Advertisement

Donald Trump ಬಂಧನ, ರಿಲೀಸ್‌; ರಹಸ್ಯ ಕಡತ ಸಂಗ್ರಹಿಸಿಟ್ಟುಕೊಂಡ ಆರೋಪ

09:08 PM Jun 14, 2023 | Team Udayavani |

ಮಿಯಾಮಿ:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಅಧಿಕಾರಾವಧಿ ಮುಗಿದ ಬಳಿಕವೂ ರಾಷ್ಟ್ರೀಯ ಭದ್ರತಾ ಕಡತಗಳನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟುಕೊಂಡ ಮತ್ತು ಅದನ್ನು ಮರಳಿ ಪಡೆಯಲು ಬಂದ ಅಧಿಕಾರಿಗಳಿಗೆ ಸುಳ್ಳು ಹೇಳಿದ ಪ್ರಕರಣದಲ್ಲಿ ಈ ಬೆಳವಣಿಗೆ ನಡೆದಿದೆ. ಮಿಯಾಮಿಯ ಕೋರ್ಟ್‌ಗೆ ಅವರು ಶರಣಾಗತರಾದ ಕೂಡಲೇ ಅವರನ್ನು ಬಂಧಿಸಲಾಗಿತ್ತು. ಜಡ್ಜ್ ಮುಂದೆ ವಾದಿಸಿದ ಟ್ರಂಪ್‌, “ನಾನು ನಿರ್ದೋಷಿ. ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿದ್ದಾರೆ.

Advertisement

2024ರ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಬಾರಿ ಮತ್ತೆ ಕಣಕ್ಕಿಳಿಯಲು ಟ್ರಂಪ್‌ ಸಿದ್ಧತೆ ನಡೆಸಿಕೊಳ್ಳುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. ನೀತಿ ಚಿತ್ರ ತಾರೆಗೆ ಹಣ ನೀಡಿ ಬಾಯಿ ಮುಚ್ಚಿಸಿದ ಪ್ರಕರಣದಲ್ಲಿ ಏಪ್ರಿಲ್‌ನಲ್ಲಷ್ಟೇ ಟ್ರಂಪ್‌ ಕೋರ್ಟ್‌ಗೆ ಹಾಜರಾಗಿದ್ದರು. ಈಗ ಫೆಡರಲ್‌ ಅಪರಾಧವೊಂದರಲ್ಲಿ ಆರೋಪ ಎದುರಿಸುತ್ತಿರುವ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್‌ ಪಾತ್ರರಾಗಿದ್ದಾರೆ.

ಮೌನಕ್ಕೆ ಜಾರಿದ್ದ ಟ್ರಂಪ್‌
ಮಿಯಾಮಿ ಕೋರ್ಟ್‌ಗೆ ಶರಣಾಗುವ ಮುನ್ನ ಕೋರ್ಟ್‌ ಹೊರಗೆ ಸೇರಿದ್ದ ಭಾರೀ ಸಂಖ್ಯೆಯ ಜನರತ್ತ ಟ್ರಂಪ್‌ ಕೈಬೀಸುತ್ತಾ ನಡೆದರು. ಆದರೆ, ಕೋರ್ಟ್‌ ಕೊಠಡಿಯೊಳಗೆ ಮಾತ್ರ ಮೌನವಾಗಿ, ಕೈಕಟ್ಟಿ ಕುಳಿತಿದ್ದರು.

ದೋಷಿಯಾದರೂ ಸ್ಪರ್ಧಿಸುವ ಅವಕಾಶ
ಈ ಪ್ರಕರಣದಲ್ಲಿ ದೋಷಿ ಎಂಬ ತೀರ್ಪು ಬಂದರೂ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಮತ್ತು ಪ್ರಚಾರ ಅಭಿಯಾನ ನಡೆಸಲು ಅಡ್ಡಿಯಿಲ್ಲ. ಟ್ರಂಪ್‌ ವಿರುದ್ಧದ  ವಿಚಾರಣೆಗಳು ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳು ಬೇಕು. ವಿಚಾರಣೆ ಹಂತದಲ್ಲೂ ಅವರು ಪ್ರಚಾರ ಮುಂದುವರಿಸಬಹುದು. ಏಕೆಂದರೆ, ಅಮೆರಿಕದ ಸಂವಿಧಾನದ ಪ್ರಕಾರ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ನೈಸರ್ಗಿಕವಾಗಿ ಜನಿಸಿದ ನಾಗರಿಕನಾಗಿರಬೇಕು, ಕನಿಷ್ಠ 35 ವರ್ಷದವರಾಗಿರಬೇಕು ಮತ್ತು ಕನಿಷ್ಠ 14 ವರ್ಷ ಅಮೆರಿಕದಲ್ಲಿ ನೆಲೆಸಿರಬೇಕು. ಹೀಗಾಗಿ, ಟ್ರಂಪ್‌ ಅವರು ಅಪರಾಧಿ ಎಂದು ಸಾಬೀತಾದರೂ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತೊಂದರೆ ಇಲ್ಲ ಎನ್ನುತ್ತಾರೆ ಕಾನೂನು ಪ್ರೊಫೆಸರ್‌ ರಿಚರ್ಡ್‌ ಹೇಸನ್‌,

Advertisement

Udayavani is now on Telegram. Click here to join our channel and stay updated with the latest news.

Next