Advertisement

ವಿಷ್ಣುಗುಪ್ತ ವಿ.ವಿ.ಯಲ್ಲಿ ದೇಶೀಯ ಶಿಕ್ಷಣ

09:56 AM Feb 18, 2020 | sudhir |

ಮಂಗಳೂರು: ದೇಶದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಪ್ರತ್ಯೇಕವಾಗಿ ಅನೇಕ ವಿದ್ಯೆಗಳನ್ನು ಕಲಿಸಲಾಗುತ್ತಿದೆ. ಅದಕ್ಕೆ ಭಿನ್ನ ಎಂಬಂತೆ ಗೋಕರ್ಣದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ದೇಸಿ ವಿದ್ಯೆಗಳ ಸಮಗ್ರ ಶಿಕ್ಷಣ ವ್ಯವಸ್ಥೆ ಕಲಿಸುತ್ತೇವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

Advertisement

ಗೋಕರ್ಣ ಅಶೋಕಾವನದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ನಗರದ ಪುರಭವನದಲ್ಲಿ ರವಿವಾರ ನಡೆದ ವಿಶ್ವವಿದ್ಯಾ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವಿಷ್ಣುಗುಪ್ತ ವಿ.ವಿ. ಮಾಮೂಲಿ ವಿ.ವಿ.ಯಾಗಿರದೇ ತಕ್ಷಶಿಲೆಯ ಮರುಸೃಷ್ಟಿ ಎಂಬ ಭಾವದಲ್ಲಿ ಚಾಣಕ್ಯನ ನೆನಪಿನಲ್ಲಿ ನಿರ್ಮಾಣವಾಗಲಿದೆ. ಈ ವಿ.ವಿ.ಯಲ್ಲಿ ಭಾರತೀಯ 18 ವಿದ್ಯೆಗಳು ಮತ್ತು 64 ಕಲೆಗಳನ್ನು ಕೇಂದ್ರೀಕರಿಸಿ ಪಠ್ಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ವಿಷ್ಣುಗುಪ್ತ ವಿ.ವಿ. ಮೊದಲ ದಿನ ದಿಂದಲೇ ಜ್ಞಾನದ ಜತೆ ನಿಷ್ಠೆಯನ್ನು ನೀಡುವ ಕೆಲಸ ಮಾಡುತ್ತದೆ. ದೇಶನಿಷ್ಠೆ, ಧರ್ಮಶೀಲನಾಗಬೇಕು ಎನ್ನುವ ಕಲ್ಪನೆಯಲ್ಲಿ ವಿಷ್ಣುಗುಪ್ತ ವಿ.ವಿ. ಕೆಲಸ ಮಾಡಲಿದೆ ಎಂದರು.

ಆರ್‌ಎಸ್‌ಎಸ್‌ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್‌ ಮಾತನಾಡಿ, ಜ್ಞಾನದ ಕಡೆಗೆ ಹೋಗಲು ಸಾಧನೆ ಮುಖ್ಯ. ಈ ಹಿಂದೆ ವೈಭವದ ಕಾಲಘಟ್ಟ ಇತ್ತು. ಸಾವಿರಾರು ವರ್ಷದಲ್ಲಿ ಅದು ಇಳಿಮುಖವಾಗುತ್ತಾ ಬಂತು. ಈಗ ವೈಭವದ ಕಾಲಘಟ್ಟ ನಿರ್ಮಾಣ ಮಾಡುವ ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದಾರೆ ಎಂದರು.

ಸಂಸದ ನಳಿನ್‌ ಮಾತನಾಡಿ, ಭಾರತ ಜಗದ್ಗುರು ಆಗುವ ನಿಟ್ಟಿನಲ್ಲಿ ಸ್ವಾಮೀಜಿಯವರ ಕಾರ್ಯದ ಜತೆ ನಾವಿದ್ದೇವೆ ಎಂದರು.

Advertisement

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಷ್ಣುಗುಪ್ತ ವಿ.ವಿ. ಮೂಲಕ ಭಾರತದ ಗೌರವ ಮತ್ತಷ್ಟು ಹೆಚ್ಚಾಗಲಿದೆ. ವಿ.ವಿ.ಯ ಕೆಲಸ ಕಾರ್ಯಗಳಿಗೆ ಸರಕಾರದಿಂದ ಪೂರ್ಣ ಪ್ರಮಾಣ ಸಹಕಾರ ನೀಡುತ್ತೇವೆ ಎಂದರು.

ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಭಟ್‌ ಮಾತನಾಡಿ, ವಿಷ್ಣು ಗುಪ್ತ ವಿ.ವಿ.ಯ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಜತೆಗೆ ವೇದಿಕ್‌ ರಿಸರ್ಚ್‌ ಸೆಂಟರ್‌ಗೆ ತಗಲುವ ಖರ್ಚನ್ನು ಬ್ಯಾಂಕ್‌ ವಹಿಸಿಕೊಳ್ಳುತ್ತದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ವಿಹಿಂಪ ಪ್ರಮುಖರಾದ ಎಂ.ಬಿ. ಪುರಾಣಿಕ್‌, ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಕಟೀಲು ದೇವಸ್ಥಾನದ ವಾಸುದೇವ ಆಸ್ರಣ್ಣ ಮೊದಲಾದವರು ಭಾಗವಹಿಸಿದ್ದರು.

ಎ.26ರಿಂದ ತರಗತಿ ಆರಂಭ
ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಎ.26ರಿಂದ ತರಗತಿಗಳು ಆರಂಭವಾಗಲಿವೆ. ಮಾರ್ಚ್‌ ಮೊದಲ ವಾರದಲ್ಲಿ ದಾಖಲಾತಿಗಳು ಆರಂಭಗೊಳ್ಳಲಿವೆ. ಮೊದಲ ಹಂತದಲ್ಲಿ ಎರಡು ವರ್ಷಗಳ ತರಗತಿ ಆರಂಭವಾಗುತ್ತದೆ. ಸಮಸ್ತ ಭಾರತ, ಭಾರತೀಯ ವಿದ್ಯೆಗಳನ್ನು ಪರಿಚಯ ಮಾಡುವ ಪಠ್ಯವಿರುತ್ತದೆ. ಭಾಷಾ ಮಾಧ್ಯಮವಾಗಿ ಸಂಸ್ಕೃತ ಇರುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next