Advertisement

ಪ್ಲಾಸ್ಟಿಕ್‌ ಸಂಗ್ರಹಿಸಿದರೆ ಇಲ್ಲಿ ಊಟ, ಬ್ರೇಕ್‌ ಫಾಸ್ಟ್‌

09:10 AM Jul 20, 2019 | sudhir |

ಮಣಿಪಾಲ: ಪ್ಲಾಸ್ಟಿಕ್‌ ಮನೆಗೆ ಬಂತೇನೋ ನಿಜ, ಆದರೆ ಅದನ್ನು ವಿಲೇವಾರಿ ಮಾಡೋದೇ ದೊಡ್ಡ ತಲೆ ನೋವು. ಅಂಗಡಿಗಳಿಗೆ ದಿನಸು ಅಥವ ಇತರ ಸಾಮಗ್ರಿಗಳ ಅಗತ್ಯಕ್ಕೆ ತೆರಳಿದಾಗ‌ ಬಹುತೇಕರು ಕೈ ಚೀಲ ತೆಗೆದುಕೊಂಡು ಹೋಗಲು ಮರೆತು ಬಿಡುತ್ತಾರೆ. ಇದರಿಂದ ಅಂಗಡಿಯಾತನೇ ಪ್ಲಾಸ್ಟಿಕ್‌ ಚೀಲವನ್ನು ಕೈಗಿತ್ತು ಅದರಲ್ಲಿ ಸಾಮಗ್ರಿ ತುಂಬಿಸಿ ಕೊಡುತ್ತಾನೆ, ಅಂಗಡಿಯಾತನಿಗೂ, ಗ್ರಾಹನಿಗೂ ಇಲ್ಲಿ ಬೇರೆ ಆಯ್ಕೆ ಇಲ್ಲ.

Advertisement

ಹೀಗೆ ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಮನೆಯಲ್ಲಿ ಪ್ಲಾಸ್ಟಿಕ್‌ಗಳು ಬಂದು ತುಂಬುತ್ತಲೆ ಇರುತ್ತದೆ. ಹಾಗಾದರೆ ಇವುಗಳನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಮಲೆಗಾಲದಲ್ಲಿ ನೀರಿಗೆ ಬಿಡುವವರು ಕೆಲವರಾದರೆ, ಬೆಂಕಿಗೆ ಸುಡುವವರು ಹಲವರು. ಇನ್ನು ನಗರ ಪಟ್ಟಣಗಳಲ್ಲಿ ಸ್ಥಳೀಯಾಡಳಿತಗಳ ವಾಹನಗಳು ಬಂದು ತುಂಬಿಸಿಕೊಂಡು ಹೋಗುತ್ತದೆ. ನಾವು ಅದಕ್ಕೆ ನಿಗದಿ ಹಣವನ್ನು ನೀಡಿದರೆ ಆಯ್ತು. ಇಷ್ಟಕ್ಕೆ ಮನೆಯವರ ಪಾತ್ರ ಮುಗಿಯಿತು.

ಇನ್ನು ಪ್ರತಿ ಮನೆ, ನಗರಗಳಿಂದ ತ್ಯಾಜ್ಯ ರೂಪದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿದ ಸ್ಥಳೀಯಾಡಳಿತ ಅದನ್ನು ಕೊಂಡು ಹೋಗಿ ಒಂದು ಕಡೆ ಡಂಪ್‌ ಮಾಡಿ ಬಿಡುತ್ತಾರೆ. ಇದರಿಂದ ತ್ಯಾಜ್ಯರೂಪದ ಪ್ಲಾಸ್ಟಿಕ್‌ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರವಾಯಿತೇ ಹೊರತು ವಿಲೇವಾರಿ ಮಾತ್ರ ಆಗಿಲ್ಲ.

ಇದಿಷ್ಟು ಒಂದು ಕಥೆ…
ಇನ್ನು ಒಂದು ಕಡೆ ಬಡವರು ಊಟಕ್ಕೆ ಹರಸಾಹಸಪಡಬೇಕಾದ ಸನ್ನಿವೇಶ ದೇಶದ ಕೆಲವು ಕಡೆಗಳಲ್ಲಿ ಇನ್ನೂ ಇದೆ. ಒಂದು ವೇಳೆ ಪ್ಲಾಸ್ಟಿಕ್‌ ತಿಂದು ಹೊಟ್ಟೆ ತುಂಬಿಸಿಕೊಳ್ಳಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಪ್ರಶ್ನೆ ಕೆಲವರಿಗಾದರೂ ಕಾಡಬಹುದು.

ಉತ್ತರ ಭಾರತದ ಈ ಒಂದು ರಾಜ್ಯ ಪ್ಲಾಸ್ಟಿಕ್‌ ಮತ್ತು ಬಡತನದ ಸಮಸ್ಯೆಯನ್ನು ಒಂದೇ ಕಲ್ಲಿನಿಂದ ಹೊರೆದುರುಳಿಸುವ ಯೋಜನೆ ಹಾಕಿಕೊಂಡಿದ್ದು, ಕಾರ್ಯಗತವೂ ಆಗಿದೆ. ಹಸಿದವರಿಗೆ ಅನುಕೂಲ ಮಾಡಿಕೊಡುವ ಯೋಜನೆಯೊಂದನ್ನು ಪರಿಚಯಿಸಿದೆ. ಹಾಗಾದರೆ ಪ್ಲಾಸ್ಟಿಕ್‌ ತಿಂದು ಬದುಕಬಹುದಾ? ಅಲ್ಲ. ಛತ್ತೀಘಡ್‌ ನ‌ ಸರ್ಗುಜಾ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿಕೊಟ್ಟರೆ ಊಟ ಉಚಿತವಾಗಿ ದೊರೆಯಲಿದೆ. ಜಿಲ್ಲೆಯ ಅಂಬಿಕಾಪುರ್‌ ನಗರದಲ್ಲಿ ವಿಶೇಷ ಕಾರ್ಯವೊಂದು ನಡೆಯುತ್ತಿದೆ.

Advertisement

ಏನದು ಯೋಜನೆ?
ಜಿಲ್ಲೆಯ ಮಹಾನಗರ ಪಾಲಿಕೆ ಅಧಿಕಾರಿಗಳು ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಚಿಂದಿ ಹಾಯುವವರು, ನಿರ್ಗತಿಕರು ಅಂಬಿಕಾಪುರ ನಗರದಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿಕೊಟ್ಟರೆ ಅದಕ್ಕೆ ಪ್ರತಿಯಾಗಿ ಉಚಿತ ಆಹಾರವನ್ನು ನೀಡಲಾಗುತ್ತದೆ. 1 ಕೆ.ಜಿ. ಪ್ಲಾಸ್ಟಿಕ್‌ ಸಂಗ್ರಹ ಮಾಡಿದರೆ ಊಟ, ಅರ್ಧ ಕೇಜಿ ಪ್ಲಾಸ್ಟಿಕ್‌ ಸಂಗ್ರಹಿಸಿದವರಿಗೆ ಉಪಹಾರವನ್ನು ಉಚಿತವಾಗಿ ಪೂರೈಸಲಾಗುತ್ತದೆ.

ಇದಕ್ಕಾಗಿ ಸಿಟಿ ಬಸ್‌ ಸ್ಟಾಂಡ್‌ ಪಕ್ಕದಲ್ಲೇ ಕ್ಯಾಂಟೀನ್‌ ತೆರೆಯಲಾಗಿದೆ. ಈ ರೀತಿಯಾಗಿ ಸಂಗ್ರಹಿಸಿದ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಿಸಲಾಗುತ್ತದೆ. ಈಗಾಘಲೆ ಗಾಡ್‌ಪುರ್‌ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಮರು ಬಳಸಿ ರಸ್ತೆಯನ್ನು ನಿರ್ಮಿಸಿತ್ತು.

ಪಾಲಿಕೆ ಆಹಾರದ ಜತೆಗೆ 100 ನಿರ್ಗತಿಕರಿಗೆ ವಸತಿಯನ್ನೂ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದೆ. ಆಹಾರ ಪೂರೈಕೆಗಾಗಿ ಪಾಲಿಕೆ 5.5 ಲಕ್ಷ ರೂ. ಅನ್ನು ತನ್ನ ಬಜೆಟ್‌ ನಲ್ಲಿ ಮೀಸಲಿಟ್ಟಿದೆ. ಈ ಪ್ಲಾಸ್ಟಿಕ್‌ ನಿಂದ ನಗರವನ್ನು ಮುಕ್ತಗೊಳಿಸುವ ಯೋಜನೆ ಇದಾಗಿದ್ದು, ಸ್ವಚ್ಛ ಭಾರತ ಮಿಶನ್‌ನಲ್ಲಿ ಇದು ಸೇರಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next