Advertisement

ಬಾಯಿಯ ಆರೋಗ್ಯ ಕಳಪೆಯಾಗಿರುವುದರಿಂದ ಕೋವಿಡ್‌ ಅಪಾಯ ಹೆಚ್ಚುತ್ತದೆಯೇ?

04:28 PM Nov 15, 2021 | Team Udayavani |

ಕೋವಿಡ್‌-19ನ ಬಹುವಿಧದ ಪರಿಣಾಮಗಳು ಹಾಗೂ ಹಲ್ಲುಗಳು, ವಸಡುಗಳು ಮತ್ತು ಬಾಯಿಯ ಕುಹರದ ಮೇಲೆ ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ವೈದ್ಯರು ಮತ್ತು ಸಂಶೋಧಕರು ಅಧ್ಯಯನಗಳನ್ನು ನಡೆಸುತ್ತಲೇ ಇದ್ದಾರೆ. ಶ್ವಾಸಾಂಗವನ್ನು ಅಲ್ಪಾವಧಿಯಲ್ಲಿ ತೀವ್ರವಾಗಿ ಕಾಡುವ ಅನಾರೋಗ್ಯವಾಗಿರುವ ಕೋವಿಡ್‌ ವೈರಸ್‌ 2 (ಸಾರ್ -ಕೊವ್‌-2) ಕೊರೊನಾ ವೈರಾಣು 2019 ಕಾಯಿಲೆ (ಕೋವಿಡ್‌-19)ಗೆ ಕಾರಣವಾಗಿದೆ.

Advertisement

ಬಾಯಿಯ ಆರೋಗ್ಯ ಮತ್ತು ಕೋವಿಡ್‌-19 ನಡುವಣ ಸಂಬಂಧಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಸಂಬಂಧ ಇದೆಯೇ?
ಕೋವಿಡ್‌-19ನಿಂದಾಗಿ ಬಾಯಿಯ ಅನಾರೋಗ್ಯಗಳು ಉಂಟಾಗುತ್ತದೆ ಎಂಬುದು ಹೆಚ್ಚು ವೈಜ್ಞಾನಿಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಆದರೆ 2021ರಲ್ಲಿ ನಡೆಸಲಾದ ಒಂದು ಅಧ್ಯಯನವು ಬಾಯಿಯ ಆರೋಗ್ಯವು ಕಳಪೆಯಾಗಿದ್ದರೆ ಅದರಿಂದ ಕೋವಿಡ್‌-19 ಸೋಂಕು ತಗಲುವ ಸಾಧ್ಯತೆ ಹೆಚ್ಚಬಲ್ಲುದು ಎಂದು ಹೇಳಿದೆ.

ಸಾರ್ಸ್‌ -ಕೊವ್‌-2 ವೈರಾಣುಗಳು ದೇಹವನ್ನು ಪ್ರವೇಶಿಸಲು ಬಾಯಿ ಪ್ರವೇಶ ದ್ವಾರ ಆಗಬಹುದು ಎಂಬುದಾಗಿ ಈ ಅಧ್ಯಯನವು ಹೇಳಿದೆ. ಏಕೆಂದರೆ, ನಾಲಗೆ, ವಸಡು ಮತ್ತು ಹಲ್ಲುಗಳಲ್ಲಿ ಆ್ಯಂಜಿಯೊಟೆನ್ಸಿನ್‌ -ಕನ್ವರ್ಟಿಂಗ್‌ ಕಿಣ್ವ-2 (ಎಸಿಇ2)ಗಳು ಇರುತ್ತವೆ. ಇದು ಸಾರ್ಸ್‌ -ಕೊವ್‌-2 ವೈರಾಣು ಅಂಗಾಂಶಗಳಿಗೆ ಪ್ರವೇಶ ಪಡೆಯಲು ಅನುವು ಮಾಡಿಕೊಡುವ ಕಿಣ್ವವಾಗಿದೆ. ಬಾಯಿಯ ಆರೋಗ್ಯ ಕಳಪೆಯಾಗಿರುವವರಲ್ಲಿ ಎಸಿಇ2 ರೆಸಿಪ್ಟರ್‌ಗಳು ಹೆಚ್ಚಿರುವುದು ಕಂಡುಬಂದಿದೆ. ಬಾಯಿಯ ನೈರ್ಮಲ್ಯವು ಸರಿಯಿಲ್ಲದೆ ಇದ್ದರೆ ಬ್ಯಾಕ್ಟೀರಿಯಾಗಳು ಬಾಯಿಯಿಂದ ಶ್ವಾಸಕೋಶಕ್ಕೆ ಪ್ರವೇಶಿಸುವ ಸಾಧ್ಯತೆ ಹೆಚ್ಚುತ್ತದೆ ಎಂಬುದಾಗಿ ಇನ್ನೊಂದು ಲೇಖನವು ಹೇಳಿದೆ.

ಇದರಿಂದ ಕೋವಿಡ್‌-19ನ ಜತೆಗೆ ಬ್ಯಾಕ್ಟೀರಿಯಾ ಸೋಂಕು ಕೂಡ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಕೋವಿಡ್‌-19 ಮತ್ತು ಜಿಂಜಿವೈಟಿಸ್‌ ಜಿಂಜಿವೈಟಿಸ್‌ ಎಂದರೆ ವಸಡುಗಳ ಉರಿಯೂತ.

Advertisement

ಜಿಂಜಿವೈಟಿಸ್‌ನ ಕೆಲವು ಲಕ್ಷಣಗಳೆಂದರೆ:

  • ವಸಡುಗಳು ಕೆಂಪಾಗಿ ಊದಿಕೊಂಡಿರುವುದು
  • ಹಲ್ಲುಜ್ಜುವಾಗ ಅಥವಾ ಫ್ಲಾಸ್‌ ಮಾಡುವಾಗ ವಸಡುಗಳಿಂದ ರಕ್ತಸ್ರಾವ
  • ಉಸಿರಿನ ದುರ್ವಾಸನೆ
  • ಬಾಯಿಯಲ್ಲಿ ಕೆಟ್ಟ ರುಚಿ

ಬಾಯಿಯ ನೈರ್ಮಲ್ಯ ಚೆನ್ನಾಗಿಲ್ಲದೆ ಇದ್ದರೆ ಬ್ಯಾಕ್ಟೀರಿಯಾ ಸಂಗ್ರಹವಾಗುತ್ತದೆ. ಇವು ಹಲ್ಲು ಮತ್ತು ವಸಡುಗಳಿಗೆ ಅಂಟಿಕೊಂಡು ಸಂಗ್ರಹವಾಗುತ್ತವೆ. ಇದು ಜಿಂಜಿವೈಟಿಸ್‌ಗೆ ಸಾಮಾನ್ಯವಾದ ಕಾರಣವಾಗಿದೆ. 2021ರಲ್ಲಿ ವರದಿಯಾದ ಒಂದು ಪ್ರಕರಣದ ಅಧ್ಯಯನಗಾರರು ಕೋವಿಡ್‌-19ನಂತಹ ದಣಿವು ಮತ್ತು ಅಶಕ್ತಿಗೆ ಕಾರಣವಾಗುವ ಕಾಯಿಲೆಗಳಿಗೆ ತುತ್ತಾದವರು ಬಾಯಿಯ ನೈರ್ಮಲ್ಯವನ್ನು ಸರಿಯಾಗಿಟ್ಟುಕೊಳ್ಳದೆ ಇರುವ ಸಾಧ್ಯತೆ ಹೆಚ್ಚು ಎಂದು ವರದಿ ಮಾಡಿದ್ದಾರೆ.

ಇದರಿಂದ ಹಲ್ಲುಗಳು ಪಾಚಿಕಟ್ಟುವುದು ಹೆಚ್ಚುತ್ತದೆ ಮತ್ತು ಜಿಂಜಿವೈಟಿಸ್‌ ಉಂಟಾಗುವ ಸಾಧ್ಯತೆ ಅಧಿಕವಾಗುತ್ತದೆ. ವಸಡುಗಳಿಂದ ರಕ್ತಸ್ರಾವವಾಗುವುದು ಕೋವಿಡ್‌-19ನ ಒಂದು ಲಕ್ಷಣವಾಗಿರಬಹುದು ಎಂಬುದಾಗಿಯೂ ಅಧ್ಯಯನಗಾರರು ಹೇಳಿದ್ದಾರೆ.

ಕೋವಿಡ್‌-19 ಸೋಂಕು ಕಡಿಮೆಯಾದ ಬಳಿಕ ಜಿಂಜಿವೈಟಿಸ್‌ ಲಕ್ಷಣಗಳು ಕಡಿಮೆಯಾಗಿರುವುದನ್ನು ಅವರು ಗಮನಿಸಿ ವರದಿ ಮಾಡಿದ್ದಾರೆ. ಆದರೆ ಈ ಎಲ್ಲ ವರದಿಗಳಿಂದ ಕಂಡುಕೊಂಡಿರುವ ಅಂಶಗಳು ಕೆಲವೇ ವ್ಯಕ್ತಿಗಳನ್ನು ಆಧರಿಸಿವೆ.

ಇದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಹೆಚ್ಚು ಜನಸಂಖ್ಯೆಯನ್ನು ಒಳಗೊಂಡ ವಿಸ್ತೃತ ಅಧ್ಯಯನದ ಅಗತ್ಯವಿದೆ. ಆದರೂ ಕೋವಿಡ್‌-19 ಸಾಂಕ್ರಾಮಿಕ ಇನ್ನೂ ಪೂರ್ಣವಾಗಿ ಮರೆಯಾಗದ ಈ ಕಾಲಘಟ್ಟದಲ್ಲಿ ಬಾಯಿಯ ಆರೋಗ್ಯ ಮತ್ತು ನೈರ್ಮಲ್ಯವನ್ನು ನಿರ್ಲಕ್ಷಿಸದೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಚೆನ್ನಾಗಿಟ್ಟುಕೊಳ್ಳುವುದು ಉತ್ತಮವೂ ಸುರಕ್ಷಿತವೂ ಆಗಿದೆ.

ಡಾ| ಆನಂದದೀಪ್‌ ಶುಕ್ಲಾ
ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ
ಎಂಸಿಒಡಿಎಸ್‌, ಮಾಹೆ, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next