Advertisement

ಅಂಚೆ ವಿರುದ್ಧ ಟ್ರಂಪ್‌ ಸಮರ : ಟ್ರಂಪ್‌ ಆಕ್ರೋಶಕ್ಕೆ ಕಾರಣವೇನು?

01:02 PM Aug 09, 2020 | sudhir |

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದೆ. ಚುನಾವಣೆ ಮುಂದೂಡಬೇಕು ಎಂಬ ವಾದದ ನಡುವೆ ಅಂಚೆ ಮೂಲಕ ಮತ ಚಲಾವಣೆ ಮಾಡುವುದರ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಸರಕಾರಿ ಸ್ವಾಮ್ಯದ ಅಂಚೆ ವ್ಯವಸ್ಥೆ ಕುಸಿದಿದೆ. ಹೀಗಾಗಿ, ಅಂಚೆ ಮೂಲಕ ಮತ ಚಲಾವಣೆ ಮಾಡುವ ವ್ಯವಸ್ಥೆ ಮುಂದುವರಿಸಿದರೆ ಚುನಾವಣೆ ಸರಿಯಾಗಿ ನಡೆಯುವುದು ಕಷ್ಟವೆಂಬ ಮಾತುಗಳು ಕೇಳಲಾರಂಭಿಸಿವೆ. ಅದಕ್ಕೆ ಪೂರಕವಾಗಿ ಅಂಚೆ ಇಲಾಖೆಗೆ ನೀಡಬೇಕಾಗಿರುವ 89 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಸಹಾಯಧನ ನೀಡಲು ಅಧ್ಯಕ್ಷ ಟ್ರಂಪ್‌ ನಿರಾಕರಿಸಿದ್ದಾರೆ. ಹೀಗಾಗಿ, ವೈರಸ್‌ನಿಂದಾಗಿ ವಿತ್ತೀಯ ಬಿಕ್ಕಟ್ಟಿಗೆ ಸಿಲುಕಿರುವ ಅಂಚೆ ಇಲಾಖೆ ಸಂಕಷ್ಟಕ್ಕೆ ಬಿದ್ದಿದೆ. ಜತೆಗೆ 6 ಲಕ್ಷ ಉದ್ಯೋಗಿಗಳ ಭವಿಷ್ಯವೂ ಡೋಲಾಯಮಾನದಲ್ಲಿದೆ.

Advertisement

ಟ್ರಂಪ್‌ ಆಕ್ರೋಶಕ್ಕೆ ಕಾರಣವೇನು?
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಪ್ರಭಾವ ಬೀರಿ ತಮ್ಮ ಸೋಲಿಗೆ ಪ್ರಯತ್ನಿಸಿತ್ತು ಎನ್ನುವುದು ಟ್ರಂಪ್‌ರ ಹಳೆಯ ಆರೋಪ. ಇದರ ಜತೆಗೆ 2018ರಲ್ಲಿ ಖಾಸಗಿ ಸಂಸ್ಥೆಗಳಾಗಿರುವ ಅಮೆಜಾನ್‌, ಫೆಡ್‌ಎಕ್ಸ್‌, ಟಾರ್ಗೆಟ್‌ ಸಂಸ್ಥೆಗಳಿಗೆ ಕಡಿಮೆ ವೆಚ್ಚದಲ್ಲಿ ಪಾರ್ಸೆಲ್‌ ಮತ್ತು ಆ ಸಂಸ್ಥೆಗಳ ಕಂಟೈನರ್‌ಗಳ ಸಾಗಣೆಗೆ ಅವಕಾಶ ಮಾಡಿಕೊಟ್ಟಿದೆ.

ಎಪ್ರಿಲ್‌ನಲ್ಲಿಯೇ “ದ ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ, ಅಧ್ಯಕ್ಷ ಟ್ರಂಪ್‌ ವಿತ್ತೀಯ ನೆರವು ನಿರ್ಧಾರಕ್ಕೆ ಸಹಿ ಹಾಕದಿರಲು ನಿರ್ಧರಿಸಿದ್ದರು ಎಂದು ವರದಿ ಪ್ರಕಟಿಸಿತ್ತು. ಅದಕ್ಕೆ ಬೇಕಾದ ನೆರವನ್ನು ಪಾರ್ಸೆಲ್‌ ಮತ್ತಿತರ ಸೇವಾಶುಲ್ಕ ಹೆಚ್ಚಿಸುವ ಮೂಲಕ ಬದಲಿ ವ್ಯವಸ್ಥೆ ಮಾಡಬೇಕು ಎಂದು ಟ್ರಂಪ್‌ ಸೂಚಿಸಿದ್ದಾರೆ.

ಸದ್ಯದ ಪರಿಸ್ಥಿತಿ ಏನು?
ಡೆಮಾಕ್ರಾಟ್‌ ಸಂಸದರು ಅಂಚೆ ಇಲಾಖೆಗೆ ಆರ್ಥಿಕ ಪ್ಯಾಕೇಜ್‌ ನೀಡಲು ಒತ್ತಡ ಹೇರುತ್ತಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅನುಮತಿ­ಗಾಗಿ ಕಾಯುತ್ತಿರುವ ಕೇರ್ಸ್‌ ಕಾಯ್ದೆಯಲ್ಲಿ ಅಂಚೆ ಇಲಾಖೆಗೆ 13 ಬಿಲಿಯನ್‌ ಡಾಲರ್‌ ನೆರವಿನ ಪ್ರಸ್ತಾವವಿತ್ತು. ಆದರೆ ಅಂಚೆ ಇಲಾಖೆಗೆ ನೆರವು ನೀಡುವುದಿದ್ದರೆ ಟ್ರಂಪ್‌ ಸಹಿ ಹಾಕಲಾ­ರರು ಎಂದು ಶ್ವೇತಭವನ ಸ್ಪಷ್ಟಪಡಿಸಿತ್ತು.

ಹಣಕಾಸು ಸಚಿವ ಸ್ಟೀವನ್‌ ಮನೂಶನ್‌ ಸಂಸದರಾದ ರಾನ್‌ ಜಾನ್ಸನ್‌, ಆರ್‌ ವಿಸ್ಕಾನ್ಸಿನ್‌, ಗ್ರೇ ಪೀಟರ್ಸ್‌, ಡಿ.ಮಿಚಿಗನ್‌ ಜತೆಗೆ ಚರ್ಚೆ ನಡೆಸಿ 13 ಬಿಲಿಯನ್‌ ಡಾಲರ್‌ ಸಾಲವನ್ನು ವಾಪಸ್‌ ನೀಡಬೇಕೆಂಬ ಷರತ್ತಿನ ಮೇರೆಗೆ ನೀಡಲು ಒಪ್ಪಿಕೊಂಡಿದ್ದಾರೆ.
ಅಂಚೆ ಇಲಾಖೆ ಉಳಿಸಲು ಉದ್ಯೋಗಿಗಳು ಮತ್ತು ಸಾರ್ವಜನಿಕರು ಅಂಚೆ ಚೀಟಿ ಖರೀದಿಸಿ, ಸರಕಾರಿ ಅಂಚೆ ವ್ಯವಸ್ಥೆಯನ್ನೇ ಬಳಕೆ ಮಾಡಿ ಎಂದು ಪ್ರಚಾರ ಶುರು ಮಾಡಿದ್ದಾರೆ.

Advertisement

ಕುಸಿದು ಬಿದ್ದ ವ್ಯವಸ್ಥೆ
ಸರಿಯಾದ ಸಮಯದಲ್ಲಿ ಅಂಚೆ ಮೂಲಕ ಪತ್ರಗಳು, ಔಷಧಗಳು ಬಟವಾಡೆಯಾಗುತ್ತಿಲ್ಲ ಎಂಬ ದೂರು ಈಗ ಸಾಮಾನ್ಯ.
2016ರಲ್ಲಿ ನಡೆದ ಚುನಾವಣೆ ವೇಳೆ ಕೆಲವು ಸ್ಥಳಗಳಿಂದ ಮತಪತ್ರಗಳು ಎಣಿಕೆ ಸ್ಥಳಕ್ಕೆ ಬಂದಿರಲಿಲ್ಲ. ಅದಕ್ಕೆ ಪೂರಕವಾಗಿ ಡೊನಾಲ್ಡ್‌ ಟ್ರಂಪ್‌ ರಷ್ಯಾ ಚುನಾವಣೆಯಲ್ಲಿ ಪ್ರಭಾವ ಬೀರಿತ್ತು ಎಂದು ದೂರಿದ್ದರು.
ಹೀಗಾಗಿ, ಅಂಚೆ ಮತಗಳು ಬೇಡವೆಂದು ಅವರು ವಾದಿಸುತ್ತಿದ್ದಾರೆ. ಹೀಗಾಗಿಯೇ ಆರ್ಥಿಕ ಪ್ಯಾಕೇಜ್‌ ನಿರಾಕರಿಸಲಾಗುತ್ತಿದೆ.

ಟೀಕಾಕಾರರ ವಾದವೇನು?
ಅಧ್ಯಕ್ಷ ಟ್ರಂಪ್‌ ಮತ್ತು ಅಂಚೆ ಮಹಾ­ನಿರ್ದೇಶಕ ಮೆಗಾನ್‌ ಬ್ರೆನ್ನಾನ್‌ ಜತೆಗೂಡಿ ಅಂಚೆ ವ್ಯವಸ್ಥೆ ನಾಶ ಮಾಡುತ್ತಿದ್ದಾರೆ.
ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಅಕ್ಟೋಬರ್‌-ನವೆಂಬರ್‌ ಚುನಾವಣೆ­ಯಲ್ಲಿ ಗೆದ್ದು ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ.
ಸೋಂಕಿನ ಹಿನ್ನೆಲೆಯಲ್ಲಿ ಅಂಚೆ ಮತ ಚಲಾವಣೆ ಮಾಡಿದರೆ, ವಂಚನೆ ನಡೆಸಲಾಗುತ್ತದೆ ಎಂದು ಸುಳ್ಳು ಬಿಂಬಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next