Advertisement

ಹೀಗಿರಬೇಕು ಅಂತ ಅನ್ನಲಿಲ್ಲ, ಬದುಕಿ ತೋರಿಸಿದರು…

01:20 PM Apr 21, 2018 | |

ರಾಜ್‌ಕುಮಾರ್‌  ನಮ್ಮ ಜೊತೆ ಇಲ್ಲ ಅಂತ ಅನಿಸುತ್ತಲೇ ಇಲ್ಲ. ಅವರು ಬರೀ ಪಾತ್ರಗಳಲ್ಲಿ ಮಿಂಚಿ, ಪರದೇ ಮೇಲೆ ಒಳ್ಳೇತನವನ್ನು ತೋರಿಸಿ ಸುಮ್ಮನಾಗಿದ್ದರೆ ಈ ಫೀಲ್‌ ಬರುತ್ತಿರಲ್ಲ. ಬದಲಾಗಿ, ರಾಜ್‌ಕುಮಾರ್‌  ನಿಜ ಜೀವನದಲ್ಲೂ ಎಲ್ಲರೊಳಗೊಂದಾಗಿ ಬಾಳಿದರು.  ಪಾತ್ರಗಳನ್ನೂ ಮೀರಿದ  ಅವರ ಮೇರು ವ್ಯಕ್ತಿತ್ವವೇ ಇಂದಿಗೂ ಜನಮನದಲ್ಲಿ ರಾಜ್‌ಕುಮಾರ್‌ರನ್ನು ಜೀವಂತವಾಗಿ ಇಟ್ಟಿರುವುದು. 

Advertisement

 ರಾಜ್‌ಕುಮಾರ್‌  ಬದುಕಿನಿಂದ ಅರಿತುಕೊಳ್ಳಬೇಕಾಗಿದ್ದು ಏನೆಂದರೆ ಮನುಷ್ಯ  ನಯ, ವಿನಯ, ಮಾನವೀಯತೆಯನ್ನು ಬದುಕಲ್ಲಿ ಅಳವಡಿಸಿಕೊಂಡರೆ ನಮ್ಮ ಮೌಲ್ಯಗಳು ಹೆಚ್ಚುತ್ತಾ ಹೋಗುತ್ತವೆ. ಸರ್ವಕಾಲಕ್ಕೂ ಸಲ್ಲುವ ವ್ಯಕ್ತಿಯಾಗುತ್ತಾರೆ ಅನ್ನೋದಕ್ಕೆ ಇವರಿಗಿಂತ ಬೇರೆ ಉದಾಹರಣೆ ಬೇಕೆ? ಸಜ್ಜನಿಕೆ, ಸನ್ನಡತೆ ಅನ್ನೋದು ಸಿನಿಮಾ ಸ್ಟಾರ್‌ಗೆ ಮಾತ್ರ  ಇರಬೇಕು ಅಂತಿಲ್ಲ. ಸಾಮಾನ್ಯರೂ ಕೂಡ ಅಳವಡಿಸಿಕೊಂಡರೆ ಪ್ರಸ್ತುತವಾಗಬಹುದು. 

 ನಮ್ಮಲ್ಲಿ ಸನ್ಯಾಸಿಗಳು, ಮಠಾಧೀಶರುಗಳು ಪ್ರತಿದಿನ ಪ್ರವಚನ ಮಾಡಿ, ಸಮಾಜದಲ್ಲಿ ಒಳ್ಳೆದನ್ನು, ಜನರಲ್ಲಿ ಸನ್ನಡತೆಯನ್ನು ಬಿತ್ತುವ ಕಾರ್ಯ ಮಾಡುತ್ತಾರೆ. ಆದರೆ ರಾಜ್‌ಕುಮಾರ್‌  ಎಲ್ಲವನ್ನೂ ಬದುಕಿನ ಮೂಲಕ ತೋರಿಸಿ ಕೊಟ್ಟಿದ್ದರಿಂದಲೇ ಅವರು ಇಂದಿಗೂ ಪ್ರಸ್ತುತ ಎನಿಸಿದ್ದಾರೆ.  

 ಅವರ ಬದುಕನ್ನು ಸ್ವಲ್ಪ ಕೆದಕಿದರೆ ಅಲ್ಲೊಬ್ಬ ಬಸವಣ್ಣ ಕಂಡಾನು. ಏಕೆಂದರೆ ಅವರು ಬದುಕಿನ ಪೂರ್ತಿ ನಂಬಿದ್ದು, ಆಚರಿಸಿದ್ದು, “ಕಾಯಕವೇ ಕೈಲಾಸ’ ಅನ್ನೋದನ್ನೇ. ತಮ್ಮ ಪಾಲಿಗೆ ಬಂದ ಪಾತ್ರವಾಗಲೀ, ಗಾಯನವಾಗಲೀ ಏನಿದೆ, ಎಲ್ಲವನ್ನೂ ಅದರ ಆಳಕ್ಕೆ ಇಳಿದು ಪರಿಪೂರ್ಣವಾಗೋ ತನಕ ಮಾಡುತ್ತಿದ್ದರು. ಫ‌ಲಾಫ‌ಲ ದೇವರಿಗೆ ಬಿಟ್ಟಿದ್ದು. ನೀನು ಏನು ಕೊಡ್ತಿಯೋ ಕೊಡು. ಕೊಡಲಿಲ್ಲ ಅಂದರೆ ಬೇಸರವಿಲ್ಲ. ಅದನ್ನು ನಾನು ನಿನಗೆ ಮಾಡಿದ ಸೇವೆ ಅಂದೊRàತೀನಿ ಅಂತ ತಿಳಿದಿದ್ದರು. ಹೀಗಾಗಿ ಅವರು ಯಾವತ್ತೂ ಹಣ ಕೊಟ್ಟರೆ ನಟನೆ ಮಾಡ್ತೀನಿ. ಇಲ್ಲಂದ್ರೆ ಇಲ್ಲ ಅನ್ನೋ ಸ್ವಾರ್ಥದ ಬೇಲಿಯನ್ನು ತಮ್ಮ ಸುತ್ತ ಹಾಕಿಕೊಳ್ಳಲಿಲ್ಲ. 

ಇವತ್ತು ರಾಜ್‌ಕುಮಾರ್‌  ಏಕೆ ಮುಖ್ಯ ಆಗ್ತಾರೆ ಅನ್ನೋದಕ್ಕೆ ಅವರಲ್ಲಿದ್ದ ಶ್ರದ್ಧೆಯೂ ಮುಖ್ಯ ಕಾರಣ. ಅದಕ್ಕೆ ಒಂದೆರಡು ಉದಾಹರಣೆ ಕೊಡ್ತೀನಿ. 

Advertisement

1
“ಎರಡು ಕನಸು’ ಚಿತ್ರದಲ್ಲಿ ರಾಜ್‌ಕುಮಾರ್‌ ರದ್ದು ಪ್ರೊಫೆಸರ್‌ ಪಾತ್ರ. ಅದರಲ್ಲಿ ಇಂಗ್ಲೀಷ್‌ ಪಾಠ ಮಾಡುವ ಪ್ರಸಂಗವಿದೆ.  ಇದಕ್ಕಾಗಿ ನಾನು ರೋಮಿಯೋ ಜ್ಯೂಲಿಯಟ್‌ನ ಪ್ಯಾಸೇಜನ್ನು ಕನ್ನಡದಲ್ಲಿ ಬರೆದುಕೊಟ್ಟಿದ್ದೆ. ರಾಜ್‌ಕುಮಾರ್‌  ಅದನ್ನು ಹಗಲು ರಾತ್ರಿ ಎನ್ನದೆ ಚೆನ್ನಾಗಿ ಉರು ಹೊಡೆದು, ಆಕ್ಸೆಂಟ್‌, ಡೈಲಾಗ್‌ ಡಿಲಿವರಿಯನ್ನು ಬಹಳ ಚೆನ್ನಾಗಿ ಪ್ರಾಕ್ಟೀಸ್‌ ಮಾಡಿದ್ದರು. ಪ್ರತಿ ಶಾಟ್‌ ಮಧ್ಯೆ ಬಿಡುವಿನಲ್ಲಿ 
“ಭಗವಾನ್‌, ಸ್ವಲ್ಪ ಬನ್ನಿ. ನಾನು ಇಂಗ್ಲೀಷ್‌ನಲ್ಲಿ ಹೇಳ್ತೀನಿ. ಏನಾದರೂ ತಪ್ಪಿದ್ದರೆ ನೀವು ಹೇಳಿ’ ಅನ್ನೋರು. ಹೀಗೆ ತಿದ್ದಿಸಿಕೊಂಡು ಪರ್‌ಫೆಕ್ಟ್ ಮಾಡಿಕೊಂಡರು. ಮಧ್ಯೆ  ಅವರಿಗೇಕೋ ಒಂದು ಅನುಮಾನ ಶುರುವಾಯಿತು. “ಭಗವಾನ್‌, ಅಕಸ್ಮಾತ್‌ ನಾನು ತಪ್ಪು ಮಾಡಿದರೂ ನೀವು ಸುಮ್ಮನೆ ಇದ್ದು ಬಿಡ್ತೀರ. ಹೇಗಪ್ಪಾ ಹೇಳ್ಳೋದು ಅಂತ. ಅದಕ್ಕೆ ಒಂದು ಕೆಲಸ ಮಾಡಿ. ಯಾರಾದರೂ ಇಂಗ್ಲೀಷ್‌ ಪ್ರೊಫೆಸರ್‌ ಇದ್ದರೆ ಕರೆಸಿಬಿಡಿ. ಮೂರನೇ ವ್ಯಕ್ತಿ ಜ‚ಡ್ಜ್ ಮಾಡಿದರೆ ನಮ್ಮ ತಪ್ಪುಗಳು ತಿಳಿಯುತ್ತೆ. ನಾಳೆ ಜನ ನೋಡಿ ನಗಬಾರದು. ನಾವೇನಾದ್ರೂ ತಪ್ಪು ಮಾಡಿದ್ರೆ ಅದು ಭಾಷೆಗೆ ಮಾಡುವ ಅವಮಾನ’ ಅಂದರು. 

ಅವರ ಮಾತನ್ನು ಒಪ್ಪಿ, ಮದ್ರಾಸ್‌ ವಿಶ್ವವಿದ್ಯಾಲಯದ ಇಂಗ್ಲೀಷ್‌ ಪ್ರೊಫೆಸರ್‌ ಕೃಷ್ಣಭಟ್‌ರನ್ನು ಕರೆಸಿದೆವು. ಸೆಟ್ಟಿಗೆ ಬಂದರು. ರಾಜ್‌ಕುಮಾರರ ಮಾತುಗಳನ್ನು ಕೇಳಿಸಿಕೊಂಡರು. ಮಾನೀಟರ್‌ ಮುಂದೆ ಕೂತರು. ಅಲ್ಲೂ ಕೇಳಿಸಿಕೊಂಡರು. “ಸಾರ್‌, ನೀವು ಓದಿರೋರು. ನಾನು ಸರಿಯಾಗಿ ಇಂಗ್ಲೀಷ್‌ ಉಚ್ಛಾರ ಮಾಡ್ತೀನಾ ನೋಡಿ. ತಪ್ಪಿದ್ದರೆ ತಿದ್ದಿ ಅಂತ ರಾಜ್‌ಕುಮಾರ್‌  ಅಂದರು. ಇವರ ಅಭಿನಯ, ಮಾತಿನ ಉಚ್ಛಾರವೆಲ್ಲ ಕೇಳಿದೆ ಪ್ರೊಫ‌ಸರ್‌   ” ಸಾರ್‌, ಪರ್‌ಫೆಕ್ಟಾಗಿದೆ. ನನಗೂ ಕೂಡ ಇಷ್ಟೊಂದು ರಸವತ್ತಾಗಿ, ಸಂದಭೋìಚಿತವಾಗಿ ಮಾತನಾಡಕ್ಕೆ ಬರೋಲ್ಲ’ ಅಂದು ಬಿಟ್ಟರು. 
 
2 ರಾಜ್‌ಕುಮಾರ್‌  “ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿ ಸಂಸ್ಕೃತವನ್ನು ಉಚ್ಚರಿಸಬೇಕಾದಾಗ, ಪೂಜೆ ಪುನಸ್ಕಾರ ಮಾಡಬೇಕಾದಾಗೆಲ್ಲ “ಸರಿ ಇದೆಯೋ ಇಲ್ಲವೋ ‘ಅಂತ ತಿಳಿದುಕೊಳ್ಳಲು ಹಂಬಲಿಸುತ್ತಿದ್ದರು. ಒಂದು ಪಕ್ಷ ಉಚ್ಚಾರ ತಪ್ಪಾದರೆ? ನೋಡಿದವರು ಏನಂತಾರೆ ಅನ್ನೋ ಭೀತಿ. 

ಹಾಗಾಗಿ, “ಭಗವಾನ್‌, ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರನ್ನು ಕರೆಸಿಬಿಡಿ’ ಅಂತ ಪಟ್ಟುಹಿಡಿದರು. ಆಗ ಉಡುಪಿಯ ಮಠಕ್ಕೆ ಹೋಗಿ, ಅಲ್ಲಿ ಪೇಜಾವರರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ. ಅವರು ಕುಂಜೂರ್‌ ಅನ್ನೋರನ್ನು ಕಳುಹಿಸಿಕೊಟ್ಟು, ಚಿತ್ರದ ಶೂಟಿಂಗ್‌ ಮುಗಿಯವವರೆಗೂ ರಾಜ್‌ಕುಮಾರ್‌ರ ಜೊತೆಯಲ್ಲೇ ಇರಬೇಕು ಅಂತ ಹೇಳಿ ಕಳುಹಿಸಿದರು. ಕುಂಜೂರ್‌ ಅವರು ಭಕ್ತಾದಿಗಳಿಗೆ  ಅಕ್ಷತೆ ಕೊಡುವ ಶೈಲಿ, ತೀರ್ಥ ಕೊಡುವ ರೀತಿ, ಜಪ ಮಾಡುವಾಗ ತಲ್ಲೀನವಾಗುವ ಪರಿ, ಪೂಜೆ ಮಾಡೋದು, ಕಚ್ಚೆ ಹಾಕೋದು, ಶಲ್ಯ-ಪಂಚೆ ಹೊದ್ದಿಕೊಳ್ಳೋದು, ಮೈಯ್ಯಿಗೆ ಗಂಧಗಳನ್ನು ಹೇಗೆ ಹಚ್ಚಿಕೊಳ್ಳಬೇಕು ಎನ್ನುವುದನ್ನೆಲ್ಲಾ ವಿಷದವಾಗಿ ಹೇಳಿಕೊಟ್ಟರು.  ರಾಜುRಮಾರ್‌ ಚಾಚೂ ತಪ್ಪದೆ ಅವರು ಹೇಳಿದಂತೆ ಮಾಡಿದರು.  ಚಿತ್ರ ಬಿಡುಗಡೆಯಾಯಿತು. ನಾನು ಸ್ಟೇಟ್ಸ್‌ ಚಿತ್ರಮಂದಿರಕ್ಕೆ ಹೋದರೆ ಶಾಕ್‌. ಥಿಯೇಟರ್‌ ಹೊರಗಡೆ ರಾಶಿ ರಾಶಿ ಚಪ್ಪಲಿಗಳು ಬಿದ್ದಿದ್ದವು.  ನೋಡಿದರೆ, ಪ್ರೇಕ್ಷಕರೆಲ್ಲರೂ ರಾಜ್‌ಕುಮಾರ್‌ರನ್ನೇ ರಾಘವೇಂದ್ರ ಸ್ವಾಮಿ ಅಂತ ಭಾವಿಸಿ, ಭಕ್ತಿಯಿಂದ ಚಪ್ಪಲಿಯನ್ನು ಹೊರಗೆ ಬಿಟ್ಟು ಚಿತ್ರ ನೋಡುತ್ತಿದ್ದಾರೆ. 

3
“ಆಪರೇಷನ್‌ ಡೈಮಂಡ್‌ ರಾಕೆಟ್‌’ ಚಿತ್ರ ಮಾಡುವ ಹೊತ್ತಿಗೆ ರಾಜುRಮಾರರಿಗೆ ಇಂಗ್ಲೀಷ್‌ ಮೇಲೆ ಒಲವು ಹುಟ್ಟಿಸಿದ್ದೆ. ಈ ಚಿತ್ರದಲ್ಲಿ “ಇಫ್ಯು ಕಮ್‌ ಟುಡೇ ‘ಹಾಡಿದೆಯಲ್ಲ, ಅದನ್ನು ನಾನೇ ಬರೆದದ್ದು. ಸಂದರ್ಭ ಹುಟ್ಟಿದ್ದು ಹೇಗೆಂದರೆ- ರಾಜ್‌ಕುಮಾರ್‌, ನಾನು, ಜಿ.ಕೆ.ವೆಂಕಟೇಶ್‌ ಮಾತನಾಡುತ್ತಾ ಕುಳಿತಿದ್ದೆವು. ಬಾಂಡ್‌ ಚಿತ್ರ ಅಲ್ವೇ. ಸನ್ನಿವೇಶಕ್ಕೆ ತಕ್ಕಂತೆ ಇಂಗ್ಲೀಷ್‌ ಹಾಡನ್ನು ಸೇರಿಸಿದರೆ ಹೇಗೆ ಅಂತ ಐಡಿಯಾ ಕೊಟ್ಟೆ.  ವೆಂಕಟೇಶ್‌ ಐಡಿಯಾ ಚೆನ್ನಾಗಿದೆಯಲ್ಲಾ  ಅಂದರು. ರಾಜುRಮಾರ್‌, “ಅಯ್ಯೋ ನನ್ನ ಕೈಲಿ ಇಂಗ್ಲೀಷ್‌ ಹಾಡು ಹಾಡಿಸಬೇಡಿ. ನಾಲ್ಕನೇ ಕ್ಲಾಸೂ ಓದಿಲ್ಲ ನಾನು.  ತಪ್ಪುಗಿಪ್ಪಾದರೆ ಕಷ್ಟ ‘ ಅಂತ ದೂರ ನಿಂತರು. ಆಮೇಲೆ  “ಅಣ್ಣಾ, ಎರಡು ಕನಸು ಚಿತ್ರದಲ್ಲಿ ನೀವು ಜ್ಯೂಲಿಯಸ್‌ ಸೀಸರ್‌ನ ಫ್ರೆàಸ್‌ಗಳನ್ನೇ ನೀರು ಕುಡಿದಂತೆ ಮಾತನಾಡಿದ್ದೀರಂತೆ. ಈ ಹಾಡು ಯಾವ ಮಹಾ, ಅಣ್ಣಾ, ಸಂಗೀತಕ್ಕೆ ಭಾಷೆ ಇಲ್ಲ. ಸಂಗೀತವೇ ಭಾಷೆ.  ಜೇಸುದಾಸ್‌ ಅವರು ಕನ್ನಡದಲ್ಲಿ ಹಾಡೋಲ್ವೇ, ಎಸ್‌ಪಿ ಬಾಲಸುಬ್ರಮಣ್ಯಂ ಅವರು ಹಿಂದಿಯಲ್ಲಿ ಹಾಡಿಲ್ಲವೇ.  ಹಾಡಿಗೆ ಭಾಷೆ ಮುಖ್ಯವಲ್ಲ. ಭಾವವಷ್ಟೇ ಮುಖ್ಯ.  ಹಾಡುಗಾರರಿಗೂ ಅಷ್ಟೇ ‘ ಅಂದಾಗ “ಹೌದಲ್ವೇ’ ಅಂತ ಒಪ್ಪಿಕೊಂಡರು.  
ಮದ್ರಾಸ್‌ನ ಗೋಲ್ಡ್‌ನ್‌ ಸ್ಟುಡಿಯೋದಲ್ಲಿ ರೆಕಾರ್ಡಿಂಗ್‌ ಶುರುವಾಯಿತು. ಸಂಗೀತಕ್ಕೆ ಜಿ.ಕೆ.ವೆಂಟಕೇಶ್‌ ಇದ್ದರು.  ರಾಜ್‌ಕುಮಾರ್‌  ಮಾನಿಟರ್‌ ಮುಂದೆ ನಿಂತು ಹಾಡಲು ಶುರುಮಾಡಿದರು. “ಇಫ್ ಯೂ ಕಮ್‌ ಟುಡೇ ‘ ಅನ್ನೋ ಮೊದಲ ವಾಕ್ಯದಲ್ಲಿ “ಇಫ್’ ಅನ್ನೋ ಪದದಲ್ಲಿ “ಇ’ಗೆ ಸ್ವಲ್ಪ ದೀರ್ಘ‌ ಕೊಟ್ಟು, “ಫ‌’ ಮೇಲೆ ಸ್ವಲ್ಪ ಭಾರ ಹಾಕಿ ಉಚ್ಚರಿಸಬೇಕು. ಅದು ಸ್ವಲ್ಪ  ಹಾಡುವಾಗ ತಪ್ಪಾಯಿತು. ಒಮ್ಮೆ ಹಾಡಿ ಕೇಳಿದಾಗ ಸ್ವಲ್ಪ ತಪ್ಪಾಗಿದೆಯೆಂದು ಗೊತ್ತಾಯಿತು. ಮತ್ತೆ ಹಾಡಿದರು. ಹೀಗೆ 6 ಸಲ ಈ ಹಾಡನ್ನು ಹಾಡಿ ಮುಗಿಸಿದರು. ಆಕಾಲದಲ್ಲಿ ಒಂದೇ ಒಂದು ತಪ್ಪಾದರೆ ಇಡೀ ಹಾಡನ್ನು ಮತ್ತೆ ಮೊದಲಿಂದ ಹಾಡಬೇಕಿತ್ತು. ವಾದ್ಯವೃಂದ ಮತ್ತೆ ಮತ್ತೆ ನುಡಿಸಬೇಕು. ಇಷ್ಟಾದರೂ ಅವರ ಶ್ರದ್ದೆ ಮಾತ್ರ ಕಡಿಮೆಯಾಗಿರಲಿಲ್ಲ. “ಭಗವಾನ್‌, ನನ್ನ ಬಾಯಲ್ಲಿ ಇಂಗ್ಲೀಷ್‌ ಹಾಡು ಹಾಡಿಸಿದ್ದೀರಿ. ಒಂದ್ಸಲ ಕೇಳಿಯಪ್ಪ. ತಪ್ಪೇನಾದರು ಆಗಿದೆಯಾ ಅಂತ’ ಅಂದರು.

ಮೊನ್ನೆ ದಕ್ಷಿಣ ಆಫ್ರಿಕಾ ಆಟಗಾರ ಎ.ಬಿ. ಡಿವಿಲಿಯರ್ಸ್‌ ಒಂದು ಮಾತು ಹೇಳಿದರು.” ನಾನು ಬ್ಯಾಟಿಂಗ್‌ನಲ್ಲಿ ವಿಫ‌ಲವಾದರೆ. ಡ್ರಸ್ಸಿಂಗ್‌ ರೂಮಿಗೆ ಬಂದು  ರಾಜುRಮಾರ್‌ ಹಾಡಿದ “ಇಫ್ ಯು ಕಮ್‌ ಟುಡೇ’ ಹಾಡನ್ನು ಹಾಕ್ಕೊಂಡು ಕೇಳ್ತೀನಿ. ಇದೊಂಥರಾ ನನಗೆ ಟಾನಿಕ್‌ ಇದಾØಗೆ. ಬಹಳ ಇಷ್ಟದ ಹಾಡು ನನಗೆ ಅಂದರು.
ನೋಡಿ, ರಾಜ್‌ಕುಮಾರ್‌  ಭೌತಿಕವಾಗಿ ಇಲ್ಲದೇ ಇದ್ದರೂ ಹೇಗೆಲ್ಲಾ ನಮ್ಮೊಂದಿಗೆ ಬದುಕುತ್ತಾ ಇದ್ದಾರೆ ನೋಡಿ…

ದೊರೆಭಗವಾನ್‌

 ನಿರೂಪಣೆ: ಕೆ.ಜಿ.ರಾಜ್‌

Advertisement

Udayavani is now on Telegram. Click here to join our channel and stay updated with the latest news.

Next