ವಾಡಿ: ಸಿಮೆಂಟ್ ನಗರಿ ವಾಡಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪಾದಚಾರಿಗಳು ರಸ್ತೆಗೆ ಬರಲು ಎದೆಗಾರಿಕೆ ಪ್ರದರ್ಶಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲ ಶುರುವಾಗಿದ್ದು, ನಾಯಿಗಳ ಹಿಂಡು ಸಾರ್ವಜನಿಕರ ನೆಮ್ಮದಿ ಹಾಳು ಮಾಡಿವೆ. ಮಕ್ಕಳು, ಮಹಿಳೆಯರು, ಹಿರಿಯರು, ಯುವಕರೆನ್ನದೇ ಬೀದಿ ನಾಯಿಗಳ ಹೆದರಿಕೆಯಲ್ಲೇ ಹೆಜ್ಜೆಯಿಡುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ.
ಎಸಿಸಿ ಕಾಲೋನಿ, ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆ, ಪಿಲಕಮ್ಮಾ ಬಡಾವಣೆ, ರಾಮ ಮಂದಿರ ಬಡಾವಣೆ, ಕಲಕಮ್‌ಕರ್ ಏರಿಯಾ, ಮಾಂಸ ಮಾರುಕಟ್ಟೆ, ವಿಜಯನಗರ, ಭೀಮನಗರ, ಸೋನಾಬಾಯಿ ಏರಿಯಾ, ರೆಸ್ಟ್‌ಕ್ಯಾಂಪ್ ತಾಂಡಾ, ಶಿವರಾಯ ಚೌಕಿ, ರೈಲ್ವೆ ಕಾಲೋನಿ, ಹನುಮಾನ ನಗರ ಸೇರಿದಂತೆ ಇನ್ನಿತರ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಪುರಸಭೆಗೆ ದೂರು ಕೊಟ್ಟರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಬೀದಿ ನಾಯಿಗಳ ಸಂಖ್ಯೆ ದಿನೇದಿನೆ ಬೆಳೆಯುತ್ತಿದೆ. ಈಗಾಗಲೇ ಕೆಲ ಬಡಾವಣೆಗಳಲ್ಲಿ ನಾಯಿ ಕಡಿತದ ವರದಿಗಳು ಬಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿ ಕಡಿತದಿಂದ ಚಿಕಿತ್ಸೆ ಪಡೆದವರು ಲೆಕ್ಕವಿಡಲಾಗುತ್ತಿದೆ. ಬೀದಿ ನಾಯಿ ಕಡಿತದ ಔಷಧ ಸಿದ್ಧವಿಡಲಾಗಿದ್ದು, ಗಾಯಾಳುಗಳ ಚಿಕಿತ್ಸೆಗಾಗಿ ವೈದ್ಯರು ಸಿದ್ಧರಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ ಕಚ್ಚುವ ನಾಯಿಗಳನ್ನು ಹಿಡಿದು ಸ್ಥಳಾಂತರಿಸಬೇಕಾದ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಪಾದಚಾರಿಗಳನ್ನು ಹಿಂಬಾಲಿಸಿಕೊಂಡು ಓಡುವ ನಾಯಿಗಳಿಂದ ಆತಂಕದ ವಾತಾವರಣ ಮೂಡಿಸಿದೆ.
ಬೆಳಗ್ಗೆ ವಾಕಿಂಗ್ ಹೋಗುವವರಂತೂ ನಾಯಿಗಳನ್ನು ಕಂಡು ಹೆದರುವಂತಾಗಿದೆ. ಶಾಲೆಗೆ ಹೋಗುವ ಮಕ್ಕಳು ಪಾದಚಾರಿಗಳ ಸಹಾಯ ಪಡೆಯಬೇಕಾಗಿದೆ. ಪೋಷಕರು ಮಕ್ಕಳನ್ನು ಹೊರಗಡೆ ಬಿಡಲು ಹೆದರುತ್ತಿದ್ದಾರೆ. ರಕ್ತದ ರುಚಿ ಕಂಡಿರುವ ನಾಯಿಗಳು ಹುಚ್ಚೆದ್ದು ದಾಳಿ ಕ್ರೌರ್ಯಕ್ಕೆ ಮುಂದಾಗುವ ಮುಂಚೆ ಪುರಸಭೆ ಆಡಳಿತ ಎಚ್ಚೆತ್ತುಕೊಂಡರೆ ಗಂಭೀರ ದಾಳಿಗಳನ್ನು ತಪ್ಪಿಸಬಹುದಾಗಿದೆ. ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಈ ಕುರಿತು ಗಂಭೀರ ಚಿಂತನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.