Advertisement

ಅಮೆರಿಕ ಜತೆ ಬೃಹತ್‌ ಡೀಲ್‌ ; ಸೇನಾ ಕಾಪ್ಟರ್‌ಗಳ ಖರೀದಿಗೆ ನಿರ್ಧಾರ

10:13 AM Feb 15, 2020 | Hari Prasad |

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತ ಪ್ರವಾಸದ ಮೇಲೆ ರಕ್ಷಣೆಗೆ ಸಂಬಂಧಿಸಿದ ಎರಡು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. 25 ಸಾವಿರ ಕೋಟಿ ರೂ. ಮೌಲ್ಯದ ಮೂವತ್ತು ಹೆವಿ ಡ್ನೂಟಿ ಸಶಸ್ತ್ರ ಹೆಲಿಕಾಪ್ಟರ್‌ಗಳ ಖರೀದಿ ಮತ್ತು ಆರು 930 ಮಿಲಿಯ ಡಾಲರ್‌ ಮೊತ್ತದ ಅಪಾಚೆ ಕಾಪ್ಟರ್‌ಗಳ ಖರೀದಿ ಪ್ರಮುಖವಾಗಿದೆ.

Advertisement

ಈ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಅಮೆರಿಕದ ಜತೆಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ಸಹಭಾಗಿತ್ವವನ್ನು ಭಾರತ ಹೊಂದಿದಂತೆ ಆಗಲಿದೆ. 2007ರ ಬಳಿಕ ಅಮೆರಿಕ ಭಾರತದಿಂದ ಪಡೆದ ಬೃಹತ್‌ ಪ್ರಮಾಣದ ರಕ್ಷಣಾ ಡೀಲ್‌ ಕೂಡ ಇದಾಗಲಿದೆ. ಮುಂದಿನ ವಾರ ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಅಪಾಚೆ ಹೆಲಿಕಾಪ್ಟರ್‌ ಡೀಲ್‌ ಬಗ್ಗೆ ಪರಿಶೀಲಿಸಿ, ಅನುಮೋದನೆ ನೀಡಲಾಗುತ್ತದೆ.

ಶೇ.15 ಪಾವತಿ: ಹೆವಿ ಡ್ಯೂಟಿ ಸಶಸ್ತ್ರ ಕಾಪ್ಟರ್‌- ಎಂಎಚ್‌-60 ಆರ್‌ ಖರೀದಿಗೆ ಸಂಬಂಧಿಸಿದಂತೆ ಶೇ.15ರಷ್ಟು ಮೊತ್ತವನ್ನು ಕೇಂದ್ರ ಮುಂಚಿತವಾಗಿಯೇ ಪಾವತಿಸಲಿದೆ. ಮೊದಲ ಎರಡು ವರ್ಷಗಳಲ್ಲಿ 2, ಎಲ್ಲ 30 ಕಾಪ್ಟರ್‌ಗಳನ್ನು ಒಟ್ಟು ಐದು ವರ್ಷಗಳಲ್ಲಿ ಅಮೆರಿಕ ಭಾರತಕ್ಕೆ ಹಸ್ತಾಂತರಿಸಲಿದೆ.

ಹಿಂದಿನ ಒಪ್ಪಂದದ ಅನುಸರಣೆ: ಅಪಾಚೆ ಕಾಪ್ಟರ್‌ ಒಪ್ಪಂದದ ಬಗ್ಗೆ ಹೇಳು ವುದಿದ್ದರೆ, 2015ರ ಸೆಪ್ಟಂಬರ್‌ನಲ್ಲಿ ಅಮೆರಿಕ ಜತೆಗೆ ಸಹಿ ಹಾಕಲಾಗಿದ್ದ ಒಪ್ಪಂದದ ಮುಂದುವರಿದ ಭಾಗ ಇದು. 13,952 ಕೋಟಿ ರೂ. ವೆಚ್ಚದ ಡೀಲ್‌ನಲ್ಲಿ 22 ಅಪಾಚೆ ಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಸೇರಿಸಿಕೊಳ್ಳಲಾಗಿದೆ. ಹೊಸತಾಗಿ ಖರೀದಿ ಮಾಡಲಿರುವ ಆರು ಕಾಪ್ಟರ್‌ಗಳನ್ನು ಭೂಸೇನೆಗೆ ಹಸ್ತಾಂತರಿಸಲಾಗುತ್ತದೆ.

2022-2023ರ ವೇಳೆಗೆ ಸೇನೆಗೆ ಗಾಳಿಯಿಂದ ಭೂಮಿಗೆ ಛಿಮ್ಮುವ ಹೆಲ್‌ಫ‌ಯರ್‌ ಲಾಂಗ್‌ಬೋ (Hellfire Longbow) ಮಿಸೈಲ್‌ಗ‌ಳು, ಗಾಳಿಯಿಂದ ಗಾಳಿಗೆ ಛಿಮ್ಮುವ ಸ್ಟಿಂಗರ್‌ (Stinger) ಮಿಸೈಲ್‌ಗ‌ಳು ಲಭಿಸಲಿವೆ.

Advertisement

ಇದರ ಜತೆಗೆ ನೌಕಾಪಡೆಗಾಗಿ ಎಂಕೆ-54 ಟೋರ್ಪಡೋಗಳು ಮತ್ತು ಪ್ರಿಸಿಷನ್‌ ಕಿಲ್‌ ರಾಕೆಟ್‌ ಖರೀದಿಗೆ ಬಗ್ಗೆ ಒಪ್ಪಂದದ ಸಾಧ್ಯತೆಗಳಿವೆ. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನದ ಅತ್ಯಾಧುನಿಕ ನೌಕೆಗಳಿಗೆ ಎದುರಾಗಿ ಅವುಗಳನ್ನು ನಿಯೋಜಿಸಲಾಗುತ್ತದೆ.

ಪ್ರಧಾನಿಯಿಂದಲೇ ಸ್ವಾಗತ: ಅಮೆರಿಕದಿಂದ ನೇರವಾಗಿ ಅಹಮದಾಬಾದ್‌ಗೆ ಆಗಮಿಸುವ ಅಧ್ಯಕ್ಷ ಟ್ರಂಪ್‌ರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಿದ್ದಾರೆ. ಅನಂತರ ಇಬ್ಬರು ನಾಯಕರು ಮೆರವಣಿಗೆಯಲ್ಲಿ ಸಾಬರಮತಿ ಆಶ್ರಮಕ್ಕೆ ತೆರಳಲಿದ್ದಾರೆ.

ಅಮೆರಿಕ ಹರ್ಷ: ಜಮಾತ್‌-ಉದ್‌-ದಾವಾದ ಸಂಸ್ಥಾಪಕ ಹಫೀಜ್‌ ಸಯೀದ್‌ಗೆ ಜೈಲು ಶಿಕ್ಷೆ ಎಂಬ ಪಾಕಿಸ್ಥಾನದ ಕೋರ್ಟ್‌ ತೀರ್ಪಿಗೆ ಅಮೆರಿಕ ಹರ್ಷ ವ್ಯಕ್ತಪಡಿಸಿದೆ. ಉಗ್ರರ ವಿರುದ್ಧ ಪಾಕಿಸ್ಥಾನ ಕ್ರಮ ಕೈಗೊಳ್ಳಬೇಕು ಎಂಬ ವಿಶ್ವದ ಬೇಡಿಕೆ ಈಡೇರಿಕೆ ನಿಟ್ಟಿನಲ್ಲಿ ಇದೊಂದು ಮಹತ್ವದ್ದು ಮತ್ತು ಉಗ್ರಗಾಮಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದು ನೆರವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ಯಾರೀಸ್‌ನಲ್ಲಿ ಫೆ.16-21ರ ವರೆಗೆ ಜಗತ್ತಿನಲ್ಲಿ ಉಗ್ರರಿಗೆ ಸಿಗುವ ವಿತ್ತೀಯ ನೆರವಿನ ಮೇಲೆ ನಿಗಾ ಇರಿಸುವ ಕಾರ್ಯಪಡೆ- ಎಫ್ಎಟಿಎಫ್ ಸಭೆ ನಡೆಯಲಿದೆ. ಅದು ಈಗಾಗಲೇ ಪಾಕಿಸ್ಥಾನವನ್ನು ಬೂದು ಬಣ್ಣದ ಪಟ್ಟಿಯಲ್ಲಿ ಸೇರಿಸಿ, ನಿರ್ಬಂಧ ಹೇರಿದೆ. ಸಯೀದ್‌ಗೆ ಶಿಕ್ಷೆ ನೀಡಿದ್ದನ್ನು ಸಭೆಯಲ್ಲಿ ಪರಿಶೀಲಿಸುವ ಸಾಧ್ಯತೆಗಳಿವೆ.

ಕೊಳೆಗೇರಿಗಳ ಮುಂದೆ 7 ಅಡಿ ಎತ್ತರದ ಗೋಡೆ
ಅಹಮದಾಬಾದ್‌ ಏರ್‌ಪೋರ್ಟ್‌ನಿಂದ ಫೆ. 24ರಂದು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಅಧ್ಯಕ್ಷ ಟ್ರಂಪ್‌ಗೆ ಕೊಳೆಗೇರಿ ಕಾಣಿಸಬಾರದು ಎಂಬ ಕಾರಣಕ್ಕಾಗಿ ಅರ್ಧ ಕಿ.ಮೀ. ಉದ್ದದ ಗೋಡೆ ನಿರ್ಮಿಸುತ್ತಿದೆ! ಅದರ ಎತ್ತರ ಏಳು ಅಡಿ ಇರಲಿದೆ. ಅಹಮದಾಬಾದ್‌ ಮುನಿಸಿಪಲ್‌ ಕಾರ್ಪೊರೇಷನ್‌ ಈ ಕಾಮಗಾರಿ ಕೈಗೊಂಡಿದೆ. ನಗರದ ಅಂದ ಹೆಚ್ಚಿಸಲು, ವಿಶೇಷ ಅತಿಥಿಗೆ ಮುಜುಗರ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಕ್‌ ಪ್ರಾಮಾಣಿಕತೆ ಪರಿಶೀಲಿಸಬೇಕು: ಕೇಂದ್ರ
ಉಗ್ರ ಹಫೀಜ್‌ ಸಯೀದ್‌ಗೆ ಶಿಕ್ಷೆಯಾಗುವಂತೆ ಮಾಡಿದೆ ಎಂದು ಪಾಕಿಸ್ಥಾನ ಹೇಳಿರುವುದರ ಪ್ರಾಮಾಣಿಕತೆ ಪರೀಕ್ಷೆಗೆ ಒಳಪಡಿಸಬೇಕಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಪ್ಯಾರಿಸ್‌ನಲ್ಲಿ ಎಫ್ಎಟಿಎಫ್ ಸಭೆಗೆ ಮುಂಚಿತವಾಗಿ ಉಗ್ರನಿಗೆ ಶಿಕ್ಷೆಯಾಗುವಂತೆ ಮಾಡಿರುವ ನೆರೆಯ ರಾಷ್ಟ್ರದ ಕ್ರಮ ಪ್ರಶ್ನಾರ್ಹ.

ಇಂಥ ಒಂದು ನಿರ್ಧಾರ ಬಹಳ ಹಿಂದೆಯೇ ಆಗಬೇಕಾಗಿತ್ತು. ಉಗ್ರ ಸಯೀದ್‌ ವಿರುದ್ಧ ಮಾತ್ರವಲ್ಲ, ಮುಂಬಯಿ ಮತ್ತು ಪಠಾಣ್‌ಕೋಟ್‌ ದಾಳಿಗೆ ಕಾರಣೀಭೂತ ರಾಗಿರುವ ಇತರ ಭಯೋತ್ಪಾದಕ ಸಂಘಟನೆಗಳ ವಿರುದ್ಧವೂ ನೆರೆಯ ರಾಷ್ಟ್ರದ ಸರಕಾರ ಕಠಿನವಾಗಿಯೇ ವರ್ತಿಸಲಿದೆಯೋ ಎಂಬ ವಿಚಾರ ಸ್ಪಷ್ಟವಾಗಿಲ್ಲ ಎಂದು ಸಚಿವಾಲಯ ಹೇಳಿದೆ.

ಅಹಮದಾಬಾದ್‌, ನವ ದಿಲ್ಲಿ ಪ್ರವಾಸ ಎದುರು ನೋಡುತ್ತಿದ್ದೇನೆ. ನಾನು ಕೂತೂಹಲಿಗಳಾಗಿದ್ದೇನೆ.
— ಮೆಲಿನಾ ಟ್ರಂಪ್‌ , ಡೊನಾಲ್ಡ್‌ ಟ್ರಂಪ್‌ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next