Advertisement
ಕರೋಡಪತಿ ವ್ಯವಹಾರ ಫೇಡಾಕ್ಕೆ ಇಂದಿಗೂ ಮಾರುಕಟ್ಟೆ ಕುಸಿದ ಉದಾಹರಣೆ ಇಲ್ಲವೇ ಇಲ್ಲ. ಕಾರಣ, ಧಾರವಾಡ,ಹುಬ್ಬಳ್ಳಿ,ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಶುಭ ಕಾರ್ಯಗಳಿಗೆ, ಸಂತಸ ಸಂಭ್ರಮ ಹಂಚಿಕೊಳ್ಳಲು ಫೇಢಾ ಬಳಕೆಯಾಗುತ್ತದೆ. ಗಂಡು ಮಗು ಹುಟ್ಟಿದರೆ, ಗ್ರಾಮಕ್ಕೆಲ್ಲ ಫೇಢಾ ಹಂಚುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಈಗಲೂ ರೂಢಿಯಲ್ಲಿದೆ.
ಮೊದಲು ಠಾಕೂರ್‌ಸಿಂಗ್ ಮತ್ತು ಮಿಶ್ರಾ ಎಂಬ ಎರಡು ಕುಟುಂಬಗಳು ಮಾತ್ರ ಈ ವ್ಯಾಪಾರ ಮಾಡುತ್ತಿದ್ದವು. ಅವು ಕೇವಲ ಎರಡು ಮೂರು ಮಳಿಗೆಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಜಾಗತೀಕರಣದ ತಂತ್ರಗಳಿಗೆ ಪ್ರತಿತಂತ್ರಗಳನ್ನು ಹೆಣೆದ ಈ ಕುಟುಂಬಗಳು ಇಂದು ಹುಬ್ಬಳ್ಳಿ-ಧಾರವಾಡದಲ್ಲಿಯೂ 200 ಕ್ಕೂ ಹೆಚ್ಚು ಫೇಢಾ ಮಳಿಗೆಗಳನ್ನು ತೆರೆದಿವೆ. ಜೊತೆಗೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆಯ ಆಯಕಟ್ಟಿನ ಪ್ರದೇಶಗಳು, ಹೈಟೆಕ್ ಮಳಿಗೆಗಳು, ಖಾಸಗಿ ರೆಸ್ಟೋರೆಂಟ್‌ಗಳು, ಮಹಲ್‌ಗಳು ಸೇರಿದಂತೆ ಎಲ್ಲಾ ಕಡೆಯೂ ಇಂದು ಧಾರವಾಡ ಫೇಢಾದ ಮಳಿಗೆಗಳು ಸಿಕ್ಕುತ್ತವೆ.
ಯಾವಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದ್ಯಾರ್ಥಿಭವನದ ಮಸಾಲೆ ದೋಸೆ ವಿದೇಶಕ್ಕೆ ಪ್ರವಾಸ ಮಾಡಿತೋ, ಆ ವೇಳೆಗಾಗಲೇ ಧಾರವಾಡದ ಫೇಡೆ ವಿದೇಶಗಳಲ್ಲಿ ಸುದ್ದಿ ಮಾಡಿತ್ತು.
ಆದರೆ ಅಧಿಕೃತವಾಗಿ ಇದನ್ನು ಯಾರೂ ರಫ್ತು ಮಾಡುತ್ತಿರಲಿಲ್ಲ. ಬದಲಿಗೆ ಪೇಢಾ ಪ್ರಿಯರೇ ಇದನ್ನು ಕೊಂಡು ತಮ್ಮ ನೆಂಟಿರಿಸ್ಟರ ಹುಟ್ಟು ಹಬ್ಬಕ್ಕೋ ಅಥವಾ ಸಿಹಿ ಸಮಾಚಾರದ ಸಂಕೇತ ಎಂಬಂತೆ ಪೇಡಾ ಕಳುಹಿಸಿಕೊಡುತ್ತಿದ್ದರು. ಆದರೆ ಇದೀಗ ಧಾರವಾಡದ ಪೇಡಾ ಅಧಿಕೃತವಾಗಿ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಅಷ್ಟೇಅಲ್ಲ, ಕಾಶ್ಮೀರದ ಕಣಿವೆಗಳನ್ನು ದಾಟಿ ಹೊರ ದೇಶಗಳಿಗೂ ತಲುಪುತ್ತಿದೆ.
ಸಾಮಾನ್ಯವಾಗಿ ಗೋಕಾಕದ ಕರದಂಟು, ಬೆಳಗಾವಿ ಕುಂದಾದ ಜೊತೆಗೆ ಹೋಲಿಕೆಯಾಗುವ ಧಾರವಾಡ ಪೇಡಾ ರುಚಿಯ ಹಿಂದೆ
ಮಲೆನಾಡಿನ ದೇಶಿ ಹಸುಗಳು ತಿನ್ನುವ ದೇಶಿ ಹುಲ್ಲು, ಸ್ವಾದಭರಿತ ಹಾಲು ಮತ್ತು ಖೋವಾ ರೂಪದಲ್ಲಿ ಪೇಢಾ ಮಾಡುವ ಕುಟುಂಬಗಳ ಕೈ ಸೇರುತ್ತದೆ. ಹೀಗಾಗಿ ಧಾರವಾಡದ ಫೇಢಾ ಬೇರೆ ಕಡೆ ತಯಾರಿಸುವ ಫೇಢಾಗಿಂತಲೂ ರುಚಿಯಾಗಿರುತ್ತದೆ. ಅಮೇರಿಕಾ, ಇಂಗ್ಲೆಂಡ್, ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಧಾರವಾಡದ ಪೇಡಾಕ್ಕೆ ಒಳ್ಳೇ ಮಾರುಕಟ್ಟೆ ತೆರೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ವಿದೇಶಗಳಲ್ಲಿರುವ ಉತ್ತರ ಕರ್ನಾಟಕದ ವೈದ್ಯರು, ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳುತಮ್ಮ ಎಲ್ಲ ಕಾರ್ಯಕ್ರಮಗಳಿಗೆಲ್ಲಾ ಪೇಡಾ ತರಿಸಿಕೊಳ್ಳುತ್ತಿದ್ದಾರೆ. ಠಾಕೂರ್‌ಸಿಂಗ್ ಫೇಡಾ ಮಾನ್ಯತೆ
ಧಾರವಾಡದ ಅತ್ಯಂತ ಹಳೆಯ ಮಳಿಗೆ ಹಾಗೂ ಠಾಕೂರ್ ಮನೆತನದ ಠಾಕೂರ್ ಸಿಂಗ್ ಫೇಡಾ ರುಚಿ ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವಗಾಂಧಿಯಾದಿಯಾಗಿ ಎಲ್ಲರಿಗೂ ಇಷ್ಟ. ಪೇಡಾ ಖರ್ಚಾಗುತ್ತಿದೆ ಎಂದರೆ ಇದು ಬರೀ ಪೇಡಾ ತಯಾರಿಸುವ ಮನೆತನಗಳಿಗೆ ಮಾತ್ರ ಲಾಭವಾಗುವುದಿಲ್ಲ. ಸುತ್ತಲಿನ ಹಳ್ಳಿಗಳಲ್ಲಿ ಹಾಲು ಉತ್ಪಾದಿಸುವವರಿಗೂ ಅನುಕೂಲವಾಗುತ್ತದೆ. ಈ ಭಾಗದಲ್ಲಿ ಅನೇಕ ಗೌಳಿ ಕುಟುಂಬಗಳು ಹಾಲಿನಿಂದ ಖುವಾ ಸಿದ್ದಗೊಳಿಸಿ ಅದನ್ನು ಫೇಡಾ ಮತ್ತು ಕುಂದಾ ತಯಾರಿಸುವವರಿಗೆ ಪೂರೈಸುತ್ತವೆ. ಆ ಕುಟುಂಬಗಳಿಗೂ ಫೇಡಾ ಪರೋಕ್ಷವಾಗಿ ಉದ್ಯೋಗ ಒದಗಿಸಿದೆ.
Related Articles
20 ನೇ ಶತಮಾನ ಕೊನೆಯಲ್ಲಿ ಆರಂಭದಲ್ಲಿ ಧಾರವಾಡ ಫೇಢಾ ಎಂದು ಕರೆಯಿಸಿಕೊಂಡಿದ್ದು ಲೈನ್ ಬಝಾರನ ಠಾಕೂರ್ ಸಿಂಗ್ ಫೇಡಾ. ಅದರ ಜೊತೆಗೆ ಮಿಶ್ರಾ ಫೇಡಾ ಕೂಡ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿತು. ಹೀಗಾಗಿ ಧಾರವಾಡದ ಫೇಢಾ ಗೊತ್ತಿರುವವರಿಗೆಲ್ಲ ಈ ಎರಡು ಹೆಸರುಗಳು ಗೊತ್ತಿರಲಿಕ್ಕೇ ಬೇಕು.
Advertisement
18 ನೇ ಶತಮಾನದಲ್ಲಿ ಬಂಗಾಲದಿಂದ ಧಾರವಾಡಕ್ಕೆ ಬಂದು ನೆಲೆನಿಂತ ಈ ಕುಟುಂಬಗಳು ಆರಂಭದಲ್ಲಿ ಬರೀ ಸಿಹಿ ತಿಂಡಿ ತಿನಿಸು ತಯಾರಿಸಿ ಮಾರಾಟ ಮಾಡುತ್ತಿದ್ದವು. ಆದರೆ ಇಲ್ಲಿ ಸಿಕ್ಕುವ ಪರಿಶುದ್ಧ ಹಾಲು ಮತ್ತು ಖುವಾ ನೋಡಿ ಫೇಡಾ ತಯಾರಿಸಲು ಆರಂಭಿಸಿದವು. ಇದೀಗ ಠಾಕೂರ್‌ಸಿಂಗ್ ಕುಟುಂಬ, ಮಿಶ್ರಾ ಕುಟುಂಬಗಳು, ವಿಜಯಾ ಸ್ವೀಟ್ಸ್ ತಿಂಡಿ-ತಿನಿಸು ವ್ಯಾಪಾರಿ ಕುಟುಂಬಗಳು ಫೇಢಾ ಸಿದ್ದಗೊಳಿಸುತ್ತಿದ್ದು, ಅದನ್ನು ಆಕರ್ಷಕ ಪ್ಯಾಕ್‌ಗಳನ್ನು ಬಳಸಿ ಮಾರಾಟದಲ್ಲಿ ತೊಡಗಿವೆ.
ಶತಮಾನಗಳ ಹಿಂದೆ ಆಣೆ,ಪೈಸೆ ಲೆಕ್ಕದಲ್ಲಿ ಮಾರುತ್ತಿದ್ದ ಫೇಡಾ ಕಳೆದ ಐದು ವರ್ಷಗಳಲ್ಲಿ ಡಾಲರ್, ಯೆನ್, ರೂಬೆಲ್ ಹಾಗೂ ಪೌಂಡ್ಸ್ ಲೆಕ್ಕದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಇದೀಗ ಧಾರವಾಡ ನಗರದಿಂದ ಪ್ರತಿ ವರ್ಷ 10 ಸಾವಿರ ಕೆ.ಜಿ. ಗೂ ಅಧಿಕ ಫೇಡಾ ವಿದೇಶಗಳಿಗೆ ತಲುಪುತ್ತಿದೆ.
ಅಮೇರಿಕಾ ಕಂಪನಿ ಜೊತೆ ಒಪ್ಪಂದ ಧಾರವಾಡದಪೇಡಾದ ರುಚಿನೋಡಿದ ಅಮೇರಿಕಾ ಮೂಲದ ಆಹಾರ ಪೂರೈಕೆ ಖಾಸಗಿ ಕಂಪನಿಯೊಂದು ಇಲ್ಲಿನ ಪೇಡಾ ತಯಾರಿಸುವ ಮನೆತನಗಳನ್ನು ಬಿಜಿನೆಸ್ ಪಾರ್ಟ್‌ನರ್ ಮಾಡಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೇಡಾದ ಬ್ರಾಂಡ್ ಅನ್ನು ಪ್ರಚುರ ಪಡೆಸಲು ಮುಂದಾಗಿದೆ. ಆದರೆ ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗುತ್ತಿಲ್ಲ. ಈ ಕೊರಗು ಪೇಡಾ ರಫ್ತು ಮಾಡುವ ಇಲ್ಲಿನ ಕೆಲವು ಮನೆತನಗಳ ಪೇಡಾ ವಹಿವಾಟಿನ ಹಿನ್ನೆಡೆಗೂ ಕಾರಣವಾಗಿದೆ. ಒಂದು ವೇಳೆ ಈ ಒಪ್ಪಂದ ಏರ್ಪಟ್ಟರೆ, ಧಾರವಾಡದ ಪೇಡಾ ಜಗತ್ತಿನ ಟಾಪ್‌ಟೆನ್ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎನ್ನುತ್ತಾರೆ ಮಿಶ್ರಾ ಪೇಡಾದ ಮಾಲೀಕರಾದ ಸತ್ಯಂ ಮಿಶ್ರಾ ಅವರು. ಬದಲಾಯ್ತಾ ರುಚಿ?
ಧಾರವಾಡ ನಗರದ ಪಶ್ಚಿಮ ಭಾಗ ಅಂದರೆ ಕಲಗಟಗಿ, ಖಾನಾಪುರು ತಾಲ್ಲೂಕಿನಲ್ಲಿ ಗುಡ್ಡುಗಾಡ ಪ್ರದೇಶಗಳಿವೆ. ಅಲ್ಲಿ ಗೌಳಿಗರು ದೇಸಿ ಹಸುಗಳನ್ನು ಸಾಕುತ್ತಿದ್ದರು. ಹುಲ್ಲುಗವಾಲುಗಳ ಹೆಚ್ಚಿದ್ದರಿಂದ ದೇಸಿ ಹಾಲು ಸಿಗುತ್ತಿತ್ತು. ಜವಾರಿ ಭತ್ತ ಬೆಳೆಯುತ್ತಿದ್ದರಿಂದ ಅದರ ಹುಲ್ಲು ಆಕಳು, ಎಮ್ಮೆ, ಕೋಣ ಎಲ್ಲದಕ್ಕೂ ಬಳಕೆಯಾಗಿ, ಗುಣಮಟ್ಟದ ದೇಸಿ ಹಾಲು ದೊರೆಯುತ್ತಿತ್ತು. ಇದನ್ನು ಸೇರಿಸಿ ಕೋವ ತಯಾರು ಮಾಡುತ್ತಿದ್ದರು. ಪೇಡ ತಯಾರಕರು ಈ ಕೋವ ಕೊಂಡು ಬಳಸುತ್ತಿದ್ದರು. ರುಚಿ ಹೆಚ್ಚಿರುತ್ತಿತ್ತು. ಈಗ ಏನಾಗಿದೆ, ಈ ಭಾಗದಲ್ಲಿ ಭತ್ತದ ಬದಲು ಕಬ್ಬು ಬಂದಿದೆ. ಹೀಗಾಗಿ ಪೇಡಕ್ಕೆ ಬಳಸುವ ಕೋವ ಬದಲಷ್ಟು ಸ್ವಾದಿಷ್ಟವಾಗಿಲ್ಲ. ಹಾಗಾಗಿ ಹಳೆಯ ರುಚಿ ಈಗಿಲ್ಲ ಅನ್ನೋರು ಇದ್ದಾರೆ. ಪೇಡಾ ಮಾರಾಟಗಾರರೇ ಲೆಕ್ಕ ಹಾಕಿರುವ ಅಂದಾಜಿನಂತೆ ಈ ವರೆಗೂ ಒಟ್ಟು
* 2014 ರಲ್ಲಿ ವಿದೇಶಕ್ಕೆ ರಪ್ತಾದ ಪೇಡಾ : 5 ಸಾವಿರ ಕೆ.ಜಿ.
* 2015 ರಲ್ಲಿ ವಿದೇಶಗಳಿಗೆ ರಫ್ತಾದ ಪೇಡಾ : 7 ಸಾವಿರ ಕೆ.ಜಿ.
* 2017 ರಲ್ಲಿ ವಿದೇಶಗಳಿಗೆ ರಫ್ತಾದ ಪೇಡಾ : 10 ಸಾವಿರ ಕೆ.ಜಿ. * ಸದ್ಯಕ್ಕೆ ಶುದ್ಧ ಪೇಡಾದ ಬೆಲೆ ಕೆ.ಜಿ.ಗೆ 400 ರೂ.ಗಳು.
* ಕಾಲು ಕೆ.ಜಿ.,,ಅರ್ಧ ಕೆ.ಜಿ,, ಮತ್ತು ಒಂದು ಕೆ.ಜಿ. ಪ್ಯಾಕೇಟ್‌ಗಳಲ್ಲಿ ಹೆಚ್ಚು ಮಾರಾಟ.
* ಕಾರ್ಪೋರೇಟ್ ಕಂಪನಿಗಳಿಂದ ಹೆಚ್ಚಿದ ಪೇಡಾದ ಬೇಡಿಕೆ.
*ಕೆಲವು ಸಾಫ್ಟ್‌ವೇರ್ ಕಂಪನಿಗಳ ವಾರ್ಷಿಕ ದಿನಾಚರಣೆಗೆ ಪೇಡಾದ ಖರೀದಿ.
* ಉತ್ತರ ಭಾರತದ ರಾಜ ಮನೆತನಗಳ ಕಾರ್ಯಕ್ರಮಕ್ಕೂ ಪೇಡಾ ಲಗ್ಗೆ. ಬಸವರಾಜ್ ಹೊಂಗಲ್