Advertisement

Kamala Harris: ಪುಟಿನ್‌ ನಿಮ್ಮನ್ನೇ ತಿಂದು ತೇಗುತ್ತಿದ್ದರು: ಟ್ರಂಪ್‌ಗೆ ಕಮಲಾ ತಿರುಗೇಟು!

09:22 PM Sep 11, 2024 | Team Udayavani |

ಫಿಲಡೆಲ್ಫಿಯಾ: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವು ಪಡೆದಿರುವಂತೆಯೇ ಇದೇ ಮೊದಲ ಬಾರಿಗೆ ಪ್ರತಿಸ್ಪರ್ಧಿಗಳಾದ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಮತ್ತು ರಿಪಬ್ಲಿಕನ್‌ ಪಕ್ಷದ ಕಮಲಾ ಹ್ಯಾರಿಸ್‌ ನಡುವೆ ಮುಖಾಮುಖೀ ಚರ್ಚೆ ನಡೆದಿದೆ.

Advertisement

ರಷ್ಯಾ-ಉಕ್ರೇನ್‌, ಇಸ್ರೇಲ್‌-ಗಾಜಾ ಯುದ್ಧ, ಗರ್ಭಪಾತ ಕಾನೂನು, ವಲಸಿಗರು, ಗನ್‌ ನಿಯಂತ್ರಣ ಕಾನೂನು, ಸರ್ವರಿಗೂ ಆರೋಗ್ಯ ಸೇವೆ ಸೇರಿ ಹಲವು ವಿಚಾರಗಳ ಕುರಿತು ಉಭಯ ಸ್ಪರ್ಧಿಗಳು 90 ನಿಮಿಷ ವಾಗ್ವಾದ ನಡೆಸಿದರು.

ನಾನು ಗೆದ್ದರೆ ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸುತ್ತೇನೆ ಎಂದು ಟ್ರಂಪ್‌ ಘೋಷಿಸಿದ್ದು, ನಾನು ಅಧ್ಯಕ್ಷನಾಗಿರುತ್ತಿದ್ದರೆ ಈ ಯುದ್ಧ ಆರಂಭವೇ ಆಗುತ್ತಿರಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಲಾ, “ನೀವು ಅಧ್ಯಕ್ಷರಾಗಿರುತ್ತಿದ್ದರೆ ಇಷ್ಟರಲ್ಲೇ ಪುಟಿನ್‌ ಉಕ್ರೇನ್‌ನಲ್ಲಿ ಕುಳಿತು, ಯುರೋಪ್‌ ಮೇಲೆ ದಾಳಿಗೆ ಪ್ಲ್ರಾನ್‌ ಮಾಡುತ್ತಿರುತ್ತಿದ್ದರು. ನಿಮಗೆ ಸರ್ವಾಧಿಕಾರಿಗಳೆಂದರೆ ಬಹಳ ಪ್ರೀತಿ. ಪುಟಿನ್‌ ಮಧ್ಯಾಹ್ನದ ಭೋಜನಕ್ಕೆ ನಿಮ್ಮನ್ನೇ ತಿಂದು ತೇಗುತ್ತಿದ್ದರು’ ಎಂದು ತಿರುಗೇಟು ನೀಡಿದರು. ಇದೇ ವೇಳೆ, ಕಮಲಾ ಅಧ್ಯಕ್ಷರಾದರೆ 2 ವರ್ಷಗಳಲ್ಲೇ ಇಸ್ರೇನ್‌ ಅನ್ನು ನಿರ್ನಾಮ ಮಾಡುತ್ತಾರೆ ಎಂದು ಟ್ರಂಪ್‌ ಭವಿಷ್ಯ ನುಡಿದರು.
ಟ್ರಂಪ್‌ರ ಪ್ರತಿ ಪ್ರಶ್ನೆಗೂ ಖಡಕ್‌ ಉತ್ತರ ನೀಡುವ ಮೂಲಕ ಕಮಲಾ ಡೆಮಾಕ್ರಾಟ್‌ಗಳಲ್ಲಿ ಹೊಸ ಭರವಸೆ ತುಂಬಿದರು. ಈ ಹಿಂದೆ ನಡೆದಿದ್ದ ಟ್ರಂಪ್‌-ಬೈಡೆನ್‌ ಚರ್ಚೆಯಲ್ಲಿ ಬೈಡೆನ್‌ ತಡವರಿಸಿದ್ದು ಪಕ್ಷಕ್ಕೆ ಭಾರಿ ಮುಜುಗರ ಉಂಟುಮಾಡಿತ್ತು. ಬುಧವಾರದ ಚರ್ಚೆಯ ಬೆನ್ನಲ್ಲೇ ಅಮೆರಿಕದ ಖ್ಯಾತ ಗಾಯಕಿ ಟೆಯ್ಲರ್‌ ಸ್ವಿಫ್ಟ್ ಕಮಲಾಗೆ ಬೆಂಬಲ ಸೂಚಿಸಿದ್ದಾರೆ. ಚರ್ಚೆಯಲ್ಲಿ ಕಮಲಾರೇ ಗೆಲುವು ಸಾಧಿಸಿದ್ದಾರೆ ಎಂದು ಮಾಧ್ಯಮಗಳು ಬಣ್ಣಿಸಿವೆ.

ಟ್ರಂಪ್‌ ನಮ್ಮನ್ನು ಚೀನಾಗೆ ಮಾರಿದರು: ಕಮಲಾ
ಚೀನಾದೊಂದಿಗಿನ ಟ್ರಂಪ್‌ ವ್ಯಾಪಾರ ನೀತಿಯನ್ನು ಟೀಕಿಸಿದ ಕಮಲಾ, “ನೀವು ನಮ್ಮನ್ನು (ಅಮೆರಿಕ) ಚೀನಾಗೆ ಮಾರಾಟ ಮಾಡಿದಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರ ಯುದ್ಧಕ್ಕೆ ಆಹ್ವಾನ ನೀಡಿ, ಅಮೆರಿಕದ ಚಿಪ್‌ಗ್ಳನ್ನು ಚೀನಾಗೆ ಮಾರಾಟ ಮಾಡಿ, ಅವರು ತಮ್ಮ ಸೇನೆಯನ್ನು ಆಧುನೀಕರಣಗೊಳಿಸಲು ಸಹಾಯ ಮಾಡಿದಿರಿ ಎಂದಿದ್ದಾರೆ.

8 ವರ್ಷಗಳ ಬಳಿಕ ಹಸ್ತಲಾಘವ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿಗಳು ಕಳೆದ 8 ವರ್ಷಗಳಿಂದ ಮುಖಾಮುಖೀ ಚರ್ಚೆ ವೇಳೆ ಪರಸ್ಪರ ಹಸ್ತಲಾಘವ ಮಾಡಿದ್ದೇ ಇಲ್ಲ. ಆದರೆ, ಬುಧವಾರ ಕಮಲಾ ಹ್ಯಾರಿಸ್‌ ಈ ಸಂಪ್ರದಾಯಕ್ಕೆ ಅಂತ್ಯಹಾಡಿದ್ದಾರೆ. ವೇದಿಕೆಗೆ ಬಂದ ಟ್ರಂಪ್‌ ಅವರು ಕಮಲಾ ಕಡೆ ದೃಷ್ಟಿಯನ್ನೂ ಹರಿಸದೆ, ನೇರವಾಗಿ ಪೋಡಿಯಂ ಕಡೆ ನೋಡುತ್ತಿದ್ದರು. ಆದರೆ, ಕಮಲಾ ನೇರವಾಗಿ ಟ್ರಂಪ್‌ ಬಳಿ ಬಂದು ಕೈಚಾಚಿ ಹಸ್ತಲಾಘವ ಮಾಡಿದರು. ಜತೆಗೆ, ಆರೋಗ್ಯಕರ ಚರ್ಚೆ ನಡೆಸೋಣ ಎಂದರು. ಇದಕ್ಕೆ ಟ್ರಂಪ್‌ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.