ಬೆಂಗಳೂರು: “ಕರ್ನಾಟಕ ಬಂದ್ ಕಾಂಗ್ರೆಸ್ ಪ್ರೇರಿತ ಎನ್ನುವುದು ಆಧಾರರಹಿತ. ಹೀಗೆ ಹೇಳುವವರಿಗೆ ಸಾಮಾನ್ಯಜ್ಞಾನ ಇದೆಯೋ ಅಥವಾ ಇಲ್ಲವೋ ಗೊತ್ತಾಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಿರ್ಮಿಸಲಾದ ಶತಮಾನೋತ್ಸವ ಭವನವನ್ನು ಸೋಮವಾರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
“ಕರ್ನಾಟಕ ಬಂದ್ ಮಾಡಿದರೆ ಸರ್ಕಾರಕ್ಕೇ ತೊಂದರೆ ಆಗುತ್ತದೆ. ಶಾಲಾ- ಕಾಲೇಜುಗಳು, ಬಸ್ ಮತ್ತಿತರ ಸೇವೆ ಸ್ಥಗಿತಗೊಳ್ಳುತ್ತವೆ. ಕಾನೂನು- ಸುವ್ಯವಸ್ಥೆ ಕಾಪಾಡಬೇಕಾಗುತ್ತದೆ. ಹೀಗಿರುವಾಗ, ಸರ್ಕಾರವೇ ಯಾಕೆ ಬಂದ್‌ಗೆ ಪ್ರೇರಣೆ ನೀಡುತ್ತದೆ? ಹೀಗೆ ಆರೋಪಿಸುವವರಿಗೆ ಬುದ್ಧಿ ಅಥವಾ ಸಾಮಾನ್ಯಜ್ಞಾನ ಇದೆಯೋ-ಇಲ್ಲವೋ ಎಂಬ ಬಗ್ಗೆಯೇ ನನಗೆ ಅನುಮಾನ’ ಎಂದು ತೀಕ್ಷ್ಣವಾಗಿ ಹೇಳಿದರು.
ಅಷ್ಟಕ್ಕೂ ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಈ ಕನ್ನಡ ಸಂಘಟನೆಗಳು ಸರ್ಕಾರದ ಮಾತು ಕೇಳುತ್ತವೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬೇಕಿದ್ದರೆ ಆರೋಪ ಮಾಡುವವರೇ ಬಂದ್‌ಗೆ ಕರೆ ನೀಡಿದವರ ಬಳಿ ತೆರಳಿ ಮನವಿ ಮಾಡಿಕೊಳ್ಳಲಿ ಎಂದರು.
ಎಲ್ಲದಕ್ಕೂ ರಾಜಕೀಯ ಕನ್ನಡಕ ಬೇಡ: ಮುಂದಿನ ದಿನಗಳಲ್ಲಿ ಎಐಸಿಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದಾಗ ಕಪ್ಪುಬಟ್ಟೆ ಪ್ರದರ್ಶಿಸುವ ಬಗ್ಗೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, “ಪ್ರತಿಪಕ್ಷದ ನಾಯಕರಿಗೆ ಆರೋಪ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ. ಆದ್ದರಿಂದ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಎಲ್ಲವನ್ನೂ ರಾಜಕೀಯ ಕನ್ನಡಕ ಹಾಕಿಕೊಂಡು ನೋಡುವುದನ್ನು ಬಿಡಬೇಕು’ ಎಂದು ಹೇಳಿದರು.