Advertisement
ನೀನ್ಯಾರು ಎಂಬ ಪ್ರಶ್ನೆಯನ್ನು ನಿನಗೂ ಮತ್ತು ನನಗೂ ಕೇಳಿಕೊಳ್ಳುವ ಮುನ್ನ, ಬರೀ ನಿನ್ನ ಕನಸುಗಳನ್ನು ನಂಬಿ ಬದುಕಿಬಿಟ್ಟಿದ್ದೆ. ಕಾಮನಬಿಲ್ಲು ಸಹ ಅಸೂಯೆ ಪಡುವಂತಹ ಹೊಸ ಬಣ್ಣಗಳಲ್ಲಿ ಅದ್ದಿ ಮೂಡಿದ ಆ ಕನಸುಗಳಾದರೂ ಅದೆಷ್ಟು ಚಂದವಿದ್ದವು? ವಾಸ್ತವ ಎನ್ನುವುದೊಂದಿದೆ. ಮತ್ತದಕ್ಕೆ ನಿನ್ನ ಪ್ರೀತಿಯನ್ನೂ, ನನ್ನ ನಂಬಿಕೆಯನ್ನೂ ಬದಲಿಸುವ ತಾಕತ್ತಿದೆ ಎನ್ನುವುದು ಅಕ್ಷರಶಃ ಮರೆತೇ ಹೋಗಿತ್ತು.
ಅದನ್ನು ನೆನಪಿಸಿಕೊಳ್ಳುವ ಗೋಜಿಗೆ ನಾನೇ ಹೋಗಲಿಲ್ಲ. ಸೋಲಿನ ಭಾರವನ್ನು ತಡೆದುಕೊಳ್ಳಲಾರದ ದೌರ್ಬಲ್ಯ ನನ್ನ ಹೃದಯಕ್ಕೆ. ಹಾಗಿದ್ದರೆ, ಪ್ರೀತಿಯೆಂಬ ಈ ಬಣ್ಣಗಳ ಕಲಸು ಮೇಲೋಗರದಲ್ಲಿ ನನ್ನ ಕನಸು ಕೂಡ ಎಂದೋ ಕದಡಿ ಹೋಗಿಬಿಡುತ್ತದೆಂಬ ಸತ್ಯ ನನಗೆ ಮೊದಲೇ ಗೊತ್ತಿತ್ತೇ? ಗೊತ್ತಿದ್ದೂ ಪ್ರೀತಿಸುವ ಹುಚ್ಚು ನನ್ನ ಮನಸಿಗಾದರೂ ಯಾಕಿರಬೇಕಿತ್ತು? ಈ ಪ್ರೀತಿ ಎಂಬ ಪ್ರವಾಹದ ಸುಳಿಯಲ್ಲಿ ಸಿಲುಕಲೆಂದೇ ನನ್ನಂಥ ಬಡಪಾಯಿ ಹುಡುಗರು ಕೈಯಲ್ಲಿ ಹೂ ಹಿಡಿದು, ನಿನ್ನಂಥವಳ ಮುಂದೂ ಹಲ್ಲುಗಿಂಜುತ್ತಾ ನಿಲ್ಲುತ್ತಾರಲ್ಲ? ಗಂಡಿನ ಗುಂಡಿಗೆ, ಹಿಡಿ ಪ್ರೀತಿಗಾಗಿ ಅದೆಷ್ಟು ಪರಿತಪಿಸಿ ಒದ್ದಾಡುತ್ತಿರುತ್ತದೆ ಎನ್ನುವುದನ್ನು ಕೊಂಚ ಯೋಚಿಸಿ ನೋಡಬೇಕಿತ್ತು, ಇದ್ದಕ್ಕಿದ್ದಂತೆ ಕೈಬಿಟ್ಟು ಹೋಗುವ ಮೊದಲು! ಪ್ರೀತಿ ಎಂದರೆ ಮೈಗೆ ಮೈ ತಾಕಿಸಿ ಪುಳಕಗೊಳ್ಳುವುದಷ್ಟೇ ಆಗಿರಲಿಲ್ಲ ನನಗೆ. ಅದೊಂದೇ ಆಗಿದ್ದರೆ ಅದಕ್ಕೆ ನೀನೇ ಬೇಕಿರಲಿಲ್ಲ. ನನ್ನ ಒದ್ದೆಗಣ್ಣಿನಲ್ಲಿ ಮಡುಗಟ್ಟಿದ ಸಾಲು ಸಾಲು ಕನಸುಗಳನ್ನು ಹೇಳದೆಯೂ ಅರ್ಥವಾಗುವ, ನನ್ನ ಹೆಜ್ಜೆಯ ಗುರುತಿನಿಂದಲೇ ಗುರಿಯ ಜಾಡು ಹಿಡಿಯುವ ಹಸಿ ಜೀವವೊಂದು ಬೇಕಿತ್ತು. ಅದಕ್ಕೆಂದು ಅಳೆದು ತೂಗಿ ನಿನ್ನನ್ನು ಆಯ್ದುಕೊಂಡೆ. ವಿಪರ್ಯಾಸ ಎಂದರೆ ಇದೇ ಅಲ್ಲವಾ? ಪ್ರತಿಯೊಬ್ಬ ಪ್ರೇಮಿಯೂ ಅಂದುಕೊಳ್ಳುವಂತೆ ನನ್ನವಳು ಹಾಗಲ್ಲ ಎನ್ನುವ ಅದೇ ಹಳಸಲು ನಂಬಿಕೆ ನನ್ನದೂ ಆಗಿತ್ತಷ್ಟೇ!
Related Articles
Advertisement
ನಿನ್ನ ಸುಪ್ತ ಮನಸ್ಸಿಗೆ ತೃಪ್ತಿ ಕೊಡಬಹುದಾದ ನನ್ನ ಈ ವಿಷಾದ, ಮೋಸ ಹೋದ ಭಾವ ನಿನಗಾಗಿ ಅಲ್ಲವೇ ಅಲ್ಲ. ಹನಿ ಕಣ್ಣೀರಿಗೂ ಅರ್ಹಳಲ್ಲದ ನಿನಗಾಗಿ ಅಳುವುದೂ ಇಲ್ಲ. ನನ್ನ ಬದುಕಿನ ಅಮೂಲ್ಯ ಪುಟವೊಂದನ್ನು ಕ್ಷಣಿಕ ಸುಖದ ಹಿಂದೆ ಓಡುವ, ಪ್ರೇಮದ ಭಾಷೆಯೇ ಗೊತ್ತಿಲ್ಲದ ನಿನ್ನಂತ ನಿರಕ್ಷರಿಗೆ ಕೊಟ್ಟು ವ್ಯರ್ಥ ಮಾಡಿಕೊಂಡದ್ದಕ್ಕಾಗಿ ನಖಶಿಖಾಂತ ಖೇದವಷ್ಟೇ.
ನೀನು ಗೀಚಿಟ್ಟು ಹೋದ ಈ ಹಾಳೆಯನ್ನು ಇದ್ದದ್ದೇ ಸುಳ್ಳೆನ್ನುವಂತೆ ಕ್ಷಣದಲ್ಲಿ ಹರಿದು, ಮುದ್ದೆ ಮಾಡಿ ಕಸದ ತೊಟ್ಟಿಗೆ ಎಸೆದುಬಿಡುವ ದೇವತೆ ಬಂದೇ ಬರುತ್ತಾಳೆ. ನೆನಪಿರಲಿ…
-ವೀಚೀ