ನರೇಗಲ್ಲ: ರಕ್ತದಾನ ಮಹಾದಾನವಾಗಿದ್ದು, ಅರ್ಹರು ರಕ್ತದಾನ ಮಾಡುವುದರ ಮೂಲಕ ಇನ್ನೊಂದು ಜೀವ ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಯುವಕರು ಮುಂದೆ ಬಂದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಜಿಲ್ಲಾ ಜಿಮ್ಸ್ ವೈದ್ಯಾಧಿಕಾರಿ ಡಾ| ಸಂಪತ್ತಕುಮಾರ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ರೋಣ ರಸ್ತೆಯಲ್ಲಿರುವ ಸಿಮನ್ಸ್ ಗಮೇಶಾ ರೀನಿವೆಬಲ್ ಎನರ್ಜಿ ಸಂಸ್ಥೆ ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರದಿಂದ ಗುರುವಾರ ರಕ್ತ ದಿನಚಾರಣೆ ನಿಮಿತ್ತ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನದಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುವುದರಿಂದ ಉತ್ತಮ ಆರೋಗ್ಯವೂ ದೊರೆಯುತ್ತದೆ. ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಇದು ಸಹಕಾರಿಯಾಗಿದ್ದು, ಶೇ. 89ರಷ್ಟು ಪ್ರಮಾಣದಲ್ಲಿ ಹೃದಯಾಘಾತವನ್ನು ತಡೆಯಲು ಸಾಧ್ಯವಾಗುತ್ತದೆ. ರಕ್ತವನ್ನು ದಾನ ಮಾಡಿದರೆ ಪರೋಕ್ಷವಾಗಿ ಹಲವಾರು ಜೀವ ಉಳಿಸಿದಂತಾಗುತ್ತದೆ. ಆರೋಗ್ಯವಂತರು ವರ್ಷಕೊಮ್ಮೆ ರಕ್ತದಾನ ಮಾಡಲು ಅರ್ಹರಾಗಿದ್ದು, ರಕ್ತದಾನದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಈ ವೇಳೆ 80ಕ್ಕೂ ಅಧಿಕ ಯುವಕರು ರಕ್ತದಾನ ಮಾಡಿದರು. ಜಿಮ್ಸ್ ವೈದ್ಯಾಧಿಕಾರಿ ಡಾ| ಸುಶ್ಮಿತಾ ಎಸ್., ಎಸ್.ಬಿ. ಪಾಟೀಲ, ಚನ್ನಪ್ಪ ಎಚ್, ವಿರೂಪಾಕ್ಷಯ್ಯ ಎಸ್., ಮಹಾದೇವಸ್ವಾಮಿ ಎಚ್., ನಾರಾಯಣಸ್ವಾಮಿ, ಮಂಜುನಾಥ ಶಿದ್ನೇಕೊಪ್ಪ, ಬಸವರಾಜ ತಳವಾರ, ಗಿರೀಶ ನಿರಲೋಟಿ, ಶಂಕರಲಿಂಗ ಎಸ್., ಶಿವಕುಮಾರ ಸಂಗನಾಳ, ಆನಂದ ಬಿಚಕಲ್ಲ್, ಮಂಜುನಾಥ ಜಂತ್ಲಿ, ಶರತ್ ಮೂಲಿಮನಿ, ಈಶಯ್ಯ ಕಲ್ಲಕಬಂಡಿ, ಮಹೇಶ ಮಾರನಬಸರಿ, ಮಾರುತಿ ಟಿ., ರಾಕೇಶ ಸೇರಿದಂತೆ ಸಿಮನ್ಸ್ ಗಮೇಶಾ ರೀನಿವೆಬಲ್ ಎನರ್ಜಿ ಸಂಸ್ಥೆ ಸಿಬ್ಬಂದಿ ಪಾಲ್ಗೊಂಡಿದ್ದರು.