ತಾಳಿಕೋಟೆ: ನಾಲ್ಕೈದು ದಿನಗಳಿಂದ ಜಿಲ್ಲೆಯ ಹಾಗೂ ಮಹಾರಾಷ್ಟ್ರದ ಜತ್ತ ತಾಲೂಕಿನ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಪರಿಣಾಮ ಡೋಣಿ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದೆ.
ಇದರಿಂದ ಹಡಗಿನಾಳ ಗ್ರಾಮಕ್ಕೆ ತೆರಳುವ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಪುನರ್ವಸತಿ ಹಡಗಿನಾಳ ಒಳಗೊಂಡು ಅನೇಕ ಗ್ರಾಮಗಳ ಗ್ರಾಮಸ್ಥರಿಗೆ ತೊಂದರೆಯುಂಟಾಗಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಸ್ವಲ್ಪ ಮಳೆಯಾದರೂ ನದಿಯಲ್ಲಿನ ಪ್ರವಾಹ ಗ್ರಾಮಸ್ಥರಿಗೆ ತೊಂದರೆ ಮಾಡುತ್ತಿದೆ. ನದಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬಿತ್ತಿದ ಬೆಳೆಯೆಲ್ಲ ಕೊಚ್ಚಿಕೊಂಡು ಹೋದ ಉದಾಹರಣೆಗಳು ಸಾಕಷ್ಟು ನಡೆದಿವೆ. ಡೋಣಿ ನ ದಿಯಲ್ಲಿ ದಶಕಗಳಿಂದಲೂ ತುಂಬಿಕೊಂಡಿರುವ ಹೂಳಿನಿಂದ ಹಾನಿ ಸಂಭವಿಸುತ್ತಿದೆ.
ನದಿಯಲ್ಲಿ ತುಂಬಿಕೊಂಡಿರುವ ಹೂಳು ಎತ್ತಲು ಶಾಸಕ, ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ವಿವಿಧ ಸಂಘಟಕರು ಹಾಗೂ ಸಾರ್ವಜನಿಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಡಗಿನಾಳ ಗ್ರಾಮದ ಮೂಲಕ ತೆರಳುವ ಕೆಳಮಟ್ಟದ ಸೇತುವೆ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆ ನಿರ್ಮಾಣದ ಕಾರ್ಯ ಶುರುವಾಗಿದ್ದರೂ ಅರ್ಧ ಭಾಗದಷ್ಟು ಕೆಲ ಆಗಿಲ್ಲ. ಒಂದು ವಾರ ಕೆಲಸ ಪ್ರಗತಿಯಲ್ಲಿದ್ದರೆ 2 ತಿಂಗಳು ಸ್ಥಗಿತೊಗೊಂಡಿರುತ್ತದೆ. ಕಾಮಗಾರಿ ವಿಳಂಬತೆಗೆ ಕಾರಣವೇನೆಂಬುದನ್ನು ಇಲ್ಲಿವರೆಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಒಮ್ಮೆಯೂ ಭೇಟಿ ನೀಡಿ ಪರಿಶೀಲಿಸಿಲ್ಲ.
ವಿಜಯಪುರ ರಸ್ತೆಯ ಡೋಣಿ ನದಿ ಹನುಮಾನ ಮಂದಿರ ನದಿ ಪ್ರವಾಹಕ್ಕೆ ಮುಳುಗುವ ಹಂತಕ್ಕೆ ಬಂದಿದೆ. ನ ದಿಯ ಅಕ್ಕ ಪಕ್ಕದ ಡೋಣಿ ತೀರದ ಜಮೀನುಗಳಿಗೆ ನೀರು ನುಗ್ಗುತ್ತಿದೆ. ಕಳೆದ ವರ್ಷ ಜಮೀನುಗಳಲ್ಲಿ ಬೆಳೆ ಇದ್ದ ಸಮಯದಲ್ಲಿ ಪ್ರವಾಹದಿಂದ ಹತ್ತಿ, ತೊಗರಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಈಗ ಮತ್ತೆ ಅದೇ ಪ್ರವಾಹದ ಭೀತಿ ರೈತರು ಎದುರಿಸುವಂತಾಗಿದೆ.
-ಜಿ.ಟಿ. ಘೋರ್ಪಡೆ