ನವದೆಹಲಿ: ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮನೆಯಲ್ಲಿ ಕಂಪ್ಯೂಟರ್ ನಲ್ಲಿದ್ದ ಮಾಹಿತಿ ಕಳವು ಮಾಡಿರುವ 25 ವರ್ಷದ ಮನೆ ಕೆಲಸದ ಯುವಕನನ್ನು ಪೊಲೀಸರು ಬಂಧಿಸಿರುವುದಾಗಿ ಗುರುವಾರ ತಿಳಿಸಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಬಂಧಿಸಿದ ಕಂಪ್ಯೂಟರ್ ನಲ್ಲಿದ್ದ ಮಾಹಿತಿಯನ್ನು ಮನೆಕೆಲಸ ಮಾಡುತ್ತಿದ್ದ ವಿಷ್ಣು ಕುಮಾರ್ ಎಂಬಾತ ಅಪರಿಚಿತ ವ್ಯಕ್ತಿಗಳಿಗೆ ನೀಡಿರುವುದಾಗಿ ಆರೋಪಿಸಲಾಗಿದೆ.
ದೆಹಲಿ ನಿವಾಸಿಯಾಗಿರುವ ಆರೋಪಿ ವಿಷ್ಣು ಕುಮಾರ್(25ವರ್ಷ) ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಗಳವಾರ ವಿಷ್ಣುವನ್ನು ಬಂಧಿಸಿದ್ದು, ಬುಧವಾರ ದೆಹಲಿಗೆ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಿಯೂಷ್ ಗೋಯಲ್ ಪತ್ನಿ ಮುಂಬೈ ನಿವಾಸದಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸೆಪ್ಟೆಂಬರ್ 19ರಂದು ಬೆಳಕಿಗೆ ಬಂದಿತ್ತು. ಗೋಯಲ್ ಪತ್ನಿ ಮನೆಗೆ ಬಂದಾಗ ಬೆಲೆಬಾಳುವ ಬೆಳ್ಳಿ ಪಾತ್ರೆಗಳು, ಕೆಲವು ಪ್ರಾಚೀನ ವಿಗ್ರಹ ಮತ್ತು ಬಟ್ಟೆಗಳು ನಾಪತ್ತೆಯಾಗಿದ್ದು ಗಮನಿಸಿದ್ದರು.
ವಿಷ್ಣು ಕುಮಾರ್ ಸಚಿವ ಗೋಯಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಆತ ನಾಪತ್ತೆಯಾಗಿದ್ದ. ಅಲ್ಲದೇ ಗೋಯಲ್ ಅವರ ಕಂಪ್ಯೂಟರ್ ನಲ್ಲಿದ್ದ ಹಲವು ಮಾಹಿತಿಯನ್ನು ಬೇರೆಯವರಿಗೆ ನೀಡಿರುವುದು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕುಮಾರ್ ನನ್ನು ಬಂಧಿಸಿರುವ ಪೊಲೀಸರು ವಿಷ್ಣು ವಿರುದ್ಧ ಐಪಿಸಿ ಸೆಕ್ಷನ್ 381(ಕಳ್ಳತನ), 405 (ವಿಶ್ವಾಸದ್ರೋಹ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.