Advertisement

ದೋಸ್ತಿ ಸಹವಾಸ ಸಾಕಪ್ಪಾ ಸಾಕು…

05:41 PM Aug 05, 2019 | mahesh |

ಬೆಂಗಳೂರು/ಕೆ.ಆರ್‌.ಪೇಟೆ: ಅನರ್ಹರಾಗಿರುವ ಶಾಸಕರ ಕ್ಷೇತ್ರಗಳಲ್ಲಿ ನಡೆಯಬೇಕಿರುವ ಉಪಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ಮೈತ್ರಿ ಸಂಬಂಧ ಕಾಂಗ್ರೆಸ್‌ ಹೈಕಮಾಂಡ್‌ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ ಬೆನ್ನಲ್ಲೇ ಕುಮಾರಸ್ವಾಮಿ ಅವರ ಕಡೆಯಿಂದ ಈ ಹೇಳಿಕೆ ಹೊರಬಿದ್ದಿದೆ.

Advertisement

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈತ್ರಿ ಸಹವಾಸವೇ ಬೇಡ. ಹದಿನೇಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಕಡ್ಡಿ ಮುರಿದಂತೆ ತಿಳಿಸಿದರು.

ಮೈತ್ರಿ ಸಹವಾಸ ಸಾಕಾಗಿದೆ, ಸ್ವತಂತ್ರವಾಗಿ ಚುನಾವಣೆ ಎದುರಿಸಿ ಗೆಲ್ಲುವ ಶಕ್ತಿ ಜೆಡಿಎಸ್‌ಗಿದೆ. ಈ ಹಿಂದೆಯೂ ನಾವಾಗಿಯೇ ಕಾಂಗ್ರೆಸ್‌ ಬಳಿ ಮೈತ್ರಿ ಮಾಡಿಕೊಳ್ಳಲು ಹೋಗಿರಲಿಲ್ಲ. ಅವರಾಗಿಯೇ ನಮ್ಮ ಬಳಿ ಬಂದಿದ್ದರಿಂದ ಒಪ್ಪಿದ್ದೆವು. ಇನ್ನು ಯಾರೊಂದಿಗೂ ಮೈತ್ರಿ ಮಾತೇ ಇಲ್ಲ ಎಂದರು.

ನಾನು ರಾಜಕೀಯ ಮಾಡಿದ್ದು ಬಡ ಕುಟುಂಬಗಳ ಉದ್ಧಾರಕ್ಕಾಗಿಯೇ ಹೊರತು ಯಡಿಯೂರಪ್ಪ ರೀತಿ ಜೈಲಿಗೆ ಹೋಗುವ ರಾಜಕೀಯ ಮಾಡಿಲ್ಲ. ಬಡ ಕುಟುಂಬಗಳ ನೆರವಿಗೆ ನನ್ನ ಬಿಟ್ಟು ಯಡಿಯೂರಪ್ಪನೂ ಬರೋಲ್ಲ, ಸಿದ್ದರಾಮಯ್ಯನೂ ಬರೋದಿಲ್ಲ. ಬೇರೆ ಯಾರೂ ಬರೋದಿಲ್ಲ ಎಂದು ಹೇಳಿದರು.

ನನ್ನನ್ನು ನಂಬಿಕೊಂಡಿರುವ ಲಕ್ಷಾಂತರ ಕಾರ್ಯಕರ್ತರಿಗಾಗಿ ನಾನು ಇನ್ನೂ ರಾಜಕೀಯದಲ್ಲಿದ್ದೇನೆ. ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ನನಗೆ ದೇವೇಗೌಡರ ರೀತಿ ಇಳಿ ವಯಸ್ಸಿನಲ್ಲೂ ರಾಜಕೀಯ ಮಾಡುವ ಹಂಗಿಲ್ಲ ಎಂದು ನೇರವಾಗಿ ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಅನರ್ಹಗೊಂಡಿರುವ ಶಾಸಕ ನಾರಾಯಣಗೌಡ ವಿರುದ್ಧ ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ಆತ ನನ್ನ ತಂಗಿ ಕುಟುಂಬವನ್ನು ಬೀದಿಗೆ ತಂದ ಕ್ರಿಮಿನಲ್. ಅವನಂತಹ ಕ್ರಿಮಿನಲ್ ಜಿಲ್ಲೆಯಲ್ಲಿ ಮತ್ತೂಬ್ಬ ಸಿಗೋಲ್ಲ ಎಂದು ಎಂದು ವಾಗ್ಧಾಳಿ ನಡೆಸಿದರು.

ಕಣ್ಣೀರಿಟ್ಟ ಎಚ್‌ಡಿಕೆ: ಉಪ ಚುನಾವಣೆ ಸಂಬಂಧ ಪಟ್ಟಣದಲ್ಲಿ ಏರ್ಪಡಿಸಿದ್ದ ಮುಖಂಡರು-ಕಾರ್ಯಕರ್ತರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುವ ವೇಳೆ ಭಾವುಕರಾಗಿ ಕಣ್ಣೀರಿಟ್ಟರು.

ಲೋಕಸಭಾ ಚುನಾವಣೆಗೆ ನಿಲ್ಲಬೇಡ ಎಂದು ನನ್ನ ಮಗ (ನಿಖೀಲ್)ನಿಗೆ ಹೇಳಿದ್ದೆ. ಜಿಲ್ಲೆಯ ಶಾಸಕರೆಲ್ಲಾ ಒತ್ತಾಯ ಮಾಡಿ ನಿಲ್ಲಿಸಿದರು. ಮಾಧ್ಯಮಗಳು ನನ್ನನ್ನು ಹಾಗೂ ನನ್ನ ಮಗನನ್ನು ಖಳನಾಯಕರಂತೆ ಬಿಂಬಿಸಿದವು ಎಂದು ಹೇಳಿದರು.

ಮುಂದಿನ ವಾರ ಸಂಪುಟ ವಿಸ್ತರಣೆ
ಮುಂದಿನ ವಾರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಸೋಮವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಂಭಾವ್ಯರ ಪಟ್ಟಿ ಹೊತ್ತು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜಾತಿ ಲೆಕ್ಕಾಚಾರ, ಪ್ರಾದೇಶಿಕ ಪ್ರಾಮುಖ್ಯತೆ, ಯುವ ಮುಖಂಡತ್ವ, ಸಂಘ ಪರಿವಾರದ ಹಿನ್ನೆಲೆ ಸೇರಿ ಹಲವಾರು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಂಭಾವ್ಯರ ಪಟ್ಟಿ ಸಿದ್ಧ ಮಾಡಲಾಗಿದೆ. ಈ ಪಟ್ಟಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next