Advertisement

ನಿಮ್ಮನೆ ಶ್ವಾನಕ್ಕೆ ಮೈಕ್ರೋಚಿಪ್‌ ಇದೆಯಾ?

12:49 AM Feb 25, 2020 | Lakshmi GovindaRaj |

ಬೆಂಗಳೂರು: ನಮ್ಮ ಸಾಕು ನಾಯಿಗೆ ಇದುವರೆಗೂ ಮೈಕ್ರೋಚಿಪ್‌ ಅಳವಡಿಸಿಲ್ಲ ಎಂದಾದರೆ ಕೂಡಲೆ ಅಳವಡಿಸಿ. ಹಾಗೇ ಶ್ವಾನಕ್ಕೆ ಪರವಾನಗಿ (ಲೈಸೆನ್ಸ್‌) ಕೂಡ ಮಾಡಿಸಿಬಿಡಿ. ಏಕೆಂದರೆ ಚಿಪ್‌, ಲೈಸೆನ್ಸ್‌ ಇಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ನಿಮಗೆ ದಂಡ ವಿಧಿಸಬಹುದು.

Advertisement

ಸಾಕು ನಾಯಿಗಳ ರಕ್ಷಣೆ, ಆರೋಗ್ಯ ಕಾಪಾಡುವುದು ಹಾಗೂ ನಾಯಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಿಬಿಎಂಪಿ “ಪರಿಷ್ಕೃತ ಸಾಕು ನಾಯಿ ನಿಯಮ-2018′ ಕರಡು ಸಿದ್ಧಪಡಿಸಿ ಕೌನ್ಸಿಲ್‌ ಅನುಮೋದನೆಗೆ ಸಲ್ಲಿಸಿದೆ.

ಹೊಸ ನಿಯಮ ಜಾರಿಗೆ ಬಂದರೆ ನಗರದಲ್ಲಿ ಸಾಕು ನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಸಿ, ಪಾಲಿಕೆ ಯಿಂದ ಪರವಾನಗಿ ಪಡೆಯುವುದು ಕಡ್ಡಾಯ ವಾಗಲಿದೆ. ಬಿಬಿಎಂಪಿ ಸಾಕು ನಾಯಿ ನಿಯಮ- 2018ರ ಪರಿಷ್ಕೃತ ಕರಡು “ಉದಯವಾಣಿ’ಗೆ ಲಭ್ಯವಾಗಿದ್ದು, ಇದರಲ್ಲಿ ವಸತಿ ಸಮುತ್ಛಯಗಳಲ್ಲಿ ವಾಸಿಸುವವರು ಒಂದು ನಾಯಿ ಸಾಕಬೇಕು, ಪ್ರತ್ಯೇಕ ಮನೆ ಹೊಂದಿರುವವರು ಗರಿಷ್ಠ ಮೂರು ನಾಯಿ ಸಾಕಬಹುದು ಎಂದು ತಿಳಿಸಲಾಗಿದೆ.

ನಿಯಮಗಳೇನು?: ಮಾಲೀಕರೇ ಸ್ವಂತ ಖರ್ಚಿನಲ್ಲಿ ಶ್ವಾನಗಳಿಗೆ ಮೈಕ್ರೋಚಿಪ್‌ ಅಳವಡಿಸಬೇಕು. ಆರೋಗ್ಯ ದೃಷ್ಟಿಯಿಂದ ಜಂತುನಾಶಕ ಔಷಧ, ರೇಬಿಸ್‌ ಸೇರಿ ವಿವಿಧ ಲಸಿಕೆ ಹಾಕಿಸಬೇಕು. 12 ತಿಂಗಳಿಗಿಂತ ಮೇಲ್ಪಟ್ಟ ಹೆಣ್ಣು ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಕಡ್ಡಾಯವಾಗಿದ್ದು, ಪಾಲಿಕೆಗೆ ನಿಗದಿತ ಶುಲ್ಕ ಪಾವತಿಸಿ ಎಲ್ಲ ಸಾಕು ನಾಯಿಗಳಿಗೆ ಪರವಾನಗಿ ಪಡೆಯಬೇಕು. ಸಾಕು ನಾಯಿಗಳಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂಬ ದೃಢೀಕರಣವನ್ನು ಬಿಬಿಎಂಪಿಗೆ ನೀಡಬೇಕು ಎಂಬುದರ ಜತೆಗೆ, ತಳಿ ಮತ್ತು ಜಾತಿಗೆ ಅನುಗುಣವಾಗಿ ಪರವಾನಗಿ ಶುಲ್ಕ ವಿಧಿಸುವ ಪ್ರಸ್ತಾವನೆಯೂ ಕರಡಿನಲ್ಲಿದೆ.

ಶ್ವಾನ ದಾಳಿ ಮಾಡಿದರೆ ಮಾಲೀಕರೇ ಹೊಣೆ: ನಾಯಿ ಪ್ರಾಣಕ್ಕೆ- ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುವ, ಸಾರ್ವಜನಿಕರಿಗೆ ತೊಂದರೆಯಾಗುವ ಪರಿಸ್ಥಿತಿ ಎದುರಾದರೆ ಪರಿಶೀಲಿಸುವ ಅಧಿಕಾರ ಬಿಬಿಎಂಪಿ ಪಶುಪಾಲನಾ ವಿಭಾಗದ ಅಧಿಕಾರಿಗಳಿಗೆ ಇರಲಿದೆ. ನಾಯಿಗಳಿಗೆ ತೊಂದರೆ ನೀಡಿ ದರೆ 1 ಸಾವಿರ ರೂ., ಎರಡನೆ ಬಾರಿಯೂ ಇದೇ ರೀತಿ ಮಾಡಿದರೆ ಪ್ರತಿ ದಿನಕ್ಕೆ 300 ರೂ.ದಂಡ ತೆರಬೇಕಾಗುತ್ತದೆ. ನಾಯಿಯಿಂದ ಬೇರೆ ಪ್ರಾಣಿಗೆ, ಮನುಷ್ಯರ ಮೇಲೆ ದಾಳಿಯಾದರೆ ಅದಕ್ಕೆ ಮಾಲೀಕರೇ ಹೊಣೆ. ನಾಯಿಯನ್ನು ಸಾರ್ವಜನಿಕ ಸ್ಥಳಕ್ಕೆ ಕರೆದೊಯ್ಯುವಾಗ ಸರಪಳಿ ಅಥವಾ ಹಗ್ಗ ಬಳಸಬೇಕು.

Advertisement

ನಿರ್ಲಕ್ಷ್ಯ ವಹಿಸಿದರೆ ಈ ಹಿಂದೆಗಿಂತ ಐದು ಪಟ್ಟು ದಂಡ ಬೀಳಲಿದೆ. ಈ ಹಿಂದೆ ಇದಕ್ಕೆ ಇದ್ದ 100 ರೂ. ಕನಿಷ್ಠ ದಂಡ ಮೊತ್ತವನ್ನು 500 ರೂ.ಗೆ ಹೆಚ್ಚಿಸಲಾಗಿದೆ. 2ನೇ ಬಾರಿ ತಪ್ಪಿಗೆ ದುಪಟ್ಟು ದಂಡ ಬೀಳಲಿದೆ. ನಾಯಿಯನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಬಿಟ್ಟರೆ ಅದನ್ನು ಪಾಲಿಕೆ ವಶಕ್ಕೆ ಪಡೆಯಲಿದ್ದು, ಸೂಕ್ತ ದಾಖಲೆ ನೀಡಿ, 72 ಗಂಟೆಯೊಳಗೆ 1 ಸಾವಿರ ರೂ. ದಂಡ ಪಾವತಿಸಬೇಕು. ಮಾಲೀಕರು ಕಾಲಮಿತಿ ಒಳಗೆ ಶ್ವಾನ ಹಿಂಪಡೆ ಯದಿದ್ದರೆ, ಪಾಲಿಕೆ ಅದನ್ನು ಹರಾಜು ಹಾಕಬಹುದು ಅಥವಾ ದತ್ತು ನೀಡಬಹುದು.

ಪರವಾನಗಿ ಶುಲ್ಕದಲ್ಲಿ ಶ್ವಾನ ರಕ್ಷಣೆ: ಪರವಾನಗಿ ಶುಲ್ಕದಿಂದ ಬಂದ ಹಣವನ್ನು ಬೀದಿ ನಾಯಿ ನಿಯಂತ್ರಣಕ್ಕೆ ಹಾಗೂ ರೇಬಿಸ್‌ ರೋಗ ನಿಯಂತ್ರಣ ಲಸಿಕೆಗೆ ಬಳಕೆ ಮಾಡಿಕೊಳ್ಳುವುದಕ್ಕೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲು ಪಾಲಿಕೆ ನಿರ್ಧರಿಸಿದೆ. ರೇಬಿಸ್‌ ಹಾಗೂ ಗಂಭೀರ ಸಾಂಕ್ರಾಮಿಕ ರೋಗ ಕಂಡು ಬಂದರೆ ಸಾರ್ವಜನಿಕ ಆರೋಗ್ಯಕ್ಕೆ ಮಹತ್ವ ನೀಡಿ ನಾಯಿಗೆ ದಯಾಮರಣ ನೀಡುವ ಅಧಿಕಾರ ಬಿಬಿಎಂಪಿಗೆ ಇರಲಿದೆ.

ಪರಿಷ್ಕೃತ ಬೈಲಾ ರಚನೆ: ಬಿಬಿಎಂಪಿ 2018ರಲ್ಲಿ “ಸಾಕು ನಾಯಿ ನಿಯಮ -2018′ ಸಿದ್ಧಪಡಿಸಿ ಜಾರಿಗೆ ಮುಂದಾಗಿತ್ತು. ವಸತಿ ಸಮುತ್ಛಯಗಳಲ್ಲಿ ವಾಸಿಸುವವರು ಒಂದು ನಾಯಿ ಹಾಗೂ ಮನೆಗಳಲ್ಲಿರುವವರು ಮೂರು ನಾಯಿ ಸಾಕಲು ಅವಕಾಶ ನೀಡಲಾಗಿತ್ತು. ನಿಗದಿಗಿಂತ ಹೆಚ್ಚು ನಾಯಿ ಸಾಕಿದರೆ ಪಾಲಿಕೆಯಿಂದ ನೋಟಿಸ್‌ ಜಾರಿ ಮಾಡುವುದು ಹಾಗೂ ನೋಟಿಸ್‌ಗೆ ಉತ್ತರಿಸದಿದ್ದರೆ, ಮಾಲೀಕರಿಗೆ ಭಾರಿ ದಂಡ ಹಾಕಲಾಗುವುದು. ಪ್ರತಿ ನಾಯಿಗೆ ವಾರ್ಷಿಕ ಪಾಲಿಕೆಗೆ ಕಡ್ಡಾಯವಾಗಿ 110 ಪರವಾನಗಿ ಶುಲ್ಕ ಪಾವತಿಸಬೇಕು ಎನ್ನುವುದು ಸೇರಿದಂತೆ ಹಲವು ಕಠಿಣ ಷರತ್ತುಗಳು ಬೈಲಾದಲ್ಲಿದ್ದವು. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ ಪರಿಷ್ಕೃತ ಬೈಲಾ ರಚನೆ ಮಾಡಲಾಗಿದೆ.

ಪರವಾನಗಿಗೆ ಆನ್‌ಲೈನ್‌ ವ್ಯವಸ್ಥೆ: ಸಾಕು ನಾಯಿಗಳಿಗೆ ಪರವಾನಗಿಗೆ ಆನ್‌ಲೈನ್‌ ವ್ಯವಸ್ಥೆ ಮಾಡುವುದಾಗಿ ಪಾಲಿಕೆ ತಿಳಿಸಿದೆ. ನಿಯಮ ಜಾರಿಯಾದ ಆರು ತಿಂಗಳಲ್ಲಿ ಕಡ್ಡಾಯವಾಗಿ ಸಾಕು ನಾಯಿ ಪರವಾನಗಿ ಪಡೆಯಬೇಕು. ಈಗಾಗಲೇ ಪರವಾನಗಿ ಪಡೆದವರಿಗೆ ಇದು ಅನ್ವಯಿಸುವುದಿಲ್ಲ. ಸ್ಥಳಾವಕಾಶ, ನೋಡಿಕೊಳ್ಳಲು ತೊಂದರೆಯಾದರೆ ಬಿಬಿಎಂಪಿಯ ಅಧಿಕಾರಿಗಳ ಗಮನಕ್ಕೆ ತಂದು ಪರವಾನಗಿಯನ್ನು ವರ್ಗ ಮಾಡಬಹುದಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮದ ಮುಖ್ಯಾಂಶ
-ನಾಯಿಗಳನ್ನು ಸಾಕುವುದಕ್ಕೆ ಪರವಾನಗಿ ಕಡ್ಡಾಯ

-ಸ್ವದೇಶಿ, ಗಾಯಗೊಂಡ ಅಥವಾ ಬೀದಿನಾಯಿ ಸಾಕಲು ಪರವಾನಗಿ ಶುಲ್ಕ ವಿನಾಯ್ತಿ

-ನಾಯಿ ಹಿಕ್ಕೆ (ಮಲವಿಸರ್ಜನೆ) ತೆಗೆಯುವುದು ಮಾಲೀಕರ ಜವಾಬ್ದಾರಿ

-ಶ್ವಾನದ ಮೇಲೆ ದೌರ್ಜನ್ಯ, ದುರ್ಬಳಕೆ ಕಂಡುಬಂದರೆ ಪಶು ವೈದ್ಯಾಧಿಕಾರಿಗಳಿಂದ ವಿಚಾರಣೆ

-ನಾಯಿ ವಶಕ್ಕೆ ಪಡೆಯುವ ಮತ್ತು ಪರವಾನಗಿ ರದ್ದು ಪಡಿಸುವ ಅಧಿಕಾರ ಬಿಬಿಎಂಪಿಗೆ

ನಾಯಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಎಲ್ಲೆಂದರಲ್ಲಿ ಬಿಟ್ಟು ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ “ಬಿಬಿಎಂಪಿ ಪರಿಷ್ಕೃತ ಸಾಕು ನಾಯಿ ನಿಯಮ-2018′ ಕರಡು ಸಿದ್ಧಪಡಿಸಲಾಗಿದೆ. ಶ್ವಾನ ತಳಿ ಸಂರ್ವಧನೆಗೆ (ಬ್ರಿಡಿಂಗ್‌) ಉದ್ದೇಶಿಸಲಾಗಿದೆ. ಕೌನ್ಸಿಲ್‌ ಸಭೆಯಲ್ಲಿ ಚರ್ಚೆಯಾದ ನಂತರ ಬೈಲಾ ಅಂತಿಮಗೊಳಿಸಲಾಗುವುದು.
-ರಂದೀಪ್‌, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next