Advertisement

ಟ್ರಂಪ್‌ಗೆ ಆ್ಯಪ್‌ಗಳ ಪಂಚ್‌

02:09 AM Jan 11, 2021 | Team Udayavani |

ವಾಷಿಂಗ್ಟನ್‌: “ಹೊಂಡಕ್ಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು’ ಎಂಬಂತಾಗಿದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ಥಿತಿ. ಟ್ರಂಪ್‌ ಖಾತೆಯನ್ನು ಟ್ವಿಟರ್‌ ಶಾಶ್ವತವಾಗಿ, ಫೇಸ್‌ಬುಕ್‌- ಇನ್‌ಸ್ಟಾಗ್ರಾಂ 2 ವಾರಗಳ ಕಾಲ ಡಿಲೀಟ್‌ ಮಾಡಿದ ಬೆನ್ನಲ್ಲೇ, ಉಳಿದ ಸಾಮಾಜಿಕ ಜಾಲತಾಣ ಆ್ಯಪ್‌ಗ್ಳೂ “ನಿಷೇಧದ ಅಸ್ತ್ರ ‘ ಪ್ರಯೋಗಿಸಿವೆ.

Advertisement

2020ರ ಆರಂಭದ ಚುನಾವಣಾ ಕಾವಿನ ದಿನಗಳಲ್ಲೇ ಟ್ರಂಪ್‌, ಸಾಮಾಜಿಕ ಜಾಲತಾಣಗಳ ವಿರುದ್ಧ ಜಂಗೀಕುಸ್ತಿ ಶುರುಮಾಡಿದ್ದರು. ಯಾವಾಗ ಜೋ ಬೈಡೆನ್‌ ಗೆದ್ದು, ಇತ್ತೀಚೆಗೆ ಟ್ರಂಪ್‌ ಸಂಸತ್‌ ದಾಂಧಲೆಗೆ ಛೂ ಬಿಟ್ಟರೋ, ಅಧ್ಯಕ್ಷನ ಈ ವರ್ತನೆಯನ್ನು ಸಾಮಾಜಿಕ ಜಾಲತಾಣ ಲೋಕ ಅಕ್ಷಮ್ಯ ಎಂದೇ ಪರಿಗಣಿಸಿವೆ. ಇದಕ್ಕೆ ತಕ್ಕ ಶಿಕ್ಷೆಯಾಗಿ ಇವು ತಮ್ಮ ಪ್ಲಾಟ್‌ಫಾರಂಗಳಲ್ಲಿ ಟ್ರಂಪ್‌ರನ್ನು ನಿಯಂತ್ರಿಸುವ, ನಿರ್ಬಂಧಿಸುವ ಕ್ರಮಕ್ಕೆ ಮುಂದಾಗಿವೆ.

ಪಾರ್ಲರ್‌ಗೂ ಕೊಕ್‌: ಟ್ರಂಪ್‌ ಬೆಂಬಲಿಗರು ಟ್ವಿಟರ್‌ನಿಂದ “ಪಾರ್ಲರ್‌’ ಆ್ಯಪ್‌ಗೆ ವಲಸೆ ಹೋಗ ಲಾರಂಭಿಸಿದ್ದು, ಆಕ್ಷೇಪಾರ್ಹ ಪೋಸ್ಟ್‌ಗಳು      ಸದ್ದು ಮಾಡಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಆ್ಯಪಲ್‌ ತನ್ನ ಆ್ಯಪ್‌‌ಸ್ಟೋರ್‌ನಿಂದ “ಪಾರ್ಲರ್‌’ ಆ್ಯಪ್‌ ಅನ್ನು ಕಿತ್ತೂಗೆದಿದೆ. “ಪಾರ್ಲರ್‌’ನಲ್ಲಿ ಜ.6ರ ದುರಂತವನ್ನು ಸಂಭ್ರಮಿಸಲಾಗಿತ್ತು. ಅಮೆಜಾನ್‌ ಕೂಡ ತನ್ನ ಪ್ಲೇ ಸ್ಟೋರ್‌ನಿಂದ ಪಾರ್ಲರ್‌ ಆ್ಯಪ್‌ ಅನ್ನು ತೆಗೆದುಹಾಕಿದೆ.

ಡಿಸ್ಕಾರ್ಡ್‌: ಇದು ಇನ್‌ಸ್ಟಂಟ್‌ ಮೆಸೇಜಿಂಗ್‌ನ ಒಂದು ಚಾಟ್‌ರೂಂ ಆ್ಯಪ್‌. ಯುವಕರು ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದರೂ ಟ್ರಂಪ್‌ ಬೆಂಬಲಿಗರ “ದಡೊನಾಲ್ಡ್‌.ವಿನ್‌’ ಸರ್ವರ್‌ ಹೆಚ್ಚು ಸಕ್ರಿಯವಾಗಿತ್ತು. ಈಗ ಈ ಸರ್ವರ್‌ಗೆ ಡಿಸ್ಕಾರ್ಡ್‌ ನಿಷೇಧದ ಬಿಸಿಮುಟ್ಟಿಸಿದೆ.

ಗೂಗಲ್‌: ಆ್ಯಪಲ್‌ ಬೆನ್ನಲ್ಲೇ, ಗೂಗಲ್‌ ತನ್ನ ಪ್ಲೇಸ್ಟೋರ್‌ನಿಂದ “ಪಾರ್ಲರ್‌’ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ. “ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ, ಅಧಿಕಾರ ಹಸ್ತಾಂತರ ವಿವಾದ ಮುಗಿಯುವವರೆಗೂ ನಾವು ಪಾರ್ಲರನ್ನು ಸ್ಥಗಿತಗೊಳಿಸಿರುತ್ತೇವೆ’ ಎಂದು ಗೂಗಲ್‌ ಸ್ಪಷ್ಟಪಡಿಸಿದೆ.

Advertisement

ಪಿನ್‌ಟರೆಸ್ಟ್‌: ಇಮೇಜ್‌ ಶೇರಿಂಗ್‌ಗೆ ಖ್ಯಾತಿಪಡೆದ ಈ ಆ್ಯಪ್‌ನಲ್ಲಿ ಟ್ರಂಪ್‌ ಖಾತೆಗಳೇನೂ ಇಲ್ಲ. ಆದರೆ

ಟ್ರಂಪ್‌ಗೆ ಬೆಂಬಲವಾಗಿ ನವೆಂಬರ್‌ನಿಂದ ಸಾಕಷ್ಟು ಇನ್ಫೋಗ್ರಾಫಿಕ್‌ಗಳನ್ನು ಇಲ್ಲಿ ಪೋಸ್ಟ್‌ ಮಾಡಲಾಗಿದೆ. ಉದಾ: “ಸ್ಟಾಪ್‌ ದ ಸ್ಟೀಲ್‌’ ಕುರಿತೇ ಇಲ್ಲಿ ಸಹಸ್ರಾರು ಗ್ರಾಫಿಕ್‌ಗಳಿವೆ. “ಇಂಥ ಪೋಸ್ಟ್‌ಗಳು ನಮ್ಮ ಸಮುದಾಯದ ಮಾರ್ಗಸೂಚಿ ಉಲ್ಲಂ ಸುವ ಕಾರಣ, ಇವುಗಳ ಫ‌ಲಿತಾಂಶ ತೋರಿಸುವುದನ್ನು ನಾವು ನಿಲ್ಲಿಸುತ್ತೇವೆ’ ಎಂದು ಪಿನ್‌ಟರೆಸ್ಟ್‌ ತಿಳಿಸಿದೆ.

ಸ್ನ್ಯಾಪ್‌ಚಾಟ್‌: ಟ್ರಂಪ್‌ ಖಾತೆಯನ್ನು ಸ್ನ್ಯಾಪ್‌ಚಾಟ್‌ ಕೂಡ ಸ್ಥಗಿತಗೊಳಿಸಿದೆ. ಅಲ್ಲದೆ ಟ್ರಂಪ್‌ ಕುರಿತ ಯಾವುದೇ ವಿಚಾರಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ ಎಂದೂ ಖಡಕ್ಕಾಗಿ ಹೇಳಿದೆ.

ಟಿಕ್‌ಟಾಕ್‌: ಕಾಲಚಕ್ರ ಹೇಗೆ ತಿರುಗುತ್ತೆ ನೋಡಿ! ಚೀನೀ ಆ್ಯಪ್‌ ಕಾರಣಕ್ಕಾಗಿ ಟ್ರಂಪ್‌, ಟಿಕ್‌ಟಾಕ್‌ಗೆ ನಿಷೇಧ ಹೇರಿದ್ದರು. ಟಿಕ್‌ಟಾಕ್‌ನಲ್ಲಿ ಟ್ರಂಪ್‌ರ ಖಾತೆಯಿಲ್ಲ, ನಿಜ. ಆದರೂ ಟ್ರಂಪ್‌ರ ಭಾಷಣದ ವೀಡಿಯೊಗಳನ್ನೆಲ್ಲ ತಾನು ಡಿಲೀಟ್‌ ಮಾಡಿದ್ದೇನೆ ಎಂದು ಟಿಕ್‌ಟಾಕ್‌ ಎದೆತಟ್ಟಿಕೊಂಡಿದೆ.

ಯೂಟ್ಯೂಬ್‌: ಅಮೆರಿಕ ಸಂಸತ್‌ನಲ್ಲಿನ ದಾಂಧ‌ಲೆಗೆ ಸಂಬಂಧಿಸಿದಂತೆ, ಟ್ರಂಪ್‌ ಪರವಾದ ಸುಳ್ಳು ಮಾಹಿತಿ ನೀಡುವ ಸಹಸ್ರಾರು ವೀಡಿಯೋಗಳನ್ನು ಯೂಟ್ಯೂಬ್‌ ಈಗಾಗಲೇ ಡಿಲೀಟ್‌ ಮಾಡಿದೆ. “ನಮ್ಮ ಪಾಲಿಸಿಗೆ ವಿರುದ್ಧವಾಗಿ ಯಾವುದೇ ಚಾನೆಲ್‌ ಹಿಂಸೆಗೆ ಪ್ರಚೋದಿಸುವಂಥ ವೀಡಿಯೊ ಪೋಸ್ಟ್‌ ಮಾಡಿದರೆ, ಅಂಥವರಿಗೆ ಎಚ್ಚರಿಕೆ ನೀಡುತ್ತೇವೆ. 90 ದಿನಗಳಲ್ಲಿ ಅವರು 3 ಬಾರಿ ಪಾಲಿಸಿ ಉಲ್ಲಂ ಸಿದರೆ, ಅಂಥ ಚಾನೆಲ್‌ ರದ್ದಾಗಲಿದೆ’ ಎಂದು ಯೂಟ್ಯೂಬ್‌ ತಿಳಿಸಿದೆ.

ಉಳಿದಂತೆ “ರೆಡ್ಡಿಟ್‌’ ತನ್ನ ಸೈಟ್‌ನಲ್ಲಿನ “Donald Trump,” ಗ್ರೂಪ್‌ಗೆ ನಿಷೇಧ ಹೇರಿದೆ. “ಶೋಪಿಫೈ’ ಆ್ಯಪ್‌ ಟ್ರಂಪ್‌ ಕುರಿತಾದ ಪ್ರಚಾರ ನಿಲ್ಲಿಸಿದ್ದಲ್ಲದೆ ತನ್ನ ಆನ್‌ಲೈನ್‌ ಸ್ಟೋರ್‌ನಿಂದ “ಟ್ರಂಪ್‌ಸ್ಟೋರ್‌.ಕಾಂ.’, “ಶಾಪ್‌.ಡೊನಾಲ್ಡ್‌ಟ್ರಂಪ್‌.ಕಾಂ’ಗಳನ್ನು ತೆಗೆದುಹಾಕಿದೆ. ಅಮೆಜಾನ್‌ ಒಡೆತನದ ಲೈವ್‌ ವೀಡಿಯೊ ಸ್ಟ್ರೀಮಿಂಗ್‌ನ ಗೇಮಿಂಗ್‌ ಆ್ಯಪ್‌ “ಟ್ವಿಚ್‌’, ಟ್ರಂಪ್‌ ಖಾತೆಗೆ ಪಂಚ್‌ ಕೊಟ್ಟಿದೆ.

ಪಾರ್ಲರ್‌’ಗೆ ಹೊರಟ ಟ್ರಂಪ್‌ ಬೆಂಬಲಿಗರು! :

ಸಾಮಾಜಿಕ ಜಾಲತಾಣಗಳೆಲ್ಲ ಹೀಗೆ ಕತ್ತಿ ಮಸೆದಿದ್ದಕ್ಕೆ ಟ್ರಂಪ್‌, “ನನ್ನದೇ ಒಂದು ಸಾಮಾಜಿಕ ಜಾಲತಾಣ ಸ್ಥಾಪಿಸುತ್ತೇನೆ’ ಅಂತ ಈಗಾಗಲೇ ಘೋಷಿಸಿದ್ದಾರೆ. ಆದರೆ ರಾತೋರಾತ್ರಿ ಈ ಕೆಲಸ ಅಸಾಧ್ಯ. ಇದನ್ನರಿತೇ ಟ್ರಂಪ್‌ ಬೆಂಬಲಿಗರೀಗ, ಟ್ವಿಟರ್‌- ಇತ್ಯಾದಿಗಳಿಗೆ ಗುಡ್‌ಬೈ ಹೇಳಿ, ಅಧಿಕ ಸಂಖ್ಯೆಯಲ್ಲಿ “ಪಾರ್ಲರ್‌’ ಆ್ಯಪ್‌ ಪ್ರವೇಶಿಸುತ್ತಿದ್ದಾರೆ. 2 ವರ್ಷದ ಹಿಂದೆ ಸ್ಥಾಪಿಸಲಾಗಿರುವ “ಪಾರ್ಲರ್‌’, ಈಗಾಗಲೇ ಟ್ರಂಪ್‌ ಬೆಂಬ ಲಿಗರ ಸಾಮ್ರಾಜ್ಯವಾಗಿದೆ. ಸರಿ ಸುಮಾರು 1.2 ಕೋಟಿ ಸಕ್ರಿಯ ಬಳಕೆದಾರರನ್ನು “ಪಾರ್ಲರ್‌’ ಹೊಂದಿದೆ.

ಟ್ರಂಪ್‌ ಖಾತೆ ಡಿಲೀಟ್‌: ಟ್ವಿಟರಿನಲ್ಲಿ ಮೋದಿ ನಂ.1! :

ಟ್ರಂಪ್‌ ಖಾತೆಯನ್ನು ಟ್ವಿಟರ್‌ ಶಾಶ್ವತವಾಗಿ ಕಿತ್ತೂಗೆ ದಿರುವ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರೀಗ ಟ್ವಿಟರಿನಲ್ಲಿ “ಅತೀಹೆಚ್ಚು ಹಿಂಬಾಲಕರನ್ನು ಹೊಂದಿರುವ ಸಕ್ರಿಯ ರಾಜಕಾರಣಿ’ಯಾಗಿ ಹೊರಹೊಮ್ಮಿದ್ದಾರೆ. ಟ್ರಂಪ್‌ಗೆ ಟ್ವಿಟರಿನಲ್ಲಿ 8.87 ಕೋಟಿ ಫಾಲೋವರ್ಸ್‌ ಇದ್ದರು. ಅನಂತರದ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ 6.47 ಕೋಟಿ ಫಾಲೋವರ್ಸ್‌ ಹೊಂದಿದ್ದರು. ಕ್ಯಾಪಿಟಲ್‌ ದಾಂಧಲೆ ಹಿನ್ನೆಲೆಯಲ್ಲಿ ಟ್ರಂಪ್‌ ಅವರ ಖಾತೆಯನ್ನು ಟ್ವಿಟರ್‌ ಶಾಶ್ವತವಾಗಿ ಡಿಲೀಟ್‌ ಮಾಡಿದೆ. ಉಳಿದಂತೆ ಟ್ವಿಟರಿನಲ್ಲಿ ಅಮಿತ್‌ ಶಾ 2.42 ಕೋಟಿ, ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ 2.34 ಕೋಟಿ, ರಾಹುಲ್‌ ಗಾಂಧಿ 1.71 ಕೋಟಿ, ಅಮೆರಿಕ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ 1.42 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next