ಕಾರವಾರ: ಗೋವಾ ಸರ್ಕಾರ ಆರು ತಿಂಗಳ ಕಾಲ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನು ರಫ್ತಿಗೆ ನಿಷೇಧ ಹೇರಿದ್ದು, ಇದನ್ನು ಶನಿವಾರ ಕಾರವಾರದ ಹಾಗೂ ಜಿಲ್ಲೆಯ ಕರಾವಳಿ ವಿವಿಧ ಮೀನುಗಾರ ಸಂಘಟನೆಗಳು ಹಾಗೂ ಮೀನು ವ್ಯಾಪಾರಿಗಳು ವಿರೋಧಿಸಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಸಾಂಕೇತಿಕವಾಗಿ ಮೂರು ಗಂಟೆ ನಡೆದ ಪ್ರತಿಭಟನೆಯಲ್ಲಿ ಗೋವಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಗೋವಾದ ಮೀನು ತುಂಬಿದ ಲಾರಿಗಳು ಸಹ ಕರ್ನಾಟಕ ಪ್ರವೇಶಿಸುವುದು ಬೇಡ. ಒಂದು ವೇಳೆ ಪ್ರವೇಶಿಸಿದರೆ ಅಂಥ ವಾಹನಗಳ ಮೇಲೆ ಕಲ್ಲು ತೂರುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಗೋವಾದಿಂದ ಕರ್ನಾಟಕ ಪ್ರವೇಶಿಸುತ್ತಿದ್ದ ಹತ್ತು ಮೀನು ತುಂಬಿದ ಕಂಟೇನರ್‌ಗಳನ್ನು ತಡೆದರು.
ಗೋವಾ ಸರ್ಕಾರ ವಿವಿಧ ನೆಪವೊಡ್ಡಿ ಕರ್ನಾಟಕ ಮತ್ತು ಕಾರವಾರದ ಮೀನು ಲಾರಿಗಳ ಪ್ರವೇಶಕ್ಕೆ ಕಳೆದೆರಡು ತಿಂಗಳಿಂದ ಕಿರುಕುಳ ನೀಡುತ್ತಿದೆ. ಒಂದು ತಿಂಗಳಿಂದ ಕರ್ನಾಟಕದ ಮೀನು ರಫ್ತಿಗೆ ಪೂರ್ಣ ನಿಷೇಧ ಹೇರಿದೆ. ಫಾರ್ಮೋಲಿನ್ ಹಚ್ಚುತ್ತಾರೆ. ಅದನ್ನು ದಿನವೂ ಪರೀಕ್ಷಿಸಬೇಕು ಎಂಬ ನೆಪವೊಡ್ಡುತ್ತಿದೆ. ಅಲ್ಲದೇ ಆರು ತಿಂಗಳು ನಿಷೇಧ ಹೇರಿದೆ. ಇದು ಸರಿಯಲ್ಲ. ಕರ್ನಾಟಕ ಸರ್ಕಾರ ಮತ್ತ ಮೀನುಗಾರಿಕಾ ಇಲಾಖೆಯ ಮನವಿಗೆ ಗೋವಾ ಸರ್ಕಾರ ಕಿವಿಗೊಡುತ್ತಿಲ್ಲ. ಹಾಗಾಗಿ ಗೋವಾದಿಂದಲೂ ಮೀನು ತುಂಬಿದ ಲಾರಿಗಳು ಕರ್ನಾಟಕ ಪ್ರವೇಶಿಸಲು ಬಿಡುವುದಿಲ್ಲ ಎಂದು ಕಾರವಾರದ ಮೀನು ಮಾರಾಟ ಫೆಡರೇಶನ್, ಪರ್ಶಿಯನ್ ಬೋಟ್ ಯುನಿಯನ್ ಸೇರಿದಂತೆ ಹತ್ತು ಹಲವು ಸಂಘಟನೆಗಳು ಗೋವಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದವು. ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲಾಯಿತು. ಆದರೆ ಸಾರ್ವಜನಿಕರ ವಾಹಗಳಿಗೆ, ಸಂಚಾರಿ ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ಕರ್ನಾಟಕದ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಸಮಸ್ಯೆ ಆಲಿಸಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರ ಮತ್ತು ಮೀನು ವ್ಯಾಪಾರಿಗಳ ಬೇಡಿಕೆಯನ್ನು ಕೂಡಲೇ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ವಿವಿಧ ಬೋಟ್ ಯುನಿಯನ್ ಮುಖಂಡರು ನೇತೃತ್ವ ವಹಿಸಿದ್ದರು. ದಕ್ಷಿಣ ಕನ್ನಡ, ಉಡುಪಿ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗದ ಮೀನುಗಾರ ಮುಖಂಡರು, ಸುಧಾಕರ ಹರಿಕಂತ್ರ, ಸಂಜೀವ ಹರಿಕಂತ್ರ, ಗಣಪತಿ ಮಾಂಗ್ರೆ, ಪ್ರವೀಣ ಜಾವಕರ್ ಮುಂತಾದವರು ಇದ್ದರು.
ಗೋವಾ ಸರ್ಕಾರದ ಆದೇಶ: ಕರ್ನಾಟಕದಿಂದ ಬರುವ ಮೀನು ವಾಹನ ಕಂಟೇನರ್‌ಗಳು ನಿರ್ದಿಷ್ಟ ಮಾದರಿ ಹೊಂದಿರಬೇಕು. ಆಹಾರ ಇಲಾಖೆಯ ಪ್ರಮಾಣಪತ್ರ, ವ್ಯಾಪಾರದ ಲೈಸೆನ್ಸ್ ನವೀಕರಿಸಿರಬೇಕು. ಮೀನುಗಳಿಗೆ ಫಾರ್ಮೋಲಿನ್ ಸೇರಿದಂತೆ ಯಾವುದೇ ರಾಸಾಯನಿಕ ಹಚ್ಚಿರಬಾರದು. ಆರು ತಿಂಗಳು ಮೀನನ್ನು ಗೋವಾಕ್ಕೆ ರಫ್ತು ಮಾಡಬಾರದು ಎಂದು ಗೋವಾದ ಮೀನುಗಾರಿಕಾ ಸಚಿವಾಲಯ ಕಳೆದ ಅ.26ರಂದು ಆದೇಶ ಹೊರಡಿಸಿದೆ. ಈ ಆದೇಶದ ನಂತರ ಕರ್ನಾಟಕ ಮತ್ತು ಗೋವಾ ಗಡಿಭಾಗದಲ್ಲಿ ಕರ್ನಾಟಕದ ಕರಾವಳಿಯಿಂದ ಮೀನು ತುಂಬಿದ ವಾಹನಗಳ ಮೇಲೆ ಗೋವಾ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಈ ಆದೇಶದಿಂದ ಗೋವಾ ಕರ್ನಾಟಕದ ಬಾಂಧವ್ಯ ಸಹ ಹದಗೆಡುತ್ತಿದೆ.