ತಿದ್ದಾರೆ. ಉಳ್ಳವರಿಂದ ಪಡೆದು ಇಲ್ಲದವರಿಗೆ ತಲುಪಿಸುವ ಕಾರ್ಯವನ್ನು ನಾವು ಪಾರದರ್ಶಕವಾಗಿ ಮಾಡುತ್ತಿದ್ದೇವೆ. ಅದಕ್ಕೆ ಪ್ರತಿಯೋರ್ವ ಬಂಟರರು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಒಕ್ಕೂಟದ ಅತ್ಯುತ್ತಮ ಕಾರ್ಯಯೋಜನೆಗಳ ಬಗ್ಗೆ ನುಡಿದು ಅಭಿನಂದಿಸಿದರು. ಆರ್ಥಿಕ ಸಹಾಯ ಪಡೆದವರು, ಮುದೊಂದು ದಿನ ಆ ಸಹಾಯವನ್ನು ಹಿಂತಿರುಗಿಸುವ ಸಾಮರ್ಥ್ಯ ಹೊಂದಲೆಂದು ತಿಳಿಸಿ, ಸುಮಾರು 25 ಮಹಿಳೆಯರನ್ನು ಒಕ್ಕೂಟವು ಸದಸ್ಯೆಯರನ್ನಾಗಿ ಸ್ವೀಕರಿಸಿರುವುದನ್ನು ಅಭಿನಂದಿಸಿದರು.

ಕೊಲ್ಲಾಡಿ ಬಾಲಕೃಷ್ಣ ರೈ ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರ ಸೇವೆ ಮುಂದುವರಿಸಿಕೊಂಡು ಹೋಗಲು ಬಂಟ ಬಾಂಧವರು ಇನ್ನಷ್ಟು ಸಹಕಾರ ನೀಡಬೇಕು ಎಂದು ನುಡಿದರು.

ಡಾ| ಪ್ರಭಾಕರ ಶೆಟ್ಟಿ ಬಿ. ಅವರು ಮಾತನಾಡಿ, ಐಕಳ ಹರೀಶ್‌ ಶೆಟ್ಟಿ ಅವರು ಒಕ್ಕೂಟದ ತನ್ನ ಒಂದೂವರೆ ವರ್ಷದ ಸೇವೆಯ ಮೂಲಕ ಸುಮಾರು 5 ಕೋ. ರೂ. ಗಳನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದ್ದಾರೆ ಎಂದು ನುಡಿದು ಅವರನ್ನು ಅಭಿನಂದಿಸಿದರು. ಜಪ್ಪಿನಮೊಗರು ಬಂಟರ ಸಂಘ ಚಂದ್ರಶೇಖರ ಶೆಟ್ಟಿ, ಕುಂದಾಪುರ ಬಂಟರ ಸಂಘದ ಪ್ರವೀಣ್‌ ಶೆಟ್ಟಿ ಮಾತನಾಡಿ ಶುಭಹಾರೈಸಿದರು.

Advertisement

ಆರಂಭದಲ್ಲಿ ವೀಣಾ ಶೆಟ್ಟಿ ಪ್ರಾರ್ಥನೆಗೈದರು. ಬಂಟ ಗೀತೆಯನ್ನು ಮೊಳಗಿಸಲಾಯಿತು. ಐಕಳ ಹರೀಶ್‌ ಶೆಟ್ಟಿ ಸ್ವಾಗತಿಸಿದರು. 2017-2018ನೇ ಸಾಲಿನ ಮಹಾಸಭೆಯ ವರದಿಯನ್ನು ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಮಂಡಿಸಿ ಅನುಮೋದಿಸಿಕೊಂಡರು. ವಾರ್ಷಿಕ ವರದಿಯನ್ನು ಅನುಮೋದಿಸಲಾಯಿತು. ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ ಮಂಡಿಸಿ ಅಂಗೀಕರಿಸಿಕೊಂಡರು.

2019-2020ನೇ ಸಾಲಿಗೆ ಲೆಕ್ಕ ಪರಿಶೋಧಕರನ್ನಾಗಿ ಸಿಎ ದಯಾಶರಣ್‌ ಶೆಟ್ಟಿ, ಪಿ. ಎಂ. ಹೆಗ್ಡೆ ಆ್ಯಂಡ್‌ ಕಂಪೆನಿಯನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ಇಬ್ಬರು ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ವಿತರಿಸಲಾಯಿತು. ಚುನಾವಣಾಧಿಕಾರಿ ಪ್ರಥ್ವಿರಾಜ್‌ ಶೆಟ್ಟಿ ಮತ್ತು ಲೆಕ್ಕ ಪರಿಶೋಧಕ ಸಿಎ ದಯಾಶರಣ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು. ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಉಡುಪಿ ಬಂಟರ ಸಂಘದ ತೋನ್ಸೆ ಮನೋಹರ್‌ ಶೆಟ್ಟಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ನಂದಿಕೂರು ಜಗದೀಶ್‌ ಶೆಟ್ಟಿ, ಕುಕ್ಕುಂದೂರು ಬಂಟರ ಸಂಘದ ರವಿ ಶೆಟ್ಟಿ, ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ನ್ಯಾಯವಾದಿ ಆರ್‌. ಜಿ. ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿಯ ಶಿವರಾಮ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಉಪೇಂದ್ರ ಶೆಟ್ಟಿ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಒಕ್ಕೂಟದ ನಿರ್ದೇಶಕಿ ಉಮಾಕೃಷ್ಣ ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಮುರಳಿ ಶೆಟ್ಟಿ, ಎಕ್ಕಾರು ಬಂಟರ ಸಂಘದ ರತ್ನಾಕರ ಶೆಟ್ಟಿ, ಬೈಂದೂರು ಬಂಟರ ಸಂಘದ ಜಗದೀಶ್‌ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಸಂತೋಷ್‌ ಕುಮಾರ್‌ ಹೆಗ್ಡೆ, ಪುರುಷೋತ್ತಮ ಶೆಟ್ಟಿ, ಬಂಟರ ಸಂಘ ಮುಂಬಯಿ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಭದ್ರಾವತಿ ಬಂಟರ ಸಂಘದ ಉಲ್ಲಾಸ್‌ ಶೆಟ್ಟಿ, ದಿವಾಕರ ಶೆಟ್ಟಿ, ಕುಂದಾಪುರ ಬಂಟರ ಸಂಘದ ಪ್ರವೀಣ್‌ ಶೆಟ್ಟಿ, ಮೈಸೂರು ಬಂಟರ ಸಂಘದ ನಂದ್ಯಪ್ಪ ಶೆಟ್ಟಿ, ಮುಲುಂಡ್‌ ಬಂಟ್ಸ್‌ನ ಪ್ರಕಾಶ್‌ ಶೆಟ್ಟಿ, ಮಾತೃಭೂಮಿಯ ರತ್ನಾಕರ ಶೆಟ್ಟಿ ಮುಂಡ್ಕೂರು, ನ್ಯಾಯವಾದಿ ಆರ್‌. ಸಿ. ಶೆಟ್ಟಿ, ಜಾಗತಿಕ ಬಂಟರ ಸಂಘದ ಸಚ್ಚಿದಾನಂದ ಶೆಟ್ಟಿ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್‌ ಅಡಪ್ಪ ಸಂಕಬೈಲ್, ಮೈಸೂರು ಬಂಟರ ಸಂಘದ ತೊಂಭತ್ತು ಪ್ರಭಾಕರ ಶೆಟ್ಟಿ, ಮುಲುಂಡ್‌ ಬಂಟ್ಸ್‌ನ ವಸಂತ್‌ ಶೆಟ್ಟಿ ಪಲಿಮಾರು, ಥಾಣೆ ಬಂಟ್ಸ್‌ನ ಅಶೋಕ್‌ ಅಡ್ಯಂತಾಯ, ಜವಾಬ್‌ನ ಸಿಎ ಐ. ಆರ್‌. ಶೆಟ್ಟಿ, ಅಹ್ಮದಾಬಾದ್‌ ಬಂಟ್ಸ್‌ನ ಕೆ. ಸಿ. ರೈ, ಕುಂದಾಪುರ ಯುವ ಬಂಟ್ಸ್‌ನ ಸುನೀಲ್ ಶೆಟ್ಟಿ, ಮೀರಾ ಬಂಟ್ಸ್‌ನ ಸಂತೋಷ್‌ ರೈ ಬೆಳ್ಳಿಪಾಡಿ, ಮುಲ್ಕಿ ಬಂಟರ ಸಂಘದ ಸಂತೋಷ್‌ ಕುಮಾರ್‌ ಹೆಗ್ಡೆ, ಸುರತ್ಕಲ್ ಬಂಟ್ಸ್‌ನ ಲೋಕಯ್ಯ ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಶೆಟ್ಟಿ, ವಸಾಯಿ ಪ್ರಾದೇಶಿಕ ಸಮಿತಿಯ ಜಯಂತ್‌ ಪಕ್ಕಳ, ಬಂಟರ ಸಂಘ ಕಲ್ಯಾಣ್‌-ಭಿವಂಡಿ ಪ್ರಾದೇಶಿಕ ಸಮಿತಿಯ ಸತೀಶ್‌ ಶೆಟ್ಟಿ, ಮೀರಾ-ಡಹಾಣೂ ಬಂಟ್ಸ್‌ನ ವಿರಾರ್‌ ಶಂಕರ್‌ ಶೆಟ್ಟಿ, ಬೆಳ್ತಂಗಡಿ ಬಂಟರ ಸಂಘ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಸತೀಶ್‌ ಅಡಪ್ಪ ಸಂಕಬೈಲ್ ವಂದಿಸಿದರು.

ಬಂಟ ಸಮಾಜದಲ್ಲಿ ಶ್ರೀಮಂತರಿರುವಂತೆ ಬಡತನದಲ್ಲಿ ಜೀವನ ಸಾಗಿಸುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಊರಿನಲ್ಲಿ ಅತೀ ಸಂಕಷ್ಟದಲ್ಲಿರುವ ಬಂಟರ ಪರಿಸ್ಥಿತಿಯನ್ನು ಪ್ರತ್ಯಕ್ಷ ಕಂಡು ಮರುಗಿದ್ದೇವೆ. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಬಂಟ ಸಮಾಜಕ್ಕೆ ಬಂಟರ ಸೇವೆಗಾಗಿ ದೊರೆತಿರುವುದು ಸಮಾಜದ ಭಾಗ್ಯ. ಒಕ್ಕೂಟವು ಇದುವರೆಗೆ ಸುಮಾರು ಒಂದು ಕೋ. ಮೂವತ್ತೇಳು ಲಕ್ಷ, ಐವತ್ತು ಸಾವಿರ ರೂ. ಗಳ ಮೊತ್ತವನ್ನು ಅಶಕ್ತರ ಸಹಾಯಕ್ಕಾಗಿ ನೀಡಿದೆ. ಕರ್ನಿರೆಯಲ್ಲಿ ತನ್ನ ಒಂದು ಎಕರೆ ಸ್ಥಳವನ್ನು ಒಕ್ಕೂಟದ ನಿವಾಸ ಕಾರ್ಯ ಯೋಜನೆಗಾಗಿ ದಾನವಾಗಿ ನೀಡಿದ್ದೇನೆ. ಸುಮಾರು 120 ಮನೆಗಳನ್ನು ಕಟ್ಟುವ ಯೋಜನೆ ಜಾರಿಯಲ್ಲಿದೆ. ಒಕ್ಕೂಟದ ಮಾನವೀಯ ಅನುಕಂಪದ ಕಾರ್ಯಕ್ಕೆ ಬಂಟರು ಸ್ಪಂದಿಸಬೇಕು. – ಕರ್ನಿರೆ ವಿಶ್ವನಾಥ ಶೆಟ್ಟಿ, ಉಪಾಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ
ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.
Advertisement

Udayavani is now on Telegram. Click here to join our channel and stay updated with the latest news.

Next