ಬೀಜಿಂಗ್: ಕಳೆದ ವರ್ಷ ಭುಗಿಲೆದ್ದು, ಅನಂತರ ತಣ್ಣಗಾದ ಡೋಕ್ಲಾಂ ವಿವಾದ ಮತ್ತೆ ಭಾರತ-ಚೀನ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈಗ ಹೊಸದಾಗಿ ತಗಾದೆ ತೆಗೆದಿರುವ ಚೀನ, “ಡೋಕ್ಲಾಂ ನಮಗೇ ಸೇರಿದ್ದು’ ಎನ್ನುವ ಮೂಲಕ ಕಾಲು ಕೆರೆದುಕೊಳ್ಳಲು ಆರಂಭಿಸಿದೆ.
ಸೋಮವಾರ ಈ ಕುರಿತು ಮಾತನಾಡಿರುವ ಚೀನ ವಿದೇಶಾಂಗ ಸಚಿವಾಲಯದ ವಕ್ತಾರ ರಾದ ಹುವಾ ಚುನ್ಯಿಂಗ್, “ಡೋಂಗ್ಲಾಂಗ್ (ಡೋಕ್ಲಾಂ) ಚೀನಕ್ಕೆ ಸೇರಿದ್ದು. ಕಳೆದ ವರ್ಷದ ವಿವಾದದಿಂದಾಗಿಯಾದರೂ ಭಾರತವು ಪಾಠ ಕಲಿಯಬೇಕಿತ್ತು’ ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದಷ್ಟೇ ಚೀನದಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಂಬಾವಲೆ ಅವರು, ಡೋಕ್ಲಾಂ ವಿವಾದಕ್ಕೆ ಚೀನ ಕಾರಣ ಎಂದು ಹೇಳಿಕೆ ನೀಡಿದ್ದರು. ಅದರಿಂದ ಕೆಂಡಾಮಂಡಲ ವಾದ ಚೀನ ಅದಕ್ಕೆ ಪ್ರತಿಕ್ರಿಯೆಯಾಗಿ ಸೋಮವಾರ ಈ ಹೇಳಿಕೆ ನೀಡಿದೆ.
ಭಾರತ ಒಪ್ಪಂದವನ್ನು ಗೌರವಿಸಲಿ: ಕಳೆದ ವರ್ಷ ನಮ್ಮ ಅವಿರತ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಡೋಕ್ಲಾಂ ವಿವಾದವು ಬಗೆ ಹರಿಯಿತು. ಅಂದಿನ ವಿವಾದದಿಂದಲೇ ಭಾರತ ಪಾಠ ಕಲಿಯಬೇಕಿತ್ತು. ಐತಿಹಾಸಿಕ ಒಪ್ಪಂದವನ್ನು ಗೌರವಿಸಿ, ಚೀನದೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಾಗುವಂತೆ ಗಡಿಯಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಭಾರತ ಮಾಡಬೇಕಿತ್ತು ಎಂದು ಹೇಳಿದ್ದಾರೆ ಚುನ್ಯಿಂಗ್. ಅಲ್ಲದೆ, ಡೋಕ್ಲಾಂ ಯಾವತ್ತಿದ್ದರೂ ನಮ್ಮದೇ. ಅಲ್ಲಿ ನಾವು ನಡೆ ಸುವ ಎಲ್ಲ ಚಟುವಟಿಕೆಗಳೂ ನಮ್ಮ ಹಕ್ಕು. ಯಥಾಸ್ಥಿತಿಯನ್ನು ಬದಲಾಯಿಸುವಂಥ ಯಾವ ಕೆಲಸವೂ ಅಲ್ಲಿ ನಡೆದಿಲ್ಲ ಎಂದೂ ಅವರು ಹೇಳಿದ್ದಾರೆ. ಭಾರತದ ಜತೆ ಗಡಿಗೆ ಸಂಬಂಧಿಸಿದ 20 ಸುತ್ತು ಮಾತುಕತೆ ನಡೆದಿದ್ದು, ವಿವಾದ ಶಾಂತಿಯುತವಾಗಿ ಬಗೆಹರಿಸುವ ಪ್ರಯತ್ನ ಮುಂದುವರಿದಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಬಂಬಾವಲೆ ಹೇಳಿದ್ದೇನು?: ಇತ್ತೀಚೆಗೆ ಹಾಂಕಾಂಗ್ ಮೂಲದ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್‌ಗೆ ಸಂದರ್ಶನ ನೀಡಿದ್ದ ರಾಯಭಾರಿ ಬಂಬಾವಲೆ, “ಡೋಕ್ಲಾಂ ಬಿಕ್ಕಟ್ಟಿಗೆ ಚೀನ ಕಾರಣ. ಅಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳುವುದು ಬಿಟ್ಟು, ಚೀನ ಅದನ್ನು ಬದಲಿಸಲು ಯತ್ನಿಸಿದ್ದರಿಂದಲೇ ವಿವಾದ ಶುರುವಾಯಿತು. ಮುಂದೆ ಅಂಥ ಪ್ರಯತ್ನ ನಡೆದರೆ, ಮತ್ತೂಂದು ಡೋಕ್ಲಾಂ ಮಾದರಿ ಬಿಕ್ಕಟ್ಟು ಆರಂಭವಾಗಲಿದೆ’ ಎಂದು ಎಚ್ಚರಿಸಿದ್ದರು. ಬಳಿಕ ರವಿವಾರ ಮಾತನಾಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, “ಭಾರತವು ಅಲರ್ಟ್ ಆಗಿದ್ದು, ಡೋಕ್ಲಾಂನಲ್ಲಿ ಯಾವುದೇ ಅನಿರೀಕ್ಷಿತ ಸವಾಲು ಎದುರಾದರೂ ಸಮರ್ಥವಾಗಿ ನಿಭಾಯಿಸಲು ಸಿದ್ಧರಿದ್ದೇವೆ’ ಎಂದು ನುಡಿದಿದ್ದರು.