Advertisement

ಬೇರೆ ಜಿಲ್ಲೆಗೆ‌ ನೀರು ಹರಿಸುವುದಿಲ್ಲ

01:10 PM Aug 30, 2019 | Team Udayavani |

ಕುಣಿಗಲ್: ತಾಲೂಕಿನ ನೀರು ಬೇರೆ ಜಿಲ್ಲೆಗೆ ಹರಿಸಲು ಲಿಂಕ್‌ಕೆನಾಲ್ ಮಾಡಲಾಗುತ್ತಿದೆ ಎಂದು ವಿಪಕ್ಷ ದವರು ಸುಳ್ಳು ಪ್ರಚಾರ ಮಾಡಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಡಾ.ಎಚ್. ಡಿ. ರಂಗನಾಥ್‌ ಆರೋಪಿಸಿದರು.

Advertisement

ಹುತ್ರಿದುರ್ಗ ಹೋಬಳಿ ಯಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ, ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ಪಾಲಿನ ಒಂದು ಹನಿ ನೀರು ಬೇರೆ ಜಿಲ್ಲೆಗೆ ಕೊಡುವುದಿಲ್ಲ. ಹೇಮಾವತಿ ಕೊನೆಯ ಭಾಗವಾದ ಕುಣಿಗಲ್ ತಾಲೂಕಿಗೆ ಮೊದಲು ನೀರು ಹರಿಸಿದ ಬಳಿಕ ಬೇರೆ ತಾಲೂಕಿಗೆ ಹರಿಸಬೇಕಾಗಿದೆ. ಆದರೆ ಗುಬ್ಬಿ, ತುರುವೇಕೆರೆ, ತುಮಕೂರು, ಸಿ.ಎಸ್‌. ಪುರ ಮಾರ್ಗವಾಗಿ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸ ಲಾಗುತ್ತಿದೆ. ಈ ಮಧ್ಯೆ ಬೇರೆ ತಾಲೂಕಿನ ರೈತರು ಅಕ್ರಮವಾಗಿ ನೂರಾರು ಪಂಪ್‌ಸೆಟ್ ಅಳವಡಿಸಿ ಕೊಂಡು ನೀರು ಹರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲ ಪ್ರಭಾವಿ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟಿ ನಾಲೆಯ ಗೇಟ್ ಮುರಿಸಿ ಸಣ್ಣಪುಟ್ಟ ಕೆರೆಗಳಿಗೆ ಹರಿಸಿ ಕೊಳ್ಳುತ್ತಿದ್ದಾರೆ.

ಇದರಿಂದ ಕುಣಿಗಲ್ ದೊಡ್ಡಕೆರೆ 25 ವರ್ಷದಿಂದ ತುಂಬಿಲ್ಲ. ಹಾಗಾಗಿ ಲಿಂಕ್‌ ಕೆನಾಲ್ ಯೋಜನೆ ಕೈಗೆತ್ತಿಕೊಳ್ಳ ಲಾಗಿದೆ. ಇದು ಅನುಷ್ಠಾನ ಗೊಂಡರೆ ಸಂಸದ ಡಿ.ಕೆ. ಸುರೇಶ್‌ ಹಾಗೂ ನನಗೆ ಹೆಸರು ಬರುತ್ತದೆ ಎಂದು ವಿರೋಧ ಪಕ್ಷದ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹನಿ ನೀರು ಕೊಡ್ಡಲ್ಲ: ಕೃಷ್ಣ ಬೇಸನ್‌ನಲ್ಲಿ ಇರುವ ಶಿರಾ ತಾಲೂಕಿಗೆ ಹೇಮಾವತಿಯಿಂದ ಒಂದು ಟಿಎಂಸಿ ನೀರು ಅಲೋಕೇಷನ್‌ ಮಾಡಿಕೊಡಲಾಗಿದೆ. ತುಮ ಕೂರು, ಗುಬ್ಬಿ, ತುರುವೇಕೆರೆ ಕೆರೆಗಳಿಗೆ ತಲಾ 500 ಎಂಸಿಎಫ್‌ಟಿ ನೀರು ನಿಗದಿಪಡಿಸಲಾಗಿದೆ. ಆದರೆ ಕುಣಿಗಲ್ ದೊಡ್ಡಕೆರೆಗೆ ಕೇವಲ 73.07 ಎಸಿಎಫ್‌ಟಿ, ಹಾಗೂ ಮಾರ್ಕೋ ನಹಳ್ಳಿ ಜಲಾಶಯಕ್ಕೆ ಯಾವುದೇ ಅಲೋಕೇಷನ್‌ ಇರಲಿಲ್ಲ. ಹಿಂದಿನ ಸರ್ಕಾರದ ಮೇಲೆ ಒತ್ತಡ ತಂದು ಕುಣಿಗಲ್ ದೊಡ್ಡ ಕೆರೆಗೆ 464.68 ಎಂಸಿಎಫ್‌ಟಿ ಹಾಗೂ ಮಾರ್ಕೋನಹಳ್ಳಿ ಜಲಾಶಯಕ್ಕೆ 1 ಟಿಂಎಂಸಿ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ 2.5 ಟಿ.ಎಂ.ಸಿ ನೀರು ಸೇರಿದಂತೆ ಒಟ್ಟು ತಾಲೂಕಿಗೆ 4 ಟಿಎಂಸಿ ನೀರು ನಿಗದಿ ಪಡಿಸಲಾಗಿದೆ. ಬೇರೆ ಜಿಲ್ಲೆಗೆ ನೀರು ಹರಿಸುವುದಿಲ್ಲ ಎಂದು ಹೇಳಿದರು.

ನೀರಿಗೆ ಅಡ್ಡಿ: ಜಿಲ್ಲೆಯ ಬಹುತೇಕ ಶಾಸಕರು ಕುಣಿಗಲ್ಗೆ ಹೇಮಾವತಿ ನೀರು ಕೊಡಲು ವಿರೋಧಿಸುತ್ತಿದ್ದಾರೆ. ವಿರೋಧದ ನಡುವೆಯೂ ಕಳೆದ ಹತ್ತು ದಿನಗಳಿಂದ 280 ಕ್ಯೂಸೆಕ್‌ ನೀರು ಕುಣಿಗಲ್ ದೊಡ್ಡಕೆರೆಗೆ ಹರಿಸಲಾಗುತ್ತಿದೆ. ಇದೇ ರೀತಿ ಒಂದು ತಿಂಗಳು ಹರಿದರೆ ಕೆರೆ ತುಂಬಲಿದೆ ಎಂದು ಶಾಸಕರು ಹೇಳಿದರು.

Advertisement

ಚಕಾರ ಎತ್ತದ ಬಿಜೆಪಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 52 ಸಾವಿರ ಮತ ಪಡೆದಿದೆ. ಆದರೆ ನೀರಾವರಿಯಲ್ಲಿ ತಾಲೂಕಿಗೆ ಅಗಿರುವ ಅನ್ಯಾಯದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಬಿಜೆಪಿ ಮುಖಂಡರನ್ನು ಶಾಸಕರು ತರಾಟೆ ತೆಗೆದು ಕೊಂಡರು. ವಿವಿಧ ಅಭಿವೃದ್ಧಿಗೆ ಜಮೀನು ಬಿಟ್ಟಿಕೊಟ್ಟ 16 ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ಶಾಸಕರು ನೀಡಿದರು. ಗ್ರಾಪಂ ಅಧ್ಯಕ್ಷೆ ಮಮತಾ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.

ತಾಪಂ ಸದಸ್ಯ ಐ.ಎ. ವಿಶ್ವನಾಥ್‌, ಜಿಪಂ ಮಾಜಿ ಸದಸ್ಯ ಗಂಗಶಾನಯ್ಯ, ತಾಪಂ ಮಾಜಿ ಉಪಾಧ್ಯಕ್ಷ ಹೊನ್ನೇಗೌಡ, ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಜಯಲಕ್ಷ್ಮ ಮ್ಮ, ಮಹಮದ್‌ ಸೆಮಿಉಲ್ಲಾ, ಜಹೀರುದ್ದೀನ್‌, ಶಿವಣ್ಣ, ಪಿಡಿಒ ಎಸ್‌.ಶಂಕರ್‌, ಕಾರ್ಯದರ್ಶಿ ಬಲರಾಮಯ್ಯ, ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾರಾಯಣ್‌, ಮುಖಂಡರಾದ ಕೆಂಪೀರೇಗೌಡ, ಪದ್ಮನಾಭ, ಶಾಂತರಾಜು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next