ಮೈಸೂರು: ರಕ್ತದಾನ ಮಾಡುವ ಮೂಲಕ ಆಪತ್ತಿನಲ್ಲಿರುವ ಜೀವ ಉಳಿಸುವುದು ಕರ್ತವ್ಯದ ಜತೆಗೆ ಮಾನವೀಯತೆಯೂ ಆಗಿದೆ ಎಂದು ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಹೇಳಿದರು. ಕೇಂದ್ರೀಯ ಲೋಕೋಪಯೋಗಿ ಇಲಾಖೆಯ 165ನೇ ದಿನಾಚರಣೆ ಅಂಗವಾಗಿ ಸಿದ್ಧಾರ್ಥ ನಗರದಲ್ಲಿರುವ ಸಿಪಿಡಬ್ಲೂಡಿ ಸಂಕೀರ್ಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೋ ಸಂದರ್ಭದಲ್ಲಿ ಉಂಟಾಗುವ ಅನಾಹುತ, ಅಪತ್ತಿನ ಕಾಲದಲ್ಲಿ ರಕ್ತದಾನ ಮಾಡಿ ಅಮೂಲ್ಯ ಜೀವ ಉಳಿಸೋದು ಎಲ್ಲರ ಕರ್ತವ್ಯದ ಜತೆಗೆ ಮಾನವೀಯತೆ ಕೆಲಸವಾಗಿದೆ. ಹಿಂದೆಲ್ಲಾ ರಕ್ತದಾನ ಮಾಡಲು ಕೆಲವರು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಒಂದೊಂದು ಹನಿ ರಕ್ತದಿಂದ ಪ್ರಾಣ ಉಳಿಸಬಹುದು. ಸಾರ್ವಜನಿಕರಲ್ಲಿ ಅರಿವು ಮೂಡಿದ ಬಳಿಕ ಸಾಕಷ್ಟು ಜನರು ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕೇಂದ್ರೀಯ ಲೋಕೋಪಯೋಗಿ ಇಲಾಖೆ, ಕಟ್ಟಡಗಳ ವಿನ್ಯಾಸ- ನಿರ್ಮಾಣದ ವಿಚಾರದಲ್ಲಿ ಬಹಳಷ್ಟು ಗಮನ ಸೆಳೆದಿದೆ. ಇಂದು ಎಂಜಿನಿಯರಿಂಗ್ ಮುಗಿಸಿ ಹೊರ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಸಮಸ್ಯೆ ಇದೆ. ಇದನ್ನು ಹೋಗಲಾಡಿಸಲು ಇಂತಹ ಸಂಸ್ಥೆ ಮುಂದಾಗಬೇಕು ಎಂದರು. ಕೆ.ಆರ್.ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ.ಮಂಜುನಾಥ್ ಮಾತನಾಡಿ, ರಕ್ತವನ್ನು ಸಂಗ್ರಹಿಸಿಕೊಂಡು ಮೂರು ವಿಭಾಗದಲ್ಲಿ ಸಂಗ್ರಹ ಮಾಡಲಾಗುವುದು.
ಒಂದು ಬಾರಿ ರಕ್ತ ಕೊಟ್ಟರೆ ಮೂರು ತಿಂಗಳಲ್ಲಿ ಅದು ಮರು ವೃದ್ಧಿಯಾಗಲಿದೆ. ಹಾಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು. ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ ಕಾಯಿಲೆ ಬಂದಾಗ ರಕ್ತದ ಬೇಡಿಕೆ ಹೆಚ್ಚು ಬರಲಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ ಸಹಕಾರಿಯಾಗಲಿದೆ ಎಂದರು.
ಸಿಪಿಡಬ್ಲೂಡಿ ಮುಖ್ಯ ಎಂಜಿನಿಯರ್ ಡಿ.ಎಸ್.ನಾಯಕ್ ಮಾತನಾಡಿ, ಕೇಂದ್ರೀಯ ಲೋಕೋಪಯೋಗಿ ಇಲಾಖೆಯು ಆರಂಭವಾಗಿ 165 ವರ್ಷದ ನೆನಪಿಗಾಗಿ ಸರ್ಕಾರದ ಅಂಗಸಂಸ್ಥೆಗಳ ನೆರವಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು. ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಕೆ.ಬಿ.ಗುರುಮೂರ್ತಿ, ಕಾರ್ಯದರ್ಶಿ ಮಹದೇವಪ್ಪ, ಜಿಎಸ್‌ಟಿ ಸಹಾಯಕ ಆಯುಕ್ತ ವೈ.ಸಿ.ಎಸ್.ಸ್ವಾಮಿ ಹಾಜರಿದ್ದರು.