ಹೊಸದಿಲ್ಲಿ : ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ, ಸಿಕ್ಕಿಂನ ಡೋಕ್‌ಲಾಂ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ಚೀನದಿಂದ ಮಿಲಿಟರಿ ಬೆದರಿಕೆಗೆ ಗುರಿಯಾಗಿರುವ ಭಾರತ ಮತ್ತು ಭೂತಾನ್ ಗೆ ಜಪಾನ್ ತನ್ನ ಬೆಂಬಲವನ್ನು ಪ್ರಕಟಿಸಿದೆ.
ಭಾರತ – ಚೀನ ಗಡಿಯಲ್ಲಿ ಈ ವರೆಗೆ ಶಾಂತಿ – ಸೌಹಾರ್ದದಿಂದ ಕಾಯ್ದುಕೊಂಡು ಬರಲಾಗಿರುವ ಯಥಾಸ್ಥಿತಿಯನ್ನು ಬಲ ಪ್ರದರ್ಶನದ ಮೂಲಕ ಬದಲಾಯಿಸುವ ಯಾವುದೇ ಯತ್ನಗಳನ್ನು ಚೀನ ಮಾಡಕೂಡದು ಎಂದು ಜಪಾನಿನ ರಾಯಭಾರಿ ಕೆಂಜಿ ಹಿರಮತ್ಸು ಹೇಳಿದ್ದಾರೆ.
ಮುಂದಿನ ಸೆಪ್ಟಂಬರ್ 13ರಿಂದ 15ರ ತನಕ ಜಪಾನ್ ಪ್ರಧಾನಿ ಶಿಂಜೋ ಅಬೇ ಅವರು ಭಾರತಕ್ಕೆ ಭೇಟಿ ನೀಡುವುದಕ್ಕೆ ಮುನ್ನವೇ ಜಪಾನ್, ಭಾರತ ಮತ್ತು ಭೂತಾನ್ ಬೆಂಬಲಿಸಿ ಚೀನಕ್ಕೆ ಈ ಬುದ್ಧಿವಾದ ಹೇಳಿರುವುದು ಅತ್ಯಂತ ಮಹತ್ವದ ವಿದ್ಯಮಾನವೆಂದು ತಿಳಿಯಲಾಗಿದೆ.
ಚೀನಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳಿರುವ ಜಪಾನ್ ರಾಯಭಾರಿ ಕೆಂಜಿ ಹಿರಮತ್ಸು ಅವರು ಭೂತಾನ್ ನ ರಾಯಭಾರಿಯೂ ಆಗಿದ್ದಾರೆ.
ಡೋಕ್‌ಲಾಂ ವಿವಾದಿತ ಟ್ರೈ ಜಂಕ್ಷನ್‌ನಲ್ಲಿ ಚೀನೀ ಸೇನೆ ಬಲವಂತದಿಂದ ರಸ್ತೆ ನಿರ್ಮಿಸುವುದನ್ನು ತಡೆದ ಜೂನ್ 16ರ ದಿನಾಂಕದಿಂದ ಸಾಗಿರುವ ಭಾರತ -ಚೀನ ಸೇನೆಯ ಡೋಕ್‌ಲಾಂ ಮುಖಾಮುಖೀಗೆ ಎರಡು ತಿಂಗಳು ಸಂದ ಬಳಿಕದಲ್ಲಿ ಜಪಾನ್ ಇದೇ ಮೊದಲ ಬಾರಿಗೆ ತನ್ನ ರಾಜತಾಂತ್ರಿಕ ನಿಲುವನ್ನು ಸ್ಪಷ್ಟಪಡಿಸಿ ಭಾರತ, ಭೂತನ್ ಬೆಂಬಲಕ್ಕೆ ನಿಂತಿದೆ.