ಕೆ.ಆರ್.ಪೇಟೆ: ಆರೋಗ್ಯವಂತ ಪ್ರತಿಯೊಬ್ಬರ ವ್ಯಕ್ತಿಯೂ 6 ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ರಕ್ತದ ಸಮಸ್ಯೆಯಿಂದ ಸಾಯಬಹುದಾದ ಪ್ರಾಣಗಳನ್ನು ಉಳಿಸಲು ಕೈಜೋಡಿಸಬೇಕು ಎಂದು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಆಶಾ ಕಾಮತ್ ಮನವಿ ಮಾಡಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಹಕ್ಕೆ ಅಗತ್ಯವಾಗಿ ರಕ್ತವು ಬೇಕಾಗಿದೆ ಆದರೆ ನಿರ್ದಿಷ್ಟ ಪ್ರಮಾಣಕ್ಕಿಂತ ರಕ್ತ ಕಡಿಮೆಯಾದರೆ ಅಥವಾ ಅಪಘಾತದಲ್ಲಿ ರಕ್ತಸ್ರಾವವಾದರೆ ಸಾವುಸಂಭಿವಿಸುತ್ತದೆ. ಆ ಸಮಯದಲ್ಲಿ ತಕ್ಷಣ ರಕ್ತವನ್ನು ನೀಡಿದರೆ ತೊಂದರೆಯಲ್ಲಿರುವ ವ್ಯಕ್ತಿಯನ್ನು ಬದುಕಿಸಲು ಸಾಧ್ಯ. ಇಂತಹ ರಕ್ತವು ಮಾರುಕಟ್ಟೆಯಲ್ಲಿ ದೊರೆಯುವ ವಸ್ತುವಲ್ಲ, ಜೊತೆಗೆ ರಕ್ತದ ಬದಲು ಯಾವುದೇ ಚಿಕಿತ್ಸೆ ನೀಡಿದರೂ ವ್ಯಕ್ತಿಯನ್ನು ಉಳಿಸಲು ಸಾಧ್ಯವಿಲ್ಲ.
ಮಂಡ್ಯದ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತನಿಧಿ ಕೇಂದ್ರದ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನಮ್ಮ ಕಾಲೇಜಿಗೆ ಬಂದು ರಕ್ತದಾನ ಶಿಬಿರವನ್ನು ಆಯೋಜಿಸಿ ನಮ್ಮ ಕಾಲೇಜಿನ ಯುವಕ-ಯುವತಿಯರಿಗೆ ರಕ್ತದಾನದ ಮಹತ್ವ ಹಾಗೂ ರಕ್ತದಾನವನ್ನು ಏಕೆ ಮಾಡಬೇಕೆಂಬ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ವಿಶ್ವರಾಜ್ ಮಾತನಾಡಿ, ನಮ್ಮ ದೇಹದಲ್ಲಿ ಅಗತ್ಯ ಪ್ರಮಾಣದಷ್ಟು ರಕ್ತವಿಲ್ಲದೇ ರಕ್ತಹೀನತೆಯಿಂದ ಅನಿಮೀಯ ಸಂಭವಿಸಿದರೆ ನಾವು ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯ ಜತೆಗೆ ನಮ್ಮ ದೇಹಕ್ಕೆ ಹೊಂದುವಂಥ ರಕ್ತವನ್ನು ದಾನಿಗಳ ಮೂಲಕ ಪಡೆದುಕೊಂಡು ನಮ್ಮ ದೇಹದೊಳಕ್ಕೆ ಹಾಕಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಆದ್ದರಿಂದ ಯುವಜನರು ಪ್ರತೀ 6 ತಿಂಗಳಿಗೊಮ್ಮೆ ದೇಹದ ದೈಹಿಕ ಸಾಮರ್ಥ್ಯ ಹಾಗೂ ಆರೋಗ್ಯಕ್ಕೆ ಅನುಸಾರವಾಗಿ ರಕ್ತದಾನ ಮಾಡಬೇಕು. ರಕ್ತದಾನದ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ನೌಕರರ ಸಂಘದ ನಿರ್ದೇಶಕ ರಮೇಶ್, ಮಂಡ್ಯದ ರಕ್ತನಿಧಿ ಕೇಂದ್ರದ ವೈದ್ಯರು, ಸಿಬ್ಬಂದಿ, ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಕೌನ್ಸೆಲರ್ ಸತೀಶ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.