ಎಚ್.ಡಿ.ಕೋಟೆ: ತಾಲೂಕು ಕೇಂದ್ರ ಸ್ಥಾನದಲ್ಲಿ ಹೆಸರಿಗಷ್ಟೇ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆ ಇದೆ. ಆದರೆ, 25ರಿಂದ 30 ಹಾಸಿಗೆಗಳು ಮಾತ್ರ ಲಭ್ಯವಿದೆ. ಅಲ್ಲದೇ ಆಸ್ಪತ್ರೆ ಕಟ್ಟಡ ಕೂಡ ಶಿಥಿಲಗೊಂಡು ಮಳೆಗಾಲದಲ್ಲಿ ಸೋರುತ್ತದೆ. ಯಾವಾಗ ಬೇಕಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ಜನರು ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಒಟ್ಟಾರೆ ಈ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ.
ಶಿಥಿಲಗೊಂಡಿರುವ ಈ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಟ್ಟಡವೇ ಸುಭದ್ರವಾಗಿಲ್ಲದಿರುವಾಗ ದುರಸ್ತಿ ಮಾಡಬೇಕಾದ ಅಗತ್ಯ ಇರಲಿಲ್ಲ ಎಂದು ನಾಗರಿಕರು ದೂರಿದ್ದಾರೆ. ಆದರೂ ದುರಸ್ತಿ ನೆಪದಲ್ಲಿ ಮಧ್ಯವರ್ತಿಗಳ ಹಣ ಮಾಡುವ ಯೋಜನೆ ಇದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಎಚ್.ಡಿ.ಕೋಟೆ ಪಟ್ಟಣಕ್ಕೆ ತಾಯಿ-ಮಗು ಆಸ್ಪತ್ರೆ ಉದ್ಘಾಟನೆಗೆ ಆಗಮಿಸುತ್ತಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹಾಗೂ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಅಧಿಕಾರಿಗಳು ಈ ಶಿಥಿಲಾವಸ್ಥೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ತಾಲೂಕು ಕೇಂದ್ರಕ್ಕೆ ಬೇಕಾಗಿರುವ ಆಸ್ಪತ್ರೆ ಹೇಗಿದೆ?, ದುರಸ್ತಿ ಮಾಡಬೇಕಾದ ಅನಿವಾರ್ಯತೆ ಇದೆಯಾ?, ಇಲ್ಲವೇ ಕಟ್ಟಡವನ್ನು ನೆಲಸಮಗೊಳಿಸಿ, ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸುವ ಅನಿವಾರ್ಯತೆ ಇದೆಯಾ ಎಂಬುದನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾರ್ಯನಿರ್ವಹಿಸದ ರಕ್ತ ಪರೀಕ್ಷಾ ಯಂತ್ರಗಳು: ಸಾರ್ವಜನಿಕ ಆಸ್ಪತ್ರೆಗೆ ಕಳೆದ 8-10 ವರ್ಷಗಳ ಹಿಂದೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಎರಡು ರಕ್ತ ಪರೀಕ್ಷಾ ಯಂತ್ರಗಳನ್ನು ಸರ್ಕಾರ ಕಲ್ಪಿಸಿತ್ತು. ಆದರೆ, ಈ ಯಂತ್ರಗಳು ಬಂದಾಗಿನಿಂದ ಒಂದು ದಿನವೂ ಕಾರ್ಯನಿರ್ವಹಿಸಿಲ್ಲ ಎಂದು ತಿಳಿದು ಬಂದಿದೆ. ಯಂತ್ರಗಳನ್ನು ಬಳಕೆ ಮಾಡದೇ ಹಾಗೇ ಇರಿಸಿರುವುದರಿಂದ ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ. ಇದ್ದೂ ಇಲ್ಲದಂತಾಗಿ ರಕ್ತ ಪರೀಕ್ಷೆಗೆ ರೋಗಿಗಳು ಖಾಸಗಿ ರಕ್ತ ಪರೀಕ್ಷಾ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ಕೂಡಲೇ ಈ ಎರಡು ರಕ್ತ ಪರೀಕ್ಷಾ ಯಂತ್ರಗಳು ಕಾರ್ಯನಿರ್ವಹಿಸಲು ಆಸ್ಪತ್ರೆ ಆಡಳಿತ ಮಂಡಳಿ ಮುಂದಾಗಬೇಕಿದೆ.
ಆಸ್ಪತ್ರೆ ಕಟ್ಟಡದ ಅಡಿಪಾಯ ಭದ್ರವಾಗಿಲ್ಲ – ಆಡಳಿತಾಧಿಕಾರಿ: ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಅಡಿಪಾಯ ಗುಣಮಟ್ಟದಿಂದ ಕೂಡಿಲ್ಲ. 100 ಹಾಸಿಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಕೆಯಾಗುತ್ತಿದ್ದಂತೆಯೇ ಆಸ್ಪತ್ರೆ ಕಟ್ಟಡ ವಿಸ್ತರಿಸುವ ಸಲುವಾಗಿ ಆಗಮಿಸಿದ ತಜ್ಞರ ತಂಡ ಆಸ್ಪತ್ರೆ ಅಡಿಪಾಯ ಭದ್ರವಾಗಿಲ್ಲ. ಹೀಗಾಗಿ 2-3 ಅಂತಸ್ತು ನಿರ್ಮಾಣ ಮಾಡುವುದು ಅಸಾಧ್ಯ ಎಂದು ತಿಳಿಸಿದ್ದಾರೆ. 30 ವರ್ಷ ಸೇವೆ ನೀಡಿರುವ ಈ ಕಟ್ಟಡವನ್ನು ನೆಲಸಮಗೊಳಿಸಿ, ಈಗ ನೂತನವಾಗಿ ನಿರ್ಮಾಣವಾಗಿರುವ ತಾಯಿ-ಮಗು ಆಸ್ಪತ್ರೆ ಪಕ್ಕದಲ್ಲಿ 2.20 ಎಕರೆ ಆಸ್ಪತ್ರೆ ಸೇರಿದ ಖಾಲಿ ಜಾಗದಲ್ಲಿ ಸುಸಜ್ಜಿತ 2-3 ಅಂತಸ್ತಿನ ನೂತನ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನಿರ್ಮಿಸಿದರೆ ಜನಸೇವೆಗೆ ಅನುಕೂಲವಾಗುತ್ತದೆ ಎಂದು ಆಸ್ಪತ್ರೆ ಆಡಳಿತಾ ಧಿಕಾರಿ ಡಾ.ಭಾಸ್ಕರ್ ತಿಳಿಸಿದರು.
ಹೊಸದಾಗಿ ಆಸ್ಪತ್ರೆ ಕಟ್ಟಡ ನಿರ್ಮಿಸಿ: ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗಳ ಅಗವಾಗಿದೆ. ಜನಸಂಖ್ಯೆ ಹೆಚ್ಚಿದಂತೆ ತಾಲೂಕು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಹೆಸರಿಗಷ್ಟೇ 100 ಹಾಸಿಗೆಳ ಆಸ್ಪತ್ರೆ, ಆಸ್ಪತ್ರೆಯಲ್ಲಿ ಲ್ಯಾಬ್ ಇಲ್ಲ, ಬ್ಲೆಡ್ ಬ್ಯಾಂಕ್ ಇಲ್ಲ, ತುರ್ತು ನಿಗಾ ಘಟಕ ಇಲ್ಲ, ಒಪಿಡಿ ಇಲ್ಲ, ಫಾರ್ಮಾಸಿಸ್ಟ್ ಇಲ್ಲ, ಸಿಬ್ಬಂದಿ ಕೊರತೆ ಇದೆ. ಶಿಥಿಲಗೊಂಡಿರುವ ಆಸ್ಪತ್ರೆ ನೆಲಸಮಗೊಳಿಸಿ ನೂತನ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.
* ಎಚ್.ಬಿ.ಬಸವರಾಜು