Advertisement

ಮೊಡವೆ ಯಾರೂ ಬೇಡದ ಒಡವೆ

05:56 PM Jul 02, 2019 | mahesh |

ಮೊದಲೇ ನನ್ನದು ಸ್ವಲ್ಪ ಎಣ್ಣೆ ಚರ್ಮದ ಮುಖ. ಅದಕ್ಕೆ ಈ ಗ್ರೀಸ್‌, ಆಯಿಲ್‌ ಬೇಸ್ಡ್ ಕ್ರೀಂ ಹಚ್ಚಲಾರಂಭಿಸಿದಾಗ ಮತ್ತಿಷ್ಟು ಮೊಡವೆಗಳು ಹುಟ್ಟಿಕೊಂಡವು. ಮೊಡವೆಗಳ ನರ್ತನಕ್ಕೆ ನನ್ನ ಮುಖವೇ ನಾಟ್ಯಶಾಲೆ ಅನ್ನುವಂತಾಯ್ತು. ಅಜ್ಞಾನದ ಕಾರಣದಿಂದ ಮುಖ ಮತ್ತಿಷ್ಟು ಹಾಳಾಯ್ತು. ಕೊನೆಗೆ ಬೇರೆ ದಾರಿ ಕಾಣದೆ ಬ್ಯೂಟಿಪಾರ್ಲರ್‌ ಮೊರೆ ಹೋದೆ.

Advertisement

ಬಾಲ್ಯ ಕಳೆದು, ಹರೆಯಕ್ಕೆ ಕಾಲಿಟ್ಟಿದ್ದ ದಿನಗಳವು. ಒಂದು ಬೆಳಗ್ಗೆ ಸ್ನಾನ ಮಾಡಿ, ಶಾಲೆಗೆ ಹೋಗುವ ತಯಾರಿ ನಡೆಸುತ್ತಾ ಕನ್ನಡಿ ಮುಂದೆ ನಿಂತಿದ್ದೆ. ಬೆಳ್ಳಗೆ, ನುಣುಪಾಗಿದ್ದ ಮುಖದ ಮೇಲೆ ಮೂರು ಮೊಡವೆಗಳು ಇಣುಕಿ, ಅಣಕಿಸುತ್ತಿದ್ದವು. “ಅಮ್ಮಾ…’ ಎಂದು ಕಿಟಾರನೆ ಕಿರುಚಿದ ಸದ್ದಿಗೆ, ಅಮ್ಮ ಸೌಟು ಹಿಡಿದೇ ಅಡುಗೆಮನೆಯಿಂದ ಓಡಿ ಬಂದಿದ್ದಳು.

“ಏನಾಯಿತೆ? ಯಾಕೆ ಕಿರುಚಿದೆ?’
“ನೋಡು ನನ್ನ ಮುಖ… ಅಸಹ್ಯ… ಈ ಮುಖ ಹೊತ್ತು ಸ್ಕೂಲಿಗೆ ಹ್ಯಾಗೆ ಹೋಗಲಿ?’
“ಈ ವಯಸ್ಸಿಗೆ ಇದೆಲ್ಲಾ ಸಹಜ. ನಾನು ನಿನ್ನ ಹಾಗಿದ್ದಾಗ ನಂಗೂ ಆಗಿತ್ತು. ಅದೆಲ್ಲ ತಲೆ ಕೆಡಿಸಿಕೊಳ್ಳೋ ವಿಚಾರ ಅಲ್ಲ’ ಅಂತ ಕೂಲಾಗಿ ಹೇಳಿದಳು.
ನಾನು ಅಸಮಾಧಾನದಿಂದಲೇ ಸ್ಕೂಲಿಗೆ ಹೋದೆ. ತರಗತಿಯಲ್ಲಿ ಪಾಠ ಕೇಳುವಾಗಲೂ, ಗಮನವೆಲ್ಲ ಮೊಡವೆಯ ಕಡೆಗೇ.
ಆಟದ ಪಿರಿಯಡ್‌ನ‌ಲ್ಲಿ ಮೊಡವೆ ನೋಡಿದ ಗೆಳತಿ, ನಿಧಾನವಾಗಿ ಉಗುರಿನಿಂದ ಚಿವುಟಲು ಬಂದಳು. “ಬೇಡ, ಮುಟ್ಬೆಡ..’ ಅಂತ ದೂರ ಸರಿದೆ.
“ನಿನಗೆ ಗೊತ್ತಿಲ್ಲ ಕಣೇ, ಮೊಡವೆ ಸಣ್ಣದಿರುವಾಗಲೇ ಚಿವುಟಿಬಿಡಬೇಕು. ಇಲ್ಲದಿದ್ದರೆ ಒಳಗಿನ ಬೆಳ್ಳಗಿನ ಜಿಡ್ಡು ಅಲ್ಲೇ ಕಲೆಯಾಗಿಬಿಡುತ್ತೆ’ ಅಂತ ಬಿಟ್ಟಿ ಸಲಹೆ ಕೊಟ್ಟಳು. ಅಷ್ಟಕ್ಕೇ ಸುಮ್ಮನಾಗದೆ, ಅವಳೇ ಚಿವುಟಿದಳು.

ಕೆಲ ದಿನಗಳಲ್ಲೇ ಮುಖದ ತುಂಬಾ ಮೊಡವೆಗಳು ರಾರಾಜಿಸುತ್ತಿದ್ದವು. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಮೊಡವೆಗಳ ಜೊತೆಗೆ ಕಪ್ಪು ಕಲೆಗಳು ಬೇರೆ. ಹುಣ್ಣಿಮೆಯ ಚಂದ್ರನಂತಿದ್ದ ಮೊಗದಲ್ಲಿ, ಅಲ್ಲಲ್ಲಿ ಕಪ್ಪು ಕುಳಿಗಳು…ಮತ್ತೆ ಅದೇ ಗೆಳತಿ ಹೊಸದೊಂದು ಸಲಹೆಯೊಂದಿಗೆ ಬಂದಳು. “ನೋಡು, ಫೇರ್‌ ಅಂಡ್‌ ಲವ್ಲಿ ಕ್ರೀಂ ಹಚ್ಚು. ಒಂದು ಪ್ಯಾಕೆಟ್‌ಗೆ ಕೇವಲ 5 ರೂ. ಅಷ್ಟೆ. ಅದನ್ನು ಹಚೊRಂಡರೆ ಮುಖ ಬೆಳ್ಳಗಾಗೋದಷ್ಟೇ ಅಲ್ಲ, ಮೊಡವೆ ಕಲೆಯೂ ಹೋಗುತ್ತೆ’ ಅಂದಳು. ಮೊಡವೆ ಬಗ್ಗೆ ಯಾರು, ಏನು ಹೇಳಿದರೂ ಕೇಳಲು ತಯಾರಿದ್ದ ನಾನು, ಅವಳ ಸಲಹೆಯನ್ನು ಶಿರಸಾವಹಿಸಿ ಪಾಲಿಸಿದೆ.

ಮೊದಲೇ ನನ್ನದು ಸ್ವಲ್ಪ ಎಣ್ಣೆ ಚರ್ಮದ ಮುಖ. ಅದಕ್ಕೆ ಈ ಗ್ರೀಸ್‌, ಆಯಿಲ್‌ ಬೇಸ್ಡ್ ಕ್ರೀಂ ಹಚ್ಚಲಾರಂಭಿಸಿದಾಗ ಮತ್ತಿಷ್ಟು ಮೊಡವೆಗಳು ಹುಟ್ಟಿಕೊಂಡವು. ಮೊಡವೆಗಳ ನರ್ತನಕ್ಕೆ ನನ್ನ ಮುಖವೇ ನಾಟ್ಯಶಾಲೆ ಅನ್ನುವಂತಾಯ್ತು. ಅಜ್ಞಾನದ ಕಾರಣದಿಂದ ಮುಖ ಮತ್ತಿಷ್ಟು ಹಾಳಾಯ್ತು. ಕೊನೆಗೆ ಬೇರೆ ದಾರಿ ಕಾಣದೆ ಬ್ಯೂಟಿಪಾರ್ಲರ್‌ ಮೊರೆ ಹೋದೆ. ಅವರು ಏನೇನೋ ಫೇಷಿಯಲ್‌, ಬ್ಲೀಚ್‌ಗಳ ಹೆಸರು ಹೇಳಿ ಸಾವಿರಾರು ರೂಪಾಯಿಗಳಾಗುತ್ತೆ ಅಂದರು. ಬೆಲೆ ಕೇಳಿಯೇ ಹೌಹಾರಿ, ಅಲ್ಲಿಂದ ಓಡಿಬಂದೆ.

Advertisement

ಕೊನೆಗೆ ಉಳಿದಿದ್ದು, ಸ್ವಯಂ ಚಿಕಿತ್ಸೆ. ಅಲ್ಲಿ, ಇಲ್ಲಿ, ಮ್ಯಾಗ್‌ಜಿನ್‌ಗಳಲ್ಲಿ ಓದಿದ್ದನ್ನು, ಅವರಿವರು ಹೇಳಿದ್ದನ್ನು ಕೇಳಿ ಮೊಡವೆಯಿದ್ದ ಜಾಗಕ್ಕೆ ಬೆಳ್ಳುಳ್ಳಿ ರಸ ಹಚ್ಚಿ, ಒಂದು ತಾಸಿನ ನಂತರ ಮುಖ ತೊಳೆದೆ. ನಂತರ, ಮುಖದ ತುಂಬಾ ಅರಶಿನ ಲೇಪಿಸಿ ಒಣಗಲು ಬಿಟ್ಟೆ. ಮುಖ ಚುರುಚುರು ಉರಿಯಲು ಪ್ರಾರಂಭಿಸಿತು. ನಂತರ ಮುಖ ತೊಳೆದೆ. ಮರುದಿನ ಮುಖ ಸುಟ್ಟಿತ್ತು. ಅಂದರೆ ಮೊದಲಿದ್ದ ಬಿಳಿ ಬಣ್ಣ ಮರೆಯಾಗಿ ಚರ್ಮವೇ ಎಣ್ಣೆಗೆಂಪು ಬಣ್ಣಕ್ಕೆ ತಿರುಗಿತ್ತು. ನಂತರ, ಚರ್ಮದ ಡಾಕ್ಟರ್‌ ಬಳಿ ಓಡಿದೆ.

“ಮೊಡವೆ ಗೊಡವೆ ನಿನಗ್ಯಾಕೆ? ಅದು ಹದಿಹರೆಯದಲ್ಲಿ ಸಹಜ ಮತ್ತು ಅದುವೇ ಸುಂದರ. ಒಬ್ಬೊಬ್ಬರ ಚರ್ಮ ಒಂದೊಂದು ಬಗೆಯದ್ದು. ಎಣ್ಣೆ ಚರ್ಮ, ಶುಷ್ಕ ಚರ್ಮ, ಸಾಮಾನ್ಯ ಚರ್ಮ, ಸೂಕ್ಷ್ಮಚರ್ಮ… ಹೀಗೆ. ಎಲ್ಲರಿಗೂ ಎಲ್ಲ ಕ್ರೀಮ್‌ಗಳೂ, ಮನೆಮದ್ದೂ ಆಗಿ ಬರುವುದಿಲ್ಲ. ನಿನ್ನದು ಎಣ್ಣೆ ಚರ್ಮ. ಹಾಗಾಗಿ ಮೊಡವೆಗಳು ಸ್ವಲ್ಪ ಜಾಸ್ತಿ ಕಾಣಿಸುತ್ತವೆ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡ’ ಅಂದರು ಡಾಕ್ಟರ್‌. “ಮತ್ತೆ, ಇದಕ್ಕೀಗ ಮದ್ದು?’ ಅಂತ ಅಳುಮೋರೆ ಮಾಡಿದೆ. “ಔಷಧಿ ಹೇಳ್ತೀನಿ, ಕೇಳಿಸ್ಕೋ’ ಅಂತ ಇಷ್ಟುದ್ದದ ಪಟ್ಟಿ ಓದಿದರು. ಅದರಲ್ಲಿ ಇದ್ದದ್ದು ಇಷ್ಟು-

-ಕರಿದ ತಿಂಡಿ, ತುಂಬಾ ಖಾರ, ತುಂಬಾ ಸಿಹಿ ತಿಂಡಿಗಳನ್ನ ಜಾಸ್ತಿ ತಿನ್ನಬೇಡ.
-ಆಗಾಗ ನೀರು ಕುಡಿಯುತ್ತಿರು.
-ಮುಖಕ್ಕೆ ಧೂಳು ತಾಗದಂತೆ ಎಚ್ಚರ ವಹಿಸು. ದಿನಕ್ಕೆರಡು ಸಲ ಬೆಚ್ಚನೆಯ ನೀರಿನಿಂದ ಮುಖ ತೊಳಿ.
-ಟೆನ್ಸ್ ನ್‌ ಮಾಡೋದನ್ನು ಬಿಡು.
-ಮೊಡವೆ ಮೇಲೆ ಸಿಕ್ಕ ಸಿಕ್ಕ ಔಷಧ ಪ್ರಯೋಗಿಸಬಾರದು.
-ಮೊಡವೆಯನ್ನು ಚಿವುಟುವುದು, ಹಿಚುಕುವುದು ನಿಷಿದ್ಧ. ಉಗುರನ್ನು ತಾಗಿಸಲೇಬಾರದು.
-ತಲೆ ಕೂದಲು ಜಿಡ್ಡಾಗಿ, ತಲೆಹೊಟ್ಟಾದರೂ, ಮುಖದ ಮೇಲೆ ಮೊಡವೆಗಳೇಳುತ್ತವೆ. ಹಾಗಾಗಿ ವಾರಕ್ಕೆ ಮೂರುಬಾರಿ ತಲೆಸ್ನಾನ ಮಾಡು.
-ಯೋಗ, ಪ್ರಾಣಾಯಾಮ ಮಾಡಿದರೆ ಉತ್ತಮ.
– ಸೇವಿಸುವ ಆಹಾರ ಪೂರ್ಣಪ್ರಮಾಣದ ಪೋಷಕಾಂಶಗಳಿಂದ ಕೂಡಿರಲಿ. ಹಣ್ಣು, ಸೊಪ್ಪು, ತರಕಾರಿಗಳನ್ನು ಹೆಚ್ಚೆಚ್ಚು ತಿನ್ನಬೇಕು.
ಅವರು ಹೇಳಿದ್ದಕ್ಕೆಲ್ಲ ನಾನು, ಹೂಂಗುಟ್ಟುತ್ತಾ ಅವರ ಮುಖವನ್ನೇ ನೋಡಿದೆ. ವೈದ್ಯೆಯ ಮುಖದ ಮೇಲೂ ಮೊಡವೆ ಕಲೆ, ಕುಳಿಗಳು! ಛೇ, ಹದಿಹರೆಯದ ಪ್ರಕೃತಿ ಸಹಜ ಬದಲಾವಣೆಗೆ ನಾನು ಸುಮ್ಮನೆ ಇಷ್ಟೆಲ್ಲಾ ಗಾಬರಿಯಾದೆನಲ್ಲಾ ಅನ್ನಿಸಿತು. ಇನ್ಮುಂದೆ ಡಾಕ್ಟರ್‌ ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸುತ್ತೇನೆ ಅಂತ ಶಪಥ ಮಾಡಿದೆ. ಮೊಡವೆ ಬಗೆಗಿನ ಬಿಟ್ಟಿ ಸಲಹೆಗಳಿಗೆ ಬಲಿಪಶುವಾಗಬಾರದೆಂದು ನಿರ್ಧರಿಸಿದೆ.

- ಗೀತಾ ಎಸ್‌ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next