Advertisement

ದೇಗುಲಗಳ ದೇಣಿಗೆ: ಸರ್ಕಾರಕ್ಕೆ ಹೈ ಸೂಚನೆ

06:45 AM Sep 25, 2018 | Team Udayavani |

ಬೆಂಗಳೂರು: ಮುಜರಾಯಿ ಇಲಾಖೆಗೊಳಪಟ್ಟ ಕೆಲವೇ ಆಯ್ದ ದೇವಾಲಯಗಳ ದೇಣಿಗೆ ಹಣವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ವರ್ಗಾಯಿಸಲು ಯಾವ ಮಾನದಂಡಗಳನ್ನು ಆಧರಿಸಿ ಆದೇಶ ಹೊರಡಿಸಲಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೇಯೇ ಅನ್ನುವ ಬಗ್ಗೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್‌ ಸೋಮವಾರ ಸರ್ಕಾರಕ್ಕೆ ಸೂಚನೆ ನೀಡಿದೆ.

Advertisement

ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ಪರಿಹಾರಕ್ಕೆ ಮುಜರಾಯಿ ಇಲಾಖೆಯ ಆಯ್ದ 81 ದೇವಾಲಯಗಳ 12.35 ಕೋಟಿ ರೂ. ದೇಣಿಗೆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಆ.21ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹೇಮಾ ನಾಯ್ಡು ಹಾಗೂ ವಿ.ಆರ್‌.ಸಂಪತ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ದೇವಾಲಯದ ಹಣವನ್ನು ಈ ರೀತಿ ಪರಿಹಾರ ನಿಧಿಗೆ ಬಳಸಿಕೊಳ್ಳಲು ಯಾವ ಕಾನೂನಿನಲ್ಲಿ ಅವಕಾಶವಿದೆ ಅನ್ನುವುದು ಮುಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿತು.

ಮುಜರಾಯಿ ಇಲಾಖೆ ಎಲ್ಲ ದೇವಾಲಯಗಳನ್ನು ಬಿಟ್ಟು ಕೇವಲ ಆಯ್ದ 81 ಅಧಿಸೂಚಿತ ದೇವಾಲಯಗಳ ದೇಣಿಗೆ ಹಣವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಬಳಸಿಕೊಳ್ಳಲು ಮುಂದಾಗಿರು ಸರ್ಕಾರದ ನಡೆ ಕೆಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಡುವಂತಿದೆ. ಅಲ್ಲದೇ ಇದು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಕೇವಲ 81 ದೇವಾಲಯಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ದೇವಾಲಯಗಳ ಆಯ್ಕೆಗೆ ಸರ್ಕಾರ ಅನುಸರಿಸಿರುವ ಮಾನದಂಡಗಳೇನು? ಎಂಬುದನ್ನು ಸ್ಪಷ್ಟಪಡಿಸಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿತು.

ಸರ್ಕಾರ ಹೊರಡಿಸಿರುವ ಆದೇಶ “ಕರ್ನಾಟಕ ಧಾರ್ಮಿಕ ದತ್ತಿ ಹಾಗೂ ಧರ್ಮಾದಾಯ ಕಾಯ್ದೆ-1978ರ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾಯ್ದೆಯಲ್ಲಿ ಉಲ್ಲೇಖೀಸಲಾಗಿರುವ ಉದ್ದೇಶಗಳ ಹೊರತಾಗಿ ದೇವಾಲಯಗಳ ದೇಣಿಗೆ ನಿಧಿಯನ್ನು ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲ. ಅಲ್ಲದೇ ಕೇವಲ 81 ದೇವಾಲಯಗಳಿಗೆ ಸೀಮಿತವಾಗಿ ಆದೇಶ ಹೊರಡಿಸಿರುವ ಸರ್ಕಾರದ ಉದ್ದೇಶವೇನೆಂದು ಗೊತ್ತಾಗುತ್ತಿಲ್ಲ. ಆದ್ದರಿಂದ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ವಕೀಲ ಪವನ್‌ಚಂದ್ರ ಶೆಟ್ಟಿ ವಾದ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next