Advertisement

ಶಂಕಿತ ಮೆದುಳು ಜ್ವರಕ್ಕೆ ಶ್ವಾನಗಳು ಬಲಿ!ಮಾರ್ಚ್‌ನಲ್ಲಿ 604ಕ್ಕೂ ಅಧಿಕ ಶಂಕಿತ ಪ್ರಕರಣ ದಾಖಲು

12:42 PM Apr 22, 2024 | Team Udayavani |

ಸುಳ್ಯ: ಬೇಸಗೆಯ ಬಿಸಿಲ ಬೇಗೆಯ ನಡುವೆ ಕೆಲವೆಡೆ ಶಂಕಿತ ಮೆದುಳು ಜ್ವರಕ್ಕೆ ಶ್ವಾನಗಳು ಸಾಯುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. ಮೆದುಳು ಜ್ವರ ನಾಯಿಗಳಲ್ಲಿ ಕಂಡು ಬರುವ ಸಾಮಾನ್ಯ ರೋಗವಾಗಿದ್ದು, ನಿಯಂತ್ರಣ ಸಾಧ್ಯವಿದ್ದರೂ ಇದು ಮಾರಕ ರೋಗವೂ ಹೌದು. ಆದರೆ ಇದು ಮನುಷ್ಯರಿಗೆ ಹರಡುವುದಿಲ್ಲ.

Advertisement

ಹೆಚ್ಚಾಗಿ ನಾಯಿಗಳು ಮರಿ ಹಾಕುವ ಸಮಯದಲ್ಲಿ ಇದು ಕಂಡುಬರುತ್ತವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ವರ್ಷದ ಯಾವ ಸಮಯದಲ್ಲಿಯೂ ಈ ರೋಗ ನಾಯಿಗಳಿಗೆ ತಗಲಬಹುದು. ಪ್ರಾರಂಭದಲ್ಲಿ ಆ್ಯಂಟಿ ಬಯೋಟಿಕ್‌ ಚಿಕಿತ್ಸೆ ಮೂಲಕ ರೋಗ ಬಾರದಂತೆ ತಡೆಯಬಹುದಾಗಿದೆ. ವಾಂತಿ, ಭೇದಿ ಆರಂಭವಾದಲ್ಲಿ ನಾಯಿಗಳು ಬೇಗನೆ ಸಾವಿಗೀಡಾಗುತ್ತವೆ. ರೋಗ ಬಾರದಂತೆ ಆರಂಭದಲ್ಲಿ ಇಂತಿಷ್ಟು ದಿನಗಳ ಬಳಿಕ ಹಾಗೂ ದಿನಗಳ ಅಂತರದಲ್ಲಿ ಲಸಿಕೆ ನೀಡಿದಲ್ಲಿ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.

ಲಕ್ಷಣಗಳು: ಮೆದುಳು ಜ್ವರ ಪೀಡಿತ ನಾಯಿ ವಿಪರೀತ ಜ್ವರಕ್ಕೆ ಈಡಾಗುತ್ತದೆ. ತಲೆ ಮೇಲೆತ್ತಲು ಆಗದ ಸ್ಥಿತಿಗೆ ತಲುಪುತ್ತವೆ. ಆಹಾರ ಸೇವನೆಯನ್ನು ತ್ಯಜಿಸಿ ಆರೋಗ್ಯದಲ್ಲಿ ಕ್ಷೀಣಿವಾಗುತ್ತದೆ. ವಾಂತಿ ಭೇದಿ, ನರ ದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆಗಳು ಕಂಡುಬರುತ್ತವೆ. ರೋಗ ಪೀಡಿತ ನಾಯಿ ಆಹಾರ ಸೇವನೆ ಕಡಿಮೆ ಮಾಡಿ ಕೊನೆಗೆ ನೀರನ್ನು ಮಾತ್ರ ಸೇವಿಸುತ್ತದೆ. ಬಳಿಕ ಆಹಾರವನ್ನೂ ತ್ಯಜಿಸುತ್ತದೆ. ಮೆದುಳು ಜ್ವರ ಎಂಬುದು ನಾಯಿಗಳಿಂದ ನಾಯಿಗಳಿಗೆ ಹರಡುತ್ತದೆ. ಮನುಷ್ಯರಿಗೆ ಹರಡುವುದಿಲ್ಲ, ಇದು ರೇಬಿಸ್‌ ರೋಗವೂ ಅಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಏರಿಕೆಯತ್ತ ಶಂಕಿತ ಪ್ರಕರಣಗಳು
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಪಶುಪಾಲನ ಇಲಾಖೆಯ ಆಸ್ಪತ್ರೆಗಳಲ್ಲಿ ದಾಖಲಾದ ಶಂಕಿತ ಮೆದುಳು ಜ್ವರ (ಕೆನೈನ್‌ ಡಿಸ್ಟೆಂಪರ್‌) ಕೆಲ ತಿಂಗಳಿಂದ ಏರಿಕೆಯಾಗುತ್ತಿದೆ. ಪಶುಪಾಲನ ಆಸ್ಪತ್ರೆಗಳಲ್ಲಿ ದಾಖಲಿ ಸಿಲಾದ/ಹಾಜರುಪಡಿ ಸಲಾದ ನಾಯಿಗಳಲ್ಲಿ ತಪಾಸಣೆ ವೇಳೆ ಶಂಕಿತ ಮೆದುಳು ಜ್ವರ ಕಂಡುಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಲ್ಲಿ 433, ಫೆಬ್ರವರಿಯಲ್ಲಿ 582 ಹಾಗೂ ಮಾರ್ಚ್‌ನಲ್ಲಿ 604 (ಮಂಗಳೂರು-128, ಬಂಟ್ವಾಳ-138, ಬೆಳ್ತಂಗಡಿ-66, ಪುತ್ತೂರು-46, ಸುಳ್ಯ-146, ಮೂಡುಬಿದಿರೆ-30, ಕಡಬ-10 ಉಳ್ಳಾಲ-17, ಮುಲ್ಕಿ 24) ಶಂಕಿತ ಪ್ರಕರಣಗಳು ದಾಖಲಾಗಿವೆ. ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಖಾಸಗಿ ಕ್ಲಿನಿಕ್‌, ಮೆಡಿಕಲ್‌ ಹಾಗೂ ಬೀದಿ ನಾಯಿಗಳಲ್ಲಿ ಈ ರೋಗಕ್ಕೆ ಔಷಧಿ ಪಡೆದಿರುತ್ತಾರೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಇಲ್ಲ. ಆದ್ದರಿಂದ ಇನ್ನೂ ಅಧಿಕ ಪ್ರಕರಣಗಳು ಪತ್ತೆಯಾಗಿರುವ ಶಂಕೆ ಇದ್ದು, ಹಲವು ನಾಯಿಗಳು ರೋಗದಿಂದ ಸಾವನ್ನಪ್ಪಿರುವ ಘಟನೆಯು ನಡೆದಿವೆ.

ಈ ರೋಗವನ್ನು ನಿಯಂತ್ರಿಸಲು ಸಾಧ್ಯವಿದ್ದು, ರೋಗದ ಲಕ್ಷಣಗಳು ಕಂಡುಬಂದ ಆರಂಭದಿಂದಲೇ ಚಿಕಿತ್ಸೆ ನೀಡಬೇಕಾಗುತ್ತದೆ. ರೋಗಕ್ಕೆ ಸಂಬಂಧಿಸಿದ ಲಸಿಕೆ ಹಾಕಿಸುವ ಮೂಲಕ ರೋಗ (ಮೆದುಳು ಜ್ವರ) ನಿಯಂತ್ರಿಸಬಹುದು. ನಾಯಿ ಜಾನುವಾರು ಗುಂಪಿಗೆ ಸೇರದೆ ಇರುವುದರಿಂದ ಮೆದುಳು ಜ್ವರಕ್ಕೆ ಪಶು ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ ಸಿಗುವುದಿಲ್ಲ. ಖಾಸಗಿ ಮೆಡಿಕಲ್‌ಗ‌ಳಲ್ಲಿ ಲಸಿಕೆ ಲಭ್ಯವಿರುತ್ತದೆ. ರೋಗ ಬಾ ಧಿತ ನಾಯಿಯಿಂದ ಇನ್ನೊಂದು ನಾಯಿಗೆ ಹರಡುವ ಸಾಧ್ಯತೆ ಇರುವುದರಿಂದ ಆ ರೀತಿ ಹರಡದಂತೆ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ತಜ್ಞರು ತಿಳಿಸಿದ್ದಾರೆ.

Advertisement

ನಾಯಿಗಳಲ್ಲಿ ಮೆದುಳು ಜ್ವರ ಎಂಬುದು ಸಾಮಾನ್ಯವಾಗಿ ಕಂಡುಬರುವ ರೋಗ. ಜಿಲ್ಲೆಯಲ್ಲೂ ನಾಯಿಗಳಲ್ಲಿ ಶಂಕಿತ ಮೆದುಳು ಜ್ವರ ಪ್ರಕರಣಗಳು ಪತ್ತೆಯಾಗಿವೆ. ಇದರ ನಿಯಂತ್ರಣ ಸಾಧ್ಯವಿದ್ದು, ಸ್ಥಳೀಯ ಪಶುಪಾಲನ ಇಲಾಖೆ ವೈದ್ಯರಲ್ಲಿ ಮಾಹಿತಿ ಪಡೆಯಬಹುದು.
– ಡಾ| ಅರುಣ್‌ ಕುಮಾರ್‌ ಶೆಟ್ಟಿ, ಉಪನಿರ್ದೇಶಕರು
ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು, ದ.ಕ.

– ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next