Advertisement

ಉಕ್ರೇನ್ ವಿಮಾನ ಪತನದ ಹಿಂದೆ ಇರಾನ್ ಕೈವಾಡ ? ಅನುಮಾನ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್

10:07 AM Jan 11, 2020 | Mithun PG |

ವಾಷಿಂಗ್ಟನ್ : ಸುಮಾರು 180 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಗಳನ್ನು ಹೊತ್ತು ಸಾಗಿದ್ದ ಉಕ್ರೇನಿನ ವಿಮಾನವೊಂದು ಇರಾನ್ ನ ಟೆಹ್ರಾನ್ ನಲ್ಲಿ ಪತನವಾಗಿ ಅಷ್ಟೂ ಜನರ ದುರಂತ ಸಾವಿಗೆ ಕಾರಣವಾದ ಘಟನೆಯ ಬಗ್ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಈ ವಿಮಾನವನ್ನು ಇರಾನ್ ಹೊಡೆದುರುಳಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ಉಕ್ರೇನ್ ದೇಶದ ಅಂತಾರಾಷ್ಟ್ರೀಯ ಬೋಯಿಂಗ್ 737-800 ವಿಮಾನ ರಷ್ಯಾದ ಕೀವ್ ಎಂಬಲ್ಲಿಗೆ ಹೊರಟಿತ್ತು. ಇರಾನ್ ದೇಶದ ಟೆಹ್ರಾನ್​ನ ವಿಮಾನ ನಿಲ್ದಾಣದಲ್ಲಿ ಇಳಿದು ಮತ್ತೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ 180 ಜನ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿರುವ ಡೊನಾಲ್ಡ್​ ಟ್ರಂಪ್​, “ಈ ವಿಮಾನ ನೆರೆಯ ರಾಷ್ಟ್ರದಲ್ಲಿ ಹಾರಾಟ ನಡೆಸುತ್ತಿತ್ತು. ಯಾರೋ ತಪ್ಪು ಮಾಡಿದ್ದಾರೆ ಎನ್ನುವ ಅನುಮಾನ ನನಗಿದೆ,” ಎಂದು ಟ್ರಂಪ್​ ಹೇಳಿದ್ದಾರೆ.

ಈ ಕುರಿತು ಅಮೆರಿಕಾ ಮಾಧ್ಯಮಗಳು ಪ್ರತಿಕ್ರಿಯಿಸಿದ್ದು ಇರಾನ್ ಈ ವಿಮಾನವನ್ನು ತಪ್ಪಾಗಿ ಹೊಡೆದುರುಳಿಸಿವೆ ಎಂದು ವರದಿ ಮಾಡಿವೆ. ಮಾತ್ರವಲ್ಲದೆ ಅಮೆರಿಕಾದ ಅಧಿಕಾರಿಯೋರ್ವರು ಇರಾನ್ ವಾಯು ಪಡೆ ಉಕ್ರೇನ್ ವಿಮಾನವನ್ನು ಆಕಸ್ಮಿಕವಾಗಿ  ಹೊಡೆದುರುಳಿಸಿರಬಹುದು ಎಂದು ಹೇಳಿಕೆ ನೀಡಿದ್ದಾರೆ.

ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಹತ್ಯೆಯಿಂದಾಗಿ ಕಳೆದ ಒಂದು ವಾರದಿಂದ ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆಗೆ ಇರಾನ್​ ನೆಲದಲ್ಲಿ ಉಕ್ರೇನ್ ವಿಮಾನ ನೆಲಕ್ಕುರುಳಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು

ಆದರೆ, ತನಿಖೆ ನಡೆಸಿ ವರದಿ ನೀಡಿರುವ ಇರಾನ್ ನಾಗರೀಕ ವಾಯುಯಾನ ಸಂಸ್ಥೆ, “ವಿಮಾನ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಇಂಜಿನ್​ನ ಒಂದು ಭಾಗ ಮಿತಿಮೀರಿ ಬಿಸಿಯಾಗಿದ್ದಕ್ಕೆ ಸಾಕ್ಷಿಗಳಿವೆ. ಅಲ್ಲದೆ, ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಬೆಂಕಿಗೆ ಆಹುತಿಯಾಗಿತ್ತು” ಎಂದು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next