ಬೆಂಗಳೂರಲ್ಲಿ ಬಹುತೇಕ ಮನೆಗಳಲ್ಲಿ ನಾಯಿಗಳಿವೆ. ಆದರೆ ಆ ನಾಯಿಗೆ ಕಾಂಪೌಂಡ್ ಅಥವಾ ಮನೆ ಬಾಗಿಲು ದಾಟಿ ಆಚೆ ಹೋಗುವುದು ಕಷ್ಟ. ಯಾರಾದರೂ ಕತ್ತಿಗೆ ಹಗ್ಗ ಹಾಕಿ ವಾಕಿಂಗ್ ಹೋಗುವಾಗ ಕರೆದುಕೊಂಡು ಹೋದರೆ ಮಾತ್ರ ಪ್ರಪಂಚ ನೋಡುವ ಭಾಗ್ಯ. ಇಲ್ಲದಿದ್ದರೆ ಮನೆಯಲ್ಲೋ ಕಾಂಪೌಂಡಲ್ಲೋ ಇರಬೇಕು. ಹಳ್ಳಿಗಳಲ್ಲಿ ಹೀಗಿರುವುದಿಲ್ಲ. ನಾಯಿಗಳಿಗೆ ತಿರುಗಾಡೋಕೆ ಸ್ವತ್ಛಂದವಾದ ಜಾಗಗಳಿರುತ್ತವೆ. ಆದರೆ ಬೆಂಗಳೂರಲ್ಲಿ ಕಷ್ಟ. ಈ ನಾಯಿ ಪ್ರೇಮಿಗಳ ಕಷ್ಟವನ್ನು ಅರ್ಥ ಮಾಡಿಕೊಂಡಿರುವುದರಿಂದಲೇ ಒಂದು ವಿಶಿಷ್ಟ ಪ್ರೈವೇಟ್ ಪಾರ್ಕ್ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದರ ಹೆಸರು ಡಾಗ್ ಪಾರ್ಕ್.
ಏನಿದು ಡಾಗ್ ಪಾರ್ಕ್?
ನಾಯಿಗಳಿಗಾಗಿ ಇರುವ ವಿಶಾಲವಾದ ಪಾರ್ಕ್ ಇದು. ನಾಯಿಗಳನ್ನು ಇಷ್ಟಪಡುವವರು ಈ ಪಾರ್ಕುಗಳಿಗೆ ನಾಯಿಗಳನ್ನು ಕರೆದುಕೊಂಡು ಹೋಗಬಹುದು. ಇಲ್ಲಿ ಕೆರೆ ಇದೆ, ಸ್ವಿಮ್ಮಿಂಗ್ ಪೂಲ್ ಇದೆ, ವಿಶಾಲವಾದ ಮೈದಾನವಿದೆ. ನಾಯಿಗಳನ್ನು ಇಲ್ಲಿಗೆ ಕರೆದುಕೊಂಡು ಹೋದರೆ ಮನಸೋ ಇಚ್ಛೆ ಆಟವಾಡಿಕೊಂಡಿರುತ್ತದೆ. ಯಾವಾಗಲೂ ಮನೆಯೊಳಗ ಇರುವ ನಾಯಿಗಳಿಗಂತೂ ಇದು ಸ್ವರ್ಗ. ಇಲ್ಲಿರುವ ಕೆರೆಯಲ್ಲಿ ನಾಯಿಗಳು ಆಟವಾಡಿಕೊಂಡಿರುವುದನ್ನು ನೋಡುವುದೇ ಚೆಂದ.
ಅದರ ಜೊತೆಗೆ ನಾಯಿಗಳಿಗೆ ಪಾಠ ಕಲಿಸಬೇಕು ಅಂತಿದ್ದರೂ ಇಲ್ಲಿ ಟ್ರೇನರ್‌ಗಳಿರುತ್ತಾರೆ. ನಾಯಿಗಳಿಗೆ ಏನು ತಿನ್ನಿಸಬೇಕು, ನಾಯಿಗಳು ಯಾವಾಗ ಹೇಗೆಗೆ ವರ್ತಿಸುತ್ತವೆ ಅಂತೆಲ್ಲಾ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಸೆಮಿನಾರ್‌ಗಳನ್ನೂ ಇಲ್ಲಿ ಆಯೋಜಿಸಲಾಗುತ್ತದೆ. ಏನಕ್ಕೂ ನೀವು ಡಾಗ್ ಪಾರ್ಕ್ ಫೇಸ್‌ಬುಕ್ ಲೈಕ್ ಮಾಡಿದರೆ ನಿಮಗೆ ಕಾಲಕಾಲಕ್ಕೆ ಮಾಹಿತಿ ಸಿಗುತ್ತದೆ.
ಅಷ್ಟೇ ಅಲ್ಲ, ಇಲ್ಲಿ ನಾಯಿಗಳಿಗಾಗಿ ಒಂದಷ್ಟು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಉದಾಹರಣೆಗೆ ಗುಡ್ ಡಾಗ್ ಅನ್ನೋ ಸ್ಪರ್ಧೆ. ಆಸಕ್ತಿ ಇರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ನಾಯಿಗಳನ್ನು ಕರೆದುಕೊಂಡು ಹೋಗಬಹುದು. ಪೆಟ್ ಪಾರ್ಟಿಗಳನ್ನೂ ಇಲ್ಲಿ ಆಯೋಜಿಸಬಹುದು. ನಾಯಿಯನ್ನು ಪ್ರೀತಿಸುವವರು ಒಂದು ದಿನ ಪುರ್ಸೊತ್ತು ಮಾಡಿಕೊಂಡು ಈ ಡಾಗ್ ಪಾರ್ಕಿಗೆ ಹೋಗಿ ಬನ್ನಿ. ನಾಯಿಗಳು ಎಷ್ಟು ಖುಷಿಯಾಗುತ್ತವೆ ಅಂತ ನೀವೇ ನೋಡಬಹುದು.
ಎಲ್ಲಿ- ಎಲಿಫೆಂಟ್ ಪಾಂಡ್, ಜಿಗಣಿ ಹೋಬ್ಳಿ
ದೂ- 99868 63989
ಫೇಸ್‌ಬುಕ್- https://www.facebook.com/DogParkBlr/
ಇಮೇಲ್- dogparktep@gmail.com