Advertisement
ರಾಜಕೀಯ ದೇಣಿಗೆಗಳು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವಾಗಿವೆ ಎನ್ನುತ್ತಾರೆ ತಜ್ಞರು. ರಾಜಕೀಯ ಪಕ್ಷಗಳಿಗೆ ಯಾವ ವಿಧದಲ್ಲಿ ದೇಣಿಗೆ ಬರುತ್ತದೆ?, ಚುನಾವಣ ಬಾಂಡ್ ಎಂದರೇನು? ಇದರ ಬಗ್ಗೆ ಅನುಮಾನಗಳು ವ್ಯಕ್ತವಾಗುವುದು ಯಾಕೆ?, ದೇಣಿಗೆಯ ಮೂಲಕ ಕಪ್ಪುಹಣವನ್ನು ಬಿಳಿ ಮಾಡಬಹುದೇ? ಎಂಬೆಲ್ಲ ಮಾಹಿತಿಗಳು ಇಲ್ಲಿವೆ. ಜನಸಾಮಾನ್ಯರು ನಗದು ರೂಪದಲ್ಲಿ ಪಕ್ಷದ ಖಾತೆಗೆ ಹಣ ಜಮೆ ಮತ್ತು ಚುನಾವಣ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಕಾರ್ಪೊರೆಟ್ ಕಂಪೆನಿಗಳು ಚುನಾವಣ ಟ್ರಸ್ಟ್ ಮತ್ತು ಬಾಂಡ್‌ಗಳ ಮೂಲಕ ದೇಣಿಗೆ ನೀಡುತ್ತವೆ. ಚುನಾವಣೆಗಾಗಿ ಸರಕಾರವು ನೇರವಾಗಿ ಸಾರ್ವಜನಿಕ ನಿಧಿಯ ಹಣವನ್ನು ರಾಜಕೀಯ ಪಕ್ಷಗಳಿಗೆ ನೀಡುವ ವ್ಯವಸ್ಥೆ ಭಾರತದಲ್ಲಿ ಇಲ್ಲ. ಪರೋಕ್ಷವಾಗಿ ಅಂದರೆ ಪ್ರಚಾರ ಕಾರ್ಯಗಳಿಗಾಗಿ ಸಾರ್ವಜನಿಕ ಕ್ರೀಡಾಂಗಣ, ಸಮ್ಮೇಳನ ಸಭಾಂಗಣವನ್ನು ಉಚಿತವಾಗಿ ಒದಗಿಸಿಕೊಡುವ ವ್ಯವಸ್ಥೆ ಇದೆ. ಇದರಿಂದ ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತಿರುವ ದೇಣಿಗೆಯ ವಿಧಾನಗಳ ಹಿಂದೆ ಅಕ್ರಮಗಳಿರುವುದು ಸ್ಪಷ್ಟ ವಾಗುತ್ತದೆ. ರಾಜಕೀಯ ದೇಣಿಗೆ ವಿಚಾರದಲ್ಲಿ ಯಾವುದೇ ಪಾರದರ್ಶ ಕತೆ, ಉತ್ತರ ದಾಯಿತ್ವ ಇಲ್ಲದಿರು ವುದಂತೂ ನಿಚ್ಚಳ. ನಗದು, ಚುನಾವಣ ಬಾಂಡ್ ಮತ್ತು ವಿದೇಶಿ ಕಂಪೆನಿಗಳಿಂದ ಮಾತ್ರವಲ್ಲದೆ ಕಾರ್ಪೊರೆಟ್ ಕಂಪೆನಿಗಳು ಅಥವಾ ಉದ್ಯಮಿಗಳು ಸ್ಥಾಪಿಸುವ ಟ್ರಸ್ಟ್ ಮೂಲಕವೂ ದೇಣಿಗೆ ಸಂಗ್ರಹಿಸಲು ಅವಕಾಶವಿದೆ.
ಯಾವುದೇ ವ್ಯಕ್ತಿ 2,000 ರೂ. ಗಿಂತ ಹೆಚ್ಚಿನ ನಗದು ದೇಣಿಗೆಯನ್ನು ನೀಡುವಂತಿಲ್ಲ. 2 ಸಾವಿರ ರೂ. ಗಿಂತ ಹೆಚ್ಚಿನ ದೇಣಿಗೆಯನ್ನು ಡಿಡಿ, ಚೆಕ್, ಇ- ವರ್ಗಾವಣೆ ಮತ್ತು ಚುನಾವಣ ಬಾಂಡ್‌ಗಳ ಮೂಲಕ ಮಾತ್ರ ನೀಡಬಹುದು. ನಾಲ್ಕು ವರ್ಷಗಳ ಹಿಂದೆ ಇದರ ಮಿತಿ 20 ಸಾವಿರ ರೂ. ಗಳಾಗಿತ್ತು. 2018ರ ಹಣಕಾಸು ಮಸೂದೆ ಮೂಲಕ ರಾಜಕೀಯ ದೇಣಿಗೆ ಮಿತಿಯನ್ನು 2,000 ರೂ.ಗಳಿಗೆ ಇಳಿಸಲಾಗಿತ್ತು. ಹಿಂದಿನ ನಿಯಮಾವಳಿ ಪ್ರಕಾರ 20 ಸಾವಿರ ರೂ. ಗಿಂತ ಹೆಚ್ಚು ದೇಣಿಗೆ ನೀಡಿದರೆ ಜನಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಪಕ್ಷವು ಚುನಾವಣ ಆಯೋಗಕ್ಕೆ ದಾನಿಗಳ ಹೆಸರು ತಿಳಿಸಬೇಕಿತ್ತು. ಆದರೆ ಕುತೂಹಲಕಾರಿ ಸಂಗತಿಯೆಂದರೆ ಚುನಾವಣ ಬಾಂಡ್‌ಗಳ ಮೂಲಕ 20 ಸಾವಿರ ರೂ. ಗಿಂತ ಹೆಚ್ಚು ದೇಣಿಗೆ ನೀಡಿದವರ ಹೆಸರನ್ನೂ ಗೌಪ್ಯವಾಗಿ ಇಡಲಾಗಿದೆ. 2018ರ ಬಳಿಕ ಈ ಮಿತಿ 2,000 ರೂ. ಗೆ ನಿಗದಿಯಾಗಿದೆ. ಒಬ್ಬ ವ್ಯಕ್ತಿ ಒಂದು ಪಕ್ಷಕ್ಕೆ ಒಂದು ಲಕ್ಷ ರೂ. ನಗದು ಕೊಟ್ಟರೂ ದೇಣಿಗೆ ನೀಡಿದವರ ಹೆಸರನ್ನು ಚುನಾವಣ ಆಯೋಗಕ್ಕೆ ತಿಳಿಸುವುದಿಲ್ಲ. ಯಾಕೆಂದರೆ ಇಲ್ಲಿ ನಗದನ್ನು ತಲಾ 2,000 ರೂ. ನಂತೆ ಪ್ರತ್ಯೇಕ ದೇಣಿಗೆಯಾಗಿ ತೋರಿಸಲಾಗುತ್ತದೆ. ಇದರಿಂದ ದಾನಿಗಳನ್ನು ಹೆಸರಿಸುವ ಅಗತ್ಯ ಪಕ್ಷಗಳಿಗೆ ಇರುವುದಿಲ್ಲ. ನಗದು ದೇಣಿಗೆ ಮಿತಿಯನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿದ್ದರೂ ಇದು ಪರಿಣಾಮಕಾರಿ ಆಗಿಲ್ಲ. ಹೀಗಾಗಿ ನಗದು ರೂಪದಲ್ಲಿ ಪಡೆದ ದೇಣಿಗೆ ಎಲ್ಲಿಂದ ಬಂತು, ಯಾರು ನೀಡಿದರು ಎನ್ನುವುದನ್ನು ಗೌಪ್ಯವಾಗಿ ಇಡುವಲ್ಲಿ ರಾಜಕೀಯ ಪಕ್ಷಗಳು ಯಶಸ್ವಿಯಾಗಿವೆ.
Related Articles
Advertisement
ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ನಿಧಿಸಂಗ್ರಹಕ್ಕೆ ಪ್ರಮುಖವಾಗಿ 4 ಮಾರ್ಗಗಳಿವೆ.
- ನೇರವಾಗಿ ಜನರಿಂದ
- ದೇಶೀ ಕಾರ್ಪೋರೆಟ್ ಕಂಪೆನಿಗಳಿಂದ
- ವಿದೇಶಿ ಕಂಪೆನಿಗಳಿಂದ
- ಸಾರ್ವಜನಿಕ ಅಥವಾ ಸರಕಾರದ ನಿಧಿ ಮೂಲಕ
2021ರ ಸೆಪ್ಟಂಬರ್ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 2,829 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಇವುಗಳಲ್ಲಿ ಶೇ. 97ರಷ್ಟು ಮಾನ್ಯತೆರಹಿತ ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳು. ಅವುಗಳಿಗೆ ಯಾವುದೇ ನಿಗದಿತ ಚುನಾವಣ ಚಿಹ್ನೆ ಇಲ್ಲ. ಆದರೆ ನೋಂದಣಿಯಾದ ಎಲ್ಲ ಪಕ್ಷಗಳು ದೇಣಿಗೆ ಸ್ವೀಕರಿಸಲು ಅರ್ಹವಾಗಿರುತ್ತವೆ. ಚುನಾವಣ ಟ್ರಸ್ಟ್‌ಗಳ ಪಾಲು ಕಡಿಮೆ
ದೇಶದಲ್ಲಿ ಒಟ್ಟು 22 ಚುನಾವಣ ಟ್ರಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಅತ್ಯಂತ ಶ್ರೀಮಂತ ಮತ್ತು ಸಕ್ರಿಯವಾಗಿರುವುದು ಫ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್. ಕಂಪೆನಿಗಳು ಚುನಾವಣ ಟ್ರಸ್ಟ್‌ಗಳಿಗೆ ಹಣ ನೀಡುತ್ತವೆ. ಅನಂತರ ಈ ಟ್ರಸ್ಟ್‌ಗಳು ರಾಜಕೀಯ ಪಕ್ಷಗಳಿಗೆ ನೀಡುತ್ತವೆ. ಚುನಾವಣ ಟ್ರಸ್ಟ್‌ಗೆ ದೇಣಿಗೆ ನೀಡುವ ಕಂಪೆನಿಗೆ ಕನಿಷ್ಠ 3 ವರ್ಷವಾಗಿರಬೇಕು, ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಶೇ. 7.5ಕ್ಕಿಂತ ಹೆಚ್ಚು ಕೊಡುವಂತಿಲ್ಲ. ಖಾತೆಗಳಲ್ಲಿ ರಾಜಕೀಯ ದೇಣಿಗೆಗಳನ್ನು ತೋರಿಸಬೇಕು. ಇದಕ್ಕೆ ನಿರ್ದೇಶಕರ ಮಂಡಳಿಯ ಅನುಮೋದನೆಯೂ ಅಗತ್ಯ. ನಿಯಮ ಉಲ್ಲಂಘಿ ಸುವ ಕಂಪೆನಿಗಳು 5 ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಲ್ಲಿ ಚುನಾವಣ ಟ್ರಸ್ಟ್‌ಗಳ ಪಾಲು ಕಡಿಮೆ. ಚುನಾವಣ ಬಾಂಡ್
ಇದೊಂದು ರೀತಿಯಲ್ಲಿ ಬೇರರ್ ಚೆಕ್ ಇದ್ದಂತೆ. ಇದರಲ್ಲಿ ಖರೀದಿಸುವವರ ಹೆಸರು ಅಥವಾ ಸ್ವೀಕರಿಸುವ ಪಕ್ಷದ ಹೆಸರು ಇರುವುದಿಲ್ಲ. ಚುನಾವಣ ಬಾಂಡ್‌ಗಳ ಖರೀದಿಗೆ ಜನವರಿ, ಎಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ 10 ದಿನಗಳ ಕಾಲ ಕೇಂದ್ರ ಸರಕಾರ ಸಮಯ ನಿರ್ಧರಿಸುತ್ತದೆ. ಇದಕ್ಕಾಗಿ ದೇಶದಲ್ಲಿ 29 ಎಸ್‌ಬಿಐ ಶಾಖೆಗಳನ್ನು ನಿಗದಿಪಡಿಸಲಾಗಿದ್ದು ಈ ಪೈಕಿ ಹೆಚ್ಚಿನವು ರಾಜ್ಯಗಳ ರಾಜಧಾನಿಯಲ್ಲಿವೆ. ಲೋಕಸಭೆಗೆ ಚುನಾವಣೆ ನಡೆಯುವ ವರ್ಷದಲ್ಲಿ ಕೇಂದ್ರ ಸರಕಾರವು ಇದಕ್ಕಾಗಿ ಹೆಚ್ಚುವರಿ 30 ದಿನಗಳನ್ನು ನೀಡಬಹುದಾಗಿದೆ. ಯಾರು ಖರೀದಿಸಬಹುದು?
ಯಾವುದೇ ಭಾರತೀಯ ನಾಗರಿಕ, ಹಿಂದೂ ಅವಿಭಜಿತ ಕುಟುಂಬ, ಕಂಪೆನಿ, ಸಂಘಸಂಸ್ಥೆ, ಏಜೆನ್ಸಿ, ಏಕ ವ್ಯಕ್ತಿ ಅಥವಾ ಸ್ನೇಹಿತ, ಬಂಧುಗಳೊಂದಿಗೆ ಸೇರಿ ಈ ಚುನಾವಣ ಬಾಂಡ್‌ಗಳನ್ನು ಖರೀದಿಸಬಹುದು. ಇದರಲ್ಲಿ 1 ಸಾವಿರ, 10 ಸಾವಿರ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ. ಮೌಲ್ಯದ ಬಾಂಡ್‌ಗಳಿವೆ. ಪ್ರಜಾಪ್ರತಿನಿಧಿ ಕಾಯ್ದೆಯಡಿ ನೋಂದಣಿಯಾದ ರಾಜಕೀಯ ಪಕ್ಷ ಮಾತ್ರ ಇದನ್ನು ಸ್ವೀಕರಿಸಬಹುದು. ಆದರೆ ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಲ್ಲಿ ಆ ಪಕ್ಷವು ಕನಿಷ್ಠ ಶೇ. 1ರಷ್ಟು ಮತಗಳನ್ನಾದರೂ ಪಡೆದಿರಬೇಕು. ಹೀಗಾಗಿ ಹೊಸ ಮತ್ತು ಸಣ್ಣ ಪಕ್ಷಗಳಿಗೆ ಚುನಾವಣ ಬಾಂಡ್‌ಗಳ ಮೂಲಕ ದೇಣಿಗೆ ಪಡೆಯಲು ಸಾಧ್ಯವಿಲ್ಲ. ಚುನಾವಣ ಬಾಂಡ್ ಸ್ವೀಕರಿಸಿದ 15 ದಿನಗಳೊಳಗೆ ಅದನ್ನು ನಗದುಗೊಳಿಸದೇ ಇದ್ದಲ್ಲಿ ಈ ಹಣ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಜಮೆಯಾಗುತ್ತದೆ. ಗೌಪ್ಯ ದೇಣಿಗೆ?
ದೇಶದ ಪ್ರಮುಖ 5 ರಾಜಕೀಯ ಪಕ್ಷಗಳು ಸಂಗ್ರಹಿಸುವ ಒಟ್ಟು ದೇಣಿಗೆ ಮೊತ್ತದಲ್ಲಿ ಶೇ. 70- 80ರಷ್ಟು ಮೊತ್ತ ಚುನಾವಣ ಬಾಂಡ್‌ಗಳಿಂದಲೇ ಸಂಗ್ರಹ ವಾಗುತ್ತವೆ. ಇದರಲ್ಲಿ ಕೊಡುವವರು ಯಾರು ಎಂಬುದು ರಹಸ್ಯವಾಗಿರುವುದರಿಂದ ಶೇ. 70- 80ರಷ್ಟು ದೇಣಿಗೆಯ ಮೂಲವೇ ಗೊತ್ತಾಗುವುದಿಲ್ಲ. ಇದು ಕಪ್ಪು ಹಣ ವ್ಯವಹಾರಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಹೆಸರನ್ನು ಗೌಪ್ಯವಾಗಿಡುವುದಾದರೆ ಇದರ ಅಗತ್ಯವಾದರೂ ಏನು ಎನ್ನುವ ಪ್ರಶ್ನೆ ಆಗಾಗ ಸಾರ್ವಜನಿಕ ವಲಯ ದಿಂದ ಕೇಳಿಬರುತ್ತದೆ. ಈ ಹಿಂದೆ ಯಾವುದೇ ಕಂಪೆನಿಯು ಹಿಂದಿನ ತನ್ನ 3 ವರ್ಷಗಳ ನಿವ್ವಳ ಲಾಭದ ವಾರ್ಷಿಕ ಸರಾಸರಿಯ ಶೇ. 7.5ಕ್ಕಿಂತ ಹೆಚ್ಚು ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡಲು ಸಾಧ್ಯವಿರಲಿಲ್ಲ. ಆದರೆ ಚುನಾವಣ ಬಾಂಡ್ ಜಾರಿಯಾದ ಬಳಿಕ ಈ ನಿರ್ಬಂಧ ತೆಗೆದುಹಾಕಲಾಗಿದೆ. ಹೀಗಾಗಿ ದೇಣಿಗೆ ನೀಡಲು ಕಂಪೆನಿಯು ಕನಿಷ್ಠ 3 ವರ್ಷ ಹಳೆಯದಾಗಿರಬೇಕು ಮತ್ತು ಲಾಭದಾಯಕವಾಗಿರಬೇಕು ಎನ್ನುವ ನಿಯಮವಿಲ್ಲ. ಇದರಿಂದಾಗಿ ಹೊಸ ಮತ್ತು ಲಾಭದಾಯಕವಲ್ಲದ ಕಂಪೆನಿಯೂ ತನಗೆ ಬೇಕಾದಷ್ಟು ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡಬಹುದಾಗಿದೆ. ಈ ನಿಯಮವು ಕಪ್ಪು ಹಣ ಸಂಗ್ರಹ ಮತ್ತು ನಕಲಿ ಕಂಪೆನಿಗಳ ನಿರ್ಮಾಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಚುನಾವಣ ಬಾಂಡ್‌ಗಳಲ್ಲಿ ಪಾವತಿಸಿದ ಮೊತ್ತವನ್ನು ಕಂಪೆನಿಯ ಬ್ಯಾಲೆನ್ಸ್ ಶೀಟ್, ಆದಾಯ ತೆರಿಗೆ ರಿಟರ್ನ್, ಲಾಭ, ನಷ್ಟ ದಾಖಲೆಯಲ್ಲಿ ನಮೂದಿಸಲಾಗುತ್ತದೆ. ಆದರೆ ಅದನ್ನು ಯಾವ ಪಕ್ಷಕ್ಕೆ ನೀಡಲಾಗಿದೆ ಎಂಬುದರ ಉಲ್ಲೇಖ ಇರುವುದಿಲ್ಲ. ಚುನಾವಣ ಬಾಂಡ್‌ಗಳಿಗೆ ಪಾವತಿಸಿದ ಸಂಪೂರ್ಣ ಮೊತ್ತವು ಆದಾಯ ತೆರಿಗೆಯಿಂದ ಶೇ. 100ರಷ್ಟು ವಿನಾಯಿತಿಯನ್ನು ಹೊಂದಿರುತ್ತದೆ. ಆದಾಯ ತೆರಿಗೆಯಲ್ಲಿ ವಿನಾಯಿತಿ ಪಡೆಯಲು ರಾಜಕೀಯ ಪಕ್ಷಗಳ ಸಹಯೋಗದಿಂದ ಕಂಪೆನಿಗಳು ಈ ನಿಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಚುನಾವಣ ಬಾಂಡ್‌ಗಳನ್ನು ಜನರು ಗುಂಪಿನ ಮೂಲಕವೂ ಖರೀದಿ ಮಾಡಬಹುದು. ಹೀಗಿರುವಾಗ ಧಾರ್ಮಿಕ ಸಂಸ್ಥೆಗಳೂ ಚುನಾವಣ ಬಾಂಡ್‌ಗಳ ಮೂಲಕ ಪಕ್ಷಗಳಿಗೆ ದೇಣಿಗೆ ನೀಡಬಹುದು. ವಿದೇಶಗಳಿಂದ ದೇಣಿಗೆ
ವಿದೇಶಿ ನೆರವು ನಿಯಂತ್ರಣ ಕಾಯ್ದೆ (ಎಫ್ಸಿಆರ್‌ಎ)- 2010, ಹಣಕಾಸು ಕಾಯ್ದೆ ಸೆಕ್ಷನ್ 154, ಕಂಪೆನಿ ಕಾಯ್ದೆ 2013ರ ಸೆಕ್ಷನ್ 182 ಈ ಮೂರು ಕಾಯ್ದೆಗಳ ಮೂಲಕ ರಾಜಕೀಯ ಪಕ್ಷಗಳು ವಿದೇಶಗಳಿಂದ ದೇಣಿಗೆ ಪಡೆಯಲು ಮುಕ್ತ ಅವಕಾಶವನ್ನು ಪಡೆದುಕೊಂಡಿವೆ. 1976ರ ಎಫ್ಸಿಆರ್‌ಎ ಕಾಯ್ದೆ ರಾಜಕೀಯ ಪಕ್ಷಗಳು ವಿದೇಶಗಳಿಂದ ಪಡೆಯುವ ದೇಣಿಗೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿತ್ತು. 2004- 2009ರ ನಡುವೆ ವಿದೇಶಿ ಕಂಪೆನಿಯೊಂದರ ಅಂಗಸಂಸ್ಥೆಯು ಭಾರತದಲ್ಲಿ ನೋಂದಣಿಗೊಂಡಿದ್ದೇ ಮಾತ್ರವಲ್ಲದೆ ದೇಶದ ಪ್ರಮುಖ ಎರಡು ಪಕ್ಷಗಳಿಗೆ ದೇಣಿಗೆ ನೀಡಿತ್ತು. 2013ರಲ್ಲಿ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಎಫ್ಸಿಆರ್‌ಎ 1976ರ ಅಡಿಯಲ್ಲಿ ದಿಲ್ಲಿ ಹೈಕೋರ್ಟ್‌ನಲ್ಲಿ ಪಕ್ಷಗಳು ವಿದೇಶಿ ದೇಣಿಗೆ ತೆಗೆದುಕೊಳ್ಳುವುದರ ವಿರುದ್ಧ ಅರ್ಜಿ ಸಲ್ಲಿಸಿದರು. ಈ ಪ್ರಕರಣದಲ್ಲಿ ಹೈಕೋರ್ಟ್ ಎರಡು ರಾಜಕೀಯ ಪಕ್ಷಗಳನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಕ್ರಮಕೈಗೊಳ್ಳುವಂತೆ ಚುನಾವಣ ಆಯೋಗಕ್ಕೆ ಆದೇಶಿಸಿತ್ತು. ಆದರೆ 2016ರಲ್ಲಿ ಕೇಂದ್ರ ಸರಕಾರವು ಎಫ್ಸಿಆರ್‌ಎ ಕಾಯ್ದೆ 2010ರಲ್ಲಿನ ವಿದೇಶಿ ಕಂಪೆನಿಯ ವ್ಯಾಖ್ಯಾನವನ್ನೇ ಬದಲಾಯಿಸಿ ಇದು 2010ರಿಂದಲೇ ಅನ್ವಯಗೊಳ್ಳುತ್ತದೆಂದು ಪರಿಗಣಿಸಲಾಗಿದೆ ಎಂದು ಘೋಷಿಸಿತು. ಇದರೊಂದಿಗೆ ಈ ಎರಡೂ ಪಕ್ಷಗಳೂ ಹೈಕೋರ್ಟ್ ಆದೇಶದಿಂದ ಮುಕ್ತವಾಯಿತು. ಕಾಯ್ದೆ ಬದಲಾವಣೆಯ ಅನಂತರ ಯಾವುದೇ ಕಂಪೆನಿ ಶೇ.50ಕ್ಕಿಂತ ಹೆಚ್ಚು ವಿದೇಶಿ ಒಡೆತನದಲ್ಲಿದ್ದರೆ ಅದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಸಾಧ್ಯವಿಲ್ಲ. ಇದೇ ವೇಳೆ ಕೆಲವೊಂದು ಕ್ಷೇತ್ರಗಳಲ್ಲಿ ವಿದೇಶಿ ಕಂಪೆನಿಗಳ ಹೂಡಿಕೆಗೆ ಶೇ. 70ರ ವರೆಗೆ ವಿನಾಯಿತಿ ಇದೆ. ಒಂದು ವೇಳೆ ದೇಶೀಯ ಕಂಪೆನಿಗಳಲ್ಲಿ ವಿದೇಶಿ ಕಂಪೆನಿಯ ಹೂಡಿಕೆಯ ಪಾಲು ಶೇ. 50ಕ್ಕಿಂತ ಅಧಿಕವಾಗಿದ್ದರೂ ಆ ಕಂಪೆನಿಗಳು ದೇಣಿಗೆ ನೀಡಬಹುದಾಗಿದೆ. 2017ರಲ್ಲಿ ಹೊಸದಿಲ್ಲಿ ಹೈಕೋರ್ಟ್ ಈ ಬದಲಾವಣೆಯನ್ನು ತಿರಸ್ಕರಿಸಿತ್ತು. ಆದರೆ 2018ರಲ್ಲಿ ಕೇಂದ್ರ ಸರಕಾರವು 1976ರಿಂದಲೇ ಎಫ್ಸಿಆರ್‌ಎ ಕಾಯ್ದೆಯನ್ನು ಬದಲಾಯಿಸಿತು. ಹೀಗಾಗಿ ವಿದೇಶಿ ಕಂಪೆನಿಗಳಿಂದ ಪಡೆದ ಎಲ್ಲ ರಾಜಕೀಯ ದೇಣಿಗೆಗಳನ್ನು ಕಾನೂನುಬದ್ಧಗೊಳಿಸಲಾಗಿದೆ. ಚುನಾವಣ ಬಾಂಡ್ ಮಾರಾಟ
(2018- 2021ರ ವರೆಗೆ)
– ಮಾರಾಟ ಮಾಡಲಾದ ಚುನಾವಣ ಬಾಂಡ್‌ನ ಒಟ್ಟು ಮೌಲ್ಯ- 7,994 ಕೋ.ರೂ.
– ನಗದೀಕರಿಸಿದ ಚುನಾವಣ ಬಾಂಡ್‌ನ ಒಟ್ಟು ಮೊತ್ತ – 7,974 ಕೋ.ರೂ.