Advertisement

ಅಮೆರಿಕದಲ್ಲಿ ನೆಲೆ ನಿಲ್ಲಲು ಮೆರಿಟ್‌ ಮಾನದಂಡ!

03:45 AM Mar 02, 2017 | Team Udayavani |

ವಾಷಿಂಗ್ಟನ್‌: ಭಾರತೀಯ ಮೂಲದ ಪ್ರತಿಭಾನ್ವಿತ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಇನ್ನು ಅಭಯ. ಮೆರಿಟ್‌ (ಅರ್ಹತೆ) ಆಧಾರದ ಮೇಲೆ ಅಮೆರಿಕ ಅಧ್ಯಕ್ಷರು ಪರಿಷ್ಕೃತ ವಲಸೆ ನೀತಿಯನ್ನು ಜಾರಿಗೆ ತಂದಿದ್ದು, ಹೈಟೆಕ್‌ ಉದ್ಯೋಗಿಗಳಿಗೆ ಅಮೆರಿಕ ಮುಕ್ತ ಸ್ವಾಗತ ಕೋರಿದೆ. ಅಲ್ಲದೆ, ಮೆರಿಟ್‌ ಇದ್ದವರಿಗೆ ಬಹುಬೇಗ ಗ್ರೀನ್‌ಕಾರ್ಡ್‌ ಸೌಲಭ್ಯವನ್ನೂ ಕಲ್ಪಿಸಲೂ ಅಮೆರಿಕ ಮುಂದಾಗಿದೆ.

Advertisement

ಅಮೆರಿಕದ ಕಾಂಗ್ರೆಸ್‌ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಲವು ಹೊಸತುಗಳನ್ನು ಪ್ರಕಟಿಸಿದರು. ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಅರ್ಹತೆ ಆಧಾರದ ವಲಸೆ ನೀತಿಯಿದೆ. ಅದನ್ನೇ ಅಮೆರಿಕ ಈಗ ಅಳವಡಿಸಿಕೊಳ್ಳುತ್ತಿದೆ. ಇದರಿಂದ ದೇಶಕ್ಕೆ ಮಿಲಿಯನ್‌ ಡಾಲರ್‌ಗಟ್ಟಲೆ ಹಣ ಉಳಿತಾಯವಾಗಲಿದೆ ಎನ್ನುವುದು ಟ್ರಂಪ್‌ ವಾದ. ಅಮೆರಿಕ ಸೇರುವ ವಲಸಿಗರಲ್ಲಿ ಹೆಚ್ಚು ಪದವೀಧರರನ್ನು ಹೊಂದಿದ ಏಕೈಕ ದೇಶ ಭಾರತವೇ ಆಗಿದ್ದು, ನಮ್ಮ ಹೈಟೆಕ್‌ ಉದ್ಯೋಗಿಗಳಿಗೆ ಇದು ಸಿಹಿಸುದ್ದಿಯೇ.

ಮೆರಿಟ್‌ ಆಧಾರ ಏಕೆ?:  ಪ್ರಸ್ತುತ ಅಮೆರಿಕದಲ್ಲಿ ಅಲ್ಪ ಅರ್ಹತೆಯುಳ್ಳವರಿಗೂ ಸ್ವಾಗತವಿದೆ. ಈ ಕಾರಣದಿಂದ ಸಾವಿರಾರು ಲ್ಯಾಟಿನ್‌ ಅಮೆರಿಕನ್ನರು ಪ್ರತಿವರ್ಷ ಅಮೆರಿಕ ಸೇರುತ್ತಿದ್ದಾರೆ. ಇವರಿಂದಲೇ ಕ್ರೈಮ್‌ ಹೆಚ್ಚಾಗುತ್ತಿದೆ ಎನ್ನುವುದು ಟ್ರಂಪ್‌ ಆರೋಪ. ಮೆರಿಟ್‌ ಆಧಾರದಲ್ಲಿ ವಲಸೆ ನೀತಿ ಜಾರಿಯಾದರೆ ಅವರಿಗೆ ತಡೆಯಾಗುತ್ತದೆ. ಅಲ್ಪ ಮೆರಿಟ್‌ ಉದ್ಯೋಗಿಗಳಿಂದ ದೇಶದ ಆರ್ಥಿಕತೆ ಸುಧಾರಿಸುವುದಿಲ್ಲ ಎನ್ನುವುದು ಟ್ರಂಪ್‌ ಆಲೋಚನೆ.

ಭಾರತೀಯರಿಗೆ ಏನು ಲಾಭ?
– ಗ್ರೀನ್‌ ಕಾರ್ಡ್‌ಗಾಗಿ ಕನಿಷ್ಠ 10ರಿಂದ 12 ವರ್ಷ ಕಾಯಬೇಕಿತ್ತು. ಮೆರಿಟ್‌ ಆಧಾರದಲ್ಲಿ ಅದಿನ್ನೂ ಬೇಗ ಕೈಸೇರಲಿದೆ.
– ಎಚ್‌1ಬಿ ವೀಸಾದಡಿ ಅಮೆರಿಕ ಸೇರುವವರ ಪೈಕಿ ಭಾರತೀಯ ಐಟಿ ಉದ್ಯೋಗಿಗಳ ಸಂಖ್ಯೆ ಹೆಚ್ಚು. ಈಗಾಗಲೇ ಅಮೆರಿಕದ ಐಟಿ ಕ್ಷೇತ್ರಗಳ ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಮೂಲದವರೇ ಇದ್ದಾರೆ. ಮೆರಿಟ್‌ ಮಾನದಂಡಕ್ಕೆ ಇದೂ ಪ್ಲಸ್‌.
– ಪಿವ್‌ ರಿಸರ್ಚ್‌ ಸೆಂಟರ್‌ ವರದಿಯಂತೆ, ಅಮೆರಿಕದಲ್ಲಿನ ಶೇ.70 ಭಾರತೀಯರು ಪದವೀಧರರು.
– ಅಮೆರಿಕದಲ್ಲಿ ಲಕ್ಷಾಂತರ ಉದ್ಯೋಗ ತೆರವು ಮತ್ತು ಸೃಷ್ಟಿಯಿಂದ ಭಾರತೀಯರಿಗೇ ಹೆಚ್ಚು ಅವಕಾಶ ಸಾಧ್ಯತೆ.
– ಐಟಿ ಅಲ್ಲದೆ, ಭಾರತೀಯ ಮೂಲದ ಪ್ರತಿಭಾನ್ವಿತ ವೈದ್ಯರು, ವಿಜ್ಞಾನಿಗಳಿಗೂ ಈ ನೀತಿ ಲಾಭ ತರಲಿದೆ.
– ಅಮೆರಿಕ ಕಂಪನಿಗಳಲ್ಲಿ ವೃತ್ತಿಪರ ವಾತಾವರಣ, ಅನರ್ಹರೊಂದಿಗೆ ಪೈಪೋಟಿ ನಿಲ್ಲಲಿದೆ.

ಅಮೆರಿಕಕ್ಕೆ ಏನು ಲಾಭ?
– ಅಮೆರಿಕದ ಮಧ್ಯಮ, ಬಡ ಉದ್ಯೋಗಿಗಳಿಗೆ ಸೂಕ್ತ ಕೆಲಸ ಸಿಗುತ್ತಿಲ್ಲ ಎನ್ನುವುದನ್ನು ಟ್ರಂಪ್‌ ಗಂಭೀರವಾಗಿ ಪರಿಗಣಿಸಿದ್ದಾರೆ.
– ಮೆರಿಟ್‌ ವಲಸೆ ನೀತಿಯಿಂದ ಬರುವ ಆರ್ಥಿಕ ಲಾಭದಿಂದ ಮೂಲ ಅಮೆರಿಕನ್ನರ ವೇತನ ಹೆಚ್ಚಳ, ಉದ್ಯೋಗ ಸ್ಥಾನಮಾನಕ್ಕೆ ಚಿಂತನೆ.
– ಅಮೆರಿಕದಲ್ಲಿ ಬದುಕು ಕಂಡುಕೊಳ್ಳಲು ಹೋರಾಡುತ್ತಿರುವ ವಲಸಿಗರು, ಮೂಲ ನಿವಾಸಿಗಳ ಕಲ್ಯಾಣಕ್ಕೆ ಸರ್ಕಾರ ಮುಂದಾಗಲಿದೆ.
– ಅರ್ಹತೆ ಉಳ್ಳ ಉದ್ಯೋಗಿಗಳು ಗಂಭೀರ ಅಪರಾಧಗಳಲ್ಲಿ ತೊಡಗುವುದು ಕಡಿಮೆ. ಕ್ರೈಮ್‌ ಇಳಿಕೆ ಸಾಧ್ಯತೆ.

Advertisement

ಟ್ರಂಪ್‌ಗೆ ವಿವಿಗಳ ಸಡ್ಡು
ಒಂದೆಡೆ ಟ್ರಂಪ್‌ ಅಮೆರಿಕನ್ನರ ಉದ್ಯೋಗ ರಕ್ಷಣೆ ಕುರಿತು ಮಾತನಾಡುತ್ತಿದ್ದಾರೆ. ಇನ್ನೊಂದೆಡೆ ಅಮೆರಿಕದ ಕಂಪನಿಗಳು ಅಲ್ಲಿನವರ ಕೆಲಸ ಕಿತ್ತು, ಹೊರಗುತ್ತಿಗೆ ನೀಡುತ್ತಿವೆ. ಇದು ಕೂಡ ಭಾರತಕ್ಕೆ ಪ್ಲಸ್‌. ಕ್ಯಾಲಿಫೋರ್ನಿಯಾ, ಸ್ಯಾನ್‌ಫ್ರಾನ್ಸಿಸ್ಕೋ ವಿವಿಯು ಬುಧವಾರ 49 ಐಟಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದು, ಅವರ ಕೆಲಸವನ್ನು ಭಾರತದಲ್ಲಿನ ಉದ್ಯೋಗಿಗಳಿಗೆ ಹೊರಗುತ್ತಿಗೆ ನೀಡಲು ಮುಂದಾಗಿದೆ. ಇದರಿಂದ ಅಮೆರಿಕದ ಈ ಟಾಪ್‌ ವಿವಿಗಳಿಗೆ 5 ವರ್ಷಕ್ಕೆ 200 ಕೋಟಿ ರೂ. ಉಳಿತಾಯ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next