ಮೈಸೂರು: ರಂಗಾಯಣದ ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ಮೂಲಕ ತಂಡವಾಗಿ ಕೆಲಸ ಮಾಡುತ್ತಾ, ರಂಗಭೀಷ್ಮ ಬಿ.ವಿ.ಕಾರಂತರು ಕಂಡ ಕನಸನ್ನು ನನಸು ಮಾಡಲು ಶ್ರಮಿಸುವುದಾಗಿ ಮೈಸೂರು ರಂಗಾಯಣದ ನೂತನ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಭರವಸೆ ನೀಡಿದರು. ಮೈಸೂರು ರಂಗಾಯಣದ ನಿರ್ದೇಶಕರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಬಿ.ವಿ.ಕಾರಂತರಂತಹ ರಂಗಭೀಷ್ಮ ಕಟ್ಟಿದ ಮೈಸೂರು ರಂಗಾಯಣದ ನಿರ್ದೇಶಕನಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು.
ಕೊಡಗಿನಲ್ಲಿ ರಂಗಭೂಮಿ ಕಟ್ಟಬಹುದೆಂಬ ಹುಂಬ ಧೈರ್ಯದೊಂದಿಗೆ ಕಳೆದ 40 ವರ್ಷಗಳಲ್ಲಿ ಪತ್ನಿ ಅನಿತಾ ಜತೆಗೆ ಅನೇಕ ಏಳುಬೀಳು ಕಂಡರೂ ರಂಗಭೂಮಿ ಕಟ್ಟುವಲ್ಲಿ ಯಶಸ್ವಿಯಾಗಿದ್ದೇವೆ. ಮೈಸೂರು ರಂಗಾಯಣವನ್ನು ಕಟ್ಟಿದ ಬಿ.ವಿ.ಕಾರಂತರು ಅನೇಕ ಕನಸುಗಳನ್ನು ಕಂಡಿದ್ದಾರೆ. ಅನೇಕರು ರಂಗಾಯಣದ ನಿರ್ದೇಶಕರಾಗಿ ಕೆಲಸ ಮಾಡಿ ಹೋಗಿದ್ದಾರೆ. ಸರ್ಕಾರದ ಧೋರಣೆಯಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಏಕವ್ಯಕ್ತಿ ಪ್ರದರ್ಶನ ಮಾಡಲಾಗಲ್ಲ. ಎಲ್ಲರೂ ತಂಡವಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಂತಹ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ. ಈ ಸವಾಲನ್ನು ಸ್ವೀಕರಿಸುತ್ತೇವೆ. ಆದರೆ, ಕಾಲಾವಕಾಶ ಕಡಿಮೆ ಇರುವುದರಿಂದ ಆತುರಾತುರವಾಗಿ ಮಾಡಿ ಬಹುರೂಪಿಯ ಚೆಂದ ಕೆಡಿಸಲಾರೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಪೇಲವವಾಗಬಾರದು ಎಂಬ ಕಾರಣಕ್ಕೆ ಒಂದಷ್ಟು ದಿನ ಮುಂದೆ ಹೋಗುತ್ತೆ. ಬಹುರೂಪಿ ನಾಟಕೋತ್ಸವ ದೇಶದ ಮೂಲೆ ಮೂಲೆ ತಲುಪುವಂತೆ ಯಶಸ್ವಿ ನಾಟಕೋತ್ಸವವನ್ನು ಎಲ್ಲರೂ ಸೇರಿ ಚೆಂದವಾಗಿ ಕಟ್ಟೋಣ ಎಂದರು.
ಬದಲಾವಣೆ ಸರಿಯಲ್ಲ: ಈ ಹಿಂದೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ಕೇವಲ 8 ತಿಂಗಳು ಕೆಲಸ ಮಾಡಿದ್ದೆ, ಸರ್ಕಾರಗಳು ಬದಲಾದಂತೆ ಸಾಂಸ್ಕೃತಿಕ ಪ್ರಾಧಿಕಾರಗಳು ಬದಲಾಗಬಾರದು. ರಾಜಕಾರಣಕ್ಕಾಗಿ ಈ ಪದವಿಗೆ ಬಂದಿರಲ್ಲ. 3 ವರ್ಷಗಳ ಅವಧಿಗೆ ತಮ್ಮದೇ ಆದ ಯೋಜನೆಯನ್ನು ಹಾಕಿಕೊಂಡು ಬಂದಿರುತ್ತಾರೆ. ಹೀಗಾಗಿ ರಂಗಾಯಣದ ನಿರ್ದೇಶಕರಿಗೆ ಮೂರು ವರ್ಷದ ಅಧಿಕಾರ ಅವಧಿ ಪೂರ್ಣ ಸಿಗಬೇಕು. ಈ ಬಗ್ಗೆ ಡಾ.ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಶಿಫಾರಸು ಕೂಡ ಇದೆ ಎಂದರು.
ರಂಗಾಯಣದ ಗ್ರೀಷ್ಮ ರಂಗೋತ್ಸವದಲ್ಲಿ ಕೊಡವ, ತುಳು, ಕೊಂಕಣಿ, ಬ್ಯಾರಿ, ಅರೆ ಭಾಷೆ ಸೇರಿದಂತೆ ಎಲ್ಲಾ ಭಾಷೆಗಳ ನಾಟಕಗಳಿಗೂ ಒತ್ತು ನೀಡಲಾಗುವುದು. ರಂಗಾಯಣ ಇರುವುದೇ ರಂಗಭೂಮಿ ಕಟ್ಟುವುದಕ್ಕೆ, ರಂಗಭೂಮಿಗೆ ಭಾಷೆ ಇಲ್ಲ. ರಂಗಭೂಮಿಯೇ ಒಂದು ಭಾಷೆ ಎಂದು ಹೇಳಿದರು. ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅವರು ಹೂಗುತ್ಛ ನೀಡುವ ಮೂಲಕ ನೂತನ ನಿರ್ದೇಶಕರನ್ನು ಬರಮಾಡಿಕೊಂಡು, ಅಧಿಕಾರ ಹಸ್ತಾಂತರಿಸಿದರು.
ರಂಗಾಯಣದ ಹಿರಿಯ ಕಲಾವಿದ ಕಟ್ಟಿàಮನಿ, ಕೊಡವ ಸಮಾಜದ ಅದೆಂಗಡ ಕುಟ್ಟಪ್ಪ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಮೊದಲಾದವರು ಉಪಸ್ಥಿತರಿದ್ದರು.