ಉಡುಪಿ: ಒಬ್ಬ ರಕ್ತದಾನಿಯಿಂದ 3 ಜನರ ಜೀವ ಉಳಿಸಲು ಸಾಧ್ಯ. ನಿರಂತರವಾಗಿ ರಕ್ತದಾನ ಮಾಡುವುದರಿಂದ ಹಲವರ ಜೀವ ಉಳಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬಹುದಾದ ಸಾಮಾಜಿಕ ಕಾರ್ಯವೆಂದರೆ ರಕ್ತದಾನ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದರು.
ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯ ಸರಕಾರಿ ನೌಕರರ ಸಂಘ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರ, ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ ಗಂಗೊಳ್ಳಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರ. ದ. ಕಾಲೇಜು ಅಜ್ಜರಕಾಡು, ಯುವ ರೆಡ್ ಕ್ರಾಸ್ ಘಟಕ, ಸರಕಾರಿ ಪಾಲಿಟೆಕ್ನಿಕ್, ಸ್ನೇಹ ಟುಟೋರಿಯಲ್ ಕಾಲೇಜು ಉಡುಪಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸಮ್ಮಾನಿಸಲಾಯಿತು. ಜಿಲ್ಲಾ ಖಜಾನಾಧಿಕಾರಿ ಮಾಧವ ಹೆಗ್ಡೆ ಸಹಿತ ವಿವಿಧ ಇಲಾಖೆಯ ಸರಕಾರಿ ನೌಕರರು ಮತ್ತು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹಣ್ಯ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ| ಮಧುಸೂದನ್ ನಾಯಕ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಸ.ಮ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್, ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಸಿ.ಪಿ. ಗಣಪತಿ, ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘದ ಅಧ್ಯಕ್ಷ ದಿವಾಕರ ಖಾರ್ವಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್ ಅಧ್ಯಕ್ಷ ನಾರಾಯಣ ಕುಡ್ವ, ಸ್ನೇಹ ಟ್ಯುಟೋರಿಯಲ್ ಪ್ರಾಂಶುಪಾಲ ಉಮೇಶ್ ನಾಯಕ್, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕಿರಣ್ ಹೆಗ್ಡೆ, ಜಿಲ್ಲಾ ಪ್ರ. ಕಾರ್ಯದರ್ಶಿ ಅರುಣ ಲೋಕರೆ, ಖಜಾಂಚಿ ಬಿ. ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.