Advertisement

ಮಾಲಿನ್ಯವೆಂಬ ಭಸ್ಮಾಸುರನ ಹುಟ್ಟು ಸಿರಿವಂತ ದೇಶಗಳಲ್ಲೇ ಅಲ್ಲವೆ?

02:56 PM Jun 03, 2017 | |

ಮಾಲಿನ್ಯವೆಂಬ ಭಸ್ಮಾಸುರ ಹುಟ್ಟಿದ್ದು ಶ್ರೀಮಂತ ರಾಷ್ಟ್ರಗಳಲ್ಲೇ. ಸೃಷ್ಟಿಸಿದ್ದೂ ಅಭಿವೃದ್ಧಿಗೊಂಡ ರಾಷ್ಟ್ರಗಳೇ. ಇವತ್ತು ಆ ರಾಕ್ಷಸ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕುಣಿಯುತ್ತಿರುವಂತೆ ಕಾಣುತ್ತಿದ್ದರೂ ಸೃಷ್ಟಿಸಿದವರನ್ನು ಬಿಡಲಾರ. ಜಾಗತಿಕ ತಾಪಮಾನ ಕುರಿತಾದ ಅಮೆರಿಕದ ನಡೆಯನ್ನೂ ಅದೇ ದೃಷ್ಟಿಯಲ್ಲಿ ನೋಡುವ ಹೊತ್ತಿದು.

Advertisement

ಸುಸ್ಥಿರ ನಗರೀಕರಣದ ಕುರಿತು ಚರ್ಚೆಯಾಗುತ್ತಿರುವ ಸಂದರ್ಭ ದಲ್ಲಿ ಅಮೆರಿಕ ಸದ್ದು ಮಾಡಿದೆ. ಅಮೆರಿಕದ ಅಧ್ಯಕ್ಷ 
ಡೊನಾಲ್ಡ್‌ ಟ್ರಂಪ್‌ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಂಬಂಧಿ ಸಿದ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹೊರಬಂದಿರುವು ದಾಗಿ ಘೋಷಿಸಿದ್ದಾರೆ. 

2015ರ ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಜಾಗತಿಕ ತಾಪಮಾನ ಕುರಿತ ಸಮ್ಮೇಳನದಲ್ಲಿ ಸುಸ್ಥಿರ ನಗರೀಕ ರಣಕ್ಕೆ ಕುರಿತಾದ ಒಪ್ಪಂದಕ್ಕೆ ಚಾಲನೆ ನೀಡಲಾಗಿತ್ತು. ಇದರ ಮುಖ್ಯ ಉದ್ದೇಶವೆಂದರೆ, ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವುದು. ಹಲವು ಪರಿಸರ ಪೂರಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜಾಗತಿಕ ತಾಪಮಾನ ಏರಿಕೆಯ ಪ್ರಮಾಣ 2 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾಗದಂತೆ ತಡೆಯುವುದೇ ಒಂದಂಶದ ಕಾರ್ಯಕ್ರಮ. ಅದಕ್ಕೆ 195 ರಾಷ್ಟ್ರಗಳು ಸಹಿ ಮಾಡಿದ್ದವು. ಹಲವು ರಾಷ್ಟ್ರಗಳಲ್ಲಿ ಈ ಸಂಬಂಧ ಯೋಜನೆಗಳು ಕಾರ್ಯಗತದ ಹಂತದಲ್ಲಿತ್ತು.  ಇಂಥ ಹೊತ್ತಿನಲ್ಲಿ ಈಗ ಅಮೆರಿಕ ಹಿಂದಕ್ಕೆ ಸರಿದಿದೆ. ಟ್ರಂಪ್‌  “ಅಮೆರಿಕಕ್ಕೆ ಇಂಥದ್ದರಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯಿಲ್ಲ. ಹಿಂದಿನ ಅಧ್ಯಕ್ಷ ಒಬಾಮರ ಈ ನಿರ್ಧಾರಕ್ಕೆ ಅಮೆರಿಕ ಹೆಚ್ಚು ಬೆಲೆ ತೆರಬೇಕಾದೀತು’ ಎಂದೂ ಹೇಳಿದ್ದಾರೆ. ವಿಶ್ವಾದ್ಯಂತ ಹಲವು ರಾಷ್ಟ್ರಗಳ ನಾಯಕರು ಅಮೆರಿಕದ ನಿರ್ಧಾರವನ್ನು ಕಟುವಾಗಿ ಖಂಡಿಸಿದ್ದಾರೆ. ಇವೆಲ್ಲವೂ ಸದ್ಯಕ್ಕೆ ಆಗಿರುವ ಬೆಳವಣಿಗೆಗಳು. 

ಅಮೆರಿಕದ ಪಾತ್ರವೇನು?: ಪ್ರಸ್ತುತ ನಮ್ಮ ನಗರಗಳು ಉಸಿರುಗಟ್ಟಿ ಸಾಯಬಾರದೆಂದರೆ ಜಾಗತಿಕ ತಾಪಮಾನದಂಥ ಆಲೋಚನೆ ಗಳಿಗೆ ಕಿವಿಗೊಡಲೇಬೇಕಾದ ಸ್ಥಿತಿ ಇದೆ. ಇದು ನಾವು ಇನ್ಯಾರಧ್ದೋ ಮಾತು ಕೇಳಿ ಆಗಬೇಕೆಂದೇನಲ್ಲ. ನಮ್ಮ ಊರಿನಲ್ಲೇ ಆಗುತ್ತಿರುವ ಹವಾಮಾನ ವೈಪರೀತ್ಯಗಳನ್ನು ಗಮನಿಸುತ್ತಿದ್ದೇವೆ. ನಮ್ಮ ನಗರಗಳ ಆರೋಗ್ಯವನ್ನು ಗಮನಿಸುತ್ತಿದ್ದೇವೆ. ದಿಲ್ಲಿಯಂಥ ದೇಶದ ರಾಜ ಧಾನಿ  ಉಸಿರಾಟದ ಸಮಸ್ಯೆಯಲ್ಲಿ ಒದ್ದಾಡುತ್ತಿರುವುದನ್ನು ಪ್ರತಿ ವರ್ಷವೂ ಕಾಣುತ್ತಿದ್ದೇವೆ. ಅದೊಂದೇ ನಗರವಲ್ಲ; ಬೆಂಗಳೂರಿ ನಿಂದ ಹಿಡಿದು ಪ್ರತಿ ನಗರಗಳೂ ಇಂಥ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲೇ ಮುಂದಿನ 20 ವರ್ಷಗಳಲ್ಲಿ ನಮ್ಮ ನಗರಗಳು ಹೇಗೆ ಪುನರೂÅಪ ಪಡೆಯಬೇಕು? ನಿರ್ಮಿಸುವ ಹೊಸ ನಗರಗಳು ಯಾವುದರ ಬುನಾದಿಯಲ್ಲಿ ಮೇಲೇಳಬೇಕು? -ಇತ್ಯಾದಿ ಸಂಗತಿಗಳನ್ನೇ ವಿಶ್ವಸಂಸ್ಥೆಯ ಆ ಸಮ್ಮೇಳನದಲ್ಲಿ ಚರ್ಚಿ ಸಲಾಗಿತ್ತು. ಹಸಿರು ಅನಿಲದ ಪ್ರಮಾಣವನ್ನು ಇಳಿಸುವ ಅಗತ್ಯವನ್ನು ಪ್ರಮುಖವಾಗಿ ಪ್ರತಿಪಾದಿಸಲಾಗಿತ್ತು.  

ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇರುವಂಥದ್ದು. ತಾನೂ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಉಪಕ್ರಮಗಳನ್ನು ಜಾರಿಗೊಳಿಸಲು ಅಮೆರಿಕ ಪ್ಯಾರಿಸ್‌ ಒಪ್ಪಂದದಂತೆ ಹಸಿರು ನಿಧಿಗೆ ಸುಮಾರು 2 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳನ್ನು ಬಿಡುಗಡೆ ಮಾಡಬೇಕಿತ್ತು. ಈಗ ಡೊನಾಲ್ಡ್‌ ಟ್ರಂಪ್‌ ಈ ಹೊಣೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಈಗಾಗಲೇ ಹಣವನ್ನು ಬಿಡುಗಡೆ ಮಾಡುವುದು ಕಷ್ಟವಾದೀತು ಎಂದೂ ಹೇಳಿದ್ದಾರೆ. ಇವೆಲ್ಲವೂ ಪ್ಯಾರಿಸ್‌ ಒಪ್ಪಂದದಡಿ ಜಾರಿಗೊಳ್ಳುತ್ತಿರುವ ಉಪಕ್ರಮಗಳ ಅನುಷ್ಠಾನ ವೇಗಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ. 
ಅಮೆರಿಕ ಯಾವಾಗಲೂ ಸ್ವಾರ್ಥಪರವಾದುದು ಎಂಬ ಟೀಕೆ ಸದಾ ಕೇಳಿಬರುವಂಥದ್ದು. ಈಗಲೂ ಅದು ಅದೇ ಹಳಿಯ ಮೇಲೆ ನಿಂತಿದೆ. ಇಡೀ ಪ್ಯಾರಿಸ್‌ ಒಪ್ಪಂದ ಇರುವುದೇ ಸದಾಶಯದ ಮೇಲೆ. ಅದಿಲ್ಲದಿದ್ದರೆ ಆ ಒಪ್ಪಂದಕ್ಕೆ ಯಾವುದೇ ಅರ್ಥವಿಲ್ಲ. ಇದರಲ್ಲಿ ಕಾನೂನಾತ್ಮಕವಾದ ಷರತ್ತುಗಳಾಗಲೀ, ಕಟ್ಟುಪಾಡುಗಳಾಗಲೀ ಇಲ್ಲ. ಆದರೆ, ಅವು ಇಡೀ ಜಗತ್ತಿನ ಯೋಗಕ್ಷೇಮದ ಕಾಯುವ ಪಾಲುದಾರರಾಗಿ ಕೈಗೊಳ್ಳಬೇಕಾದ ನಿರ್ಧಾರಗಳೇ ಹೊರತು ಮತ್ತೇನೂ ಅಲ್ಲ. ಅದರಲ್ಲೂ ಅತಿ ಹೆಚ್ಚು ಮಾಲಿನ್ಯಕ್ಕೆ ಕಾರಣವಾಗಿರುವ ರಾಷ್ಟ್ರವೇ ಹೀಗೆ ಹೊರಗೆ ಕೈಕಟ್ಟಿ ನಿಂತು ಬಿಟ್ಟರೆ ಹೇಗೆ ಎಂಬುದು ಈಗ ಚರ್ಚೆಗೆ ಈಡಾಗಿರುವ ಸಂಗತಿ.  

Advertisement

ಅಮೆರಿಕದ ಹವಾಮಾನ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಕೆವಿನ್‌ ಟ್ರೆನ್‌ ಬರ್ತ್‌ ಎಂಬವರು ಅಮೆರಿಕದ ಈ ವಿದ್ಯಮಾನದ ಪರಿಣಾಮವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. “ಅಭಿವೃದ್ಧಿಶೀಲ ರಾಷ್ಟ್ರಗಳ ಪುನರುತ್ಥಾನಕ್ಕೆ, ಜಾಗತಿಕ ತಾಪಮಾನ ನಿಯಂತ್ರಣ ಉಪಕ್ರಮಗಳಿಗೆ ಪೂರಕವಾಗಿ ಕ್ರಿಯಾಶೀಲವಾಗಲು ನೆರವಾಗುವ ಹಸಿರು ನಿಧಿಗೆ ಶ್ರೀಮಂತ ರಾಷ್ಟ್ರಗಳು ದೇಣಿಗೆ ಕೊಡುವ ಸಂಗತಿಯೂ ಸದಾಶಯದ ಕ್ರಮವೇ. ಹೆಚ್ಚು ಹಸಿರು ಅನಿಲಕ್ಕೆ ಕಾರಣವಾಗುತ್ತಿರುವ ಅಮರಿಕ ಒಪ್ಪಂದಕ್ಕೆ ಬದ್ಧವಾಗಿರುವುದು ಅದರ ನೈತಿಕ ಹೊಣೆಗಾರಿಕೆಯೂ ಹೌದು’ ಎಂದಿದ್ದಾರೆ.

ಉದ್ಯಮದ ಹಿತವೂ ಹೌದು: ಇನ್ನೊಂದು ವಿಚಿತ್ರವೆಂದರೆ, ಡೊನಾಲ್ಡ್‌ ಟ್ರಂಪ್‌ರ ನಿರ್ಧಾರ ಬರೀ ಒಪ್ಪಂದವನ್ನು ಹಾಳುಮಾಡುತ್ತದೆಯೇ ಎಂದರೆ ಖಂಡಿತ ಇಲ್ಲ. ಅಮೆರಿಕದಲ್ಲಿನ ಉದ್ಯಮಕ್ಕೂ ದೊಡ್ಡ ಹೊಡೆತ ಬೀಳಲಿದೆ. ಇದೊಂದು ಬಗೆಯಲ್ಲಿ ಕೊಂದ ಪಾಪ ತಿಂದು ಪರಿಹಾರ ಮಾಡಿಕೊಳ್ಳುವಂತೆಯೇ. ಹೆಚ್ಚು ಮಾಲಿನ್ಯ ಉಂಟು ಮಾಡಿ ಸಮಸ್ಯೆ ಸೃಷ್ಟಿಸಿದವರೇ ದೇಣಿಗೆ ಕೊಟ್ಟು ಪೋಷಿಸುವ ಕ್ರಮ ಹೆಚ್ಚಾ ಕಡಿಮೆ ಆ ಮಾತಿಗೆ ಹತ್ತಿರವೇ. ಅದರ ಮುಂದುವರಿದ ಭಾಗದಂತೆಯೇ ಇದೂ ಸಹ.
 
ಅಮೆರಿಕ ಅಧ್ಯಕ್ಷರ ನಿರ್ಧಾರವನ್ನು ಅಲ್ಲಿನ ಹಲವು ಕಂಪೆನಿಗಳೇ ಹೀಗಳೆದಿವೆ. ಅದೊಂದು ತಪ್ಪು ನಿರ್ಧಾರ ಎಂದು ಬಣ್ಣಿಸಿವೆ. ಯಾಕೆಂದರೆ ಈ ನಿರ್ಧಾರ ಈಗಾಗಲೇ ಹೇಳಿದಂತೆ ಅಮೆರಿಕದ ಉದ್ಯಮದ ಆಸಕ್ತಿಯನ್ನೂ ಬಲಿಗೊಡಲಿದೆ. ದೊಡ್ಡ ಕಂಪೆನಿಗಳಾದ ಜನರಲ್‌ ಎಲೆಕ್ಟ್ರಿಕ್‌ ಮತ್ತು 3ಎಂನಂಥ ಕಂಪೆನಿಗಳೂ ಒಪ್ಪಂದಕ್ಕೆ ಬದ್ಧವಾಗುವಂತೆ ಆಗ್ರಹಿಸುತ್ತಿವೆ. ಜತೆಗೆ ತೈಲ ಕಂಪೆನಿಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಏಕೆಂದರೆ ಅಮೆರಿಕದ ಕಂಪೆನಿಗಳೇ ಇಂದು ಪರಿಸರಸ್ನೇಹಿ ಇಂಧನದ ಕುರಿತು ಪರ್ಯಾಯ ಕ್ರಮಗಳನ್ನು ಶೋಧಿಸುತ್ತಾ ಉದ್ಯಮ ನಡೆಸುತ್ತಿವೆ. ಒಂದುವೇಳೆ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದರೆ, ಆ ಉದ್ಯಮಗಳು ಇಕ್ಕಟ್ಟಿಗೆ ಸಿಲುಕಲಿವೆ. 

ನಮ್ಮಲ್ಲಿದ್ದಂತೆಯೇ ಅಲ್ಲಿಯೂ?: ನಮ್ಮ ರಾಜಕೀಯ ಪಕ್ಷಗಳು ಇಂಥ ಕೆಲವು ಕ್ರಮಗಳನ್ನು ಆಗಾಗ್ಗೆ ಕೈಗೊಳ್ಳುತ್ತಿರುತ್ತವೆ. ಹಿಂದಿನ ಸರಕಾರ ಕೈಗೊಂಡ ಯೋಜನೆಗಳನ್ನು ಮೂಲೆಗೆಸೆದು, ಹೊಸ ಯೋಜನೆಗಳನ್ನು ಘೋಷಿಸುವುದು ನೋಡಿದ್ದೇವೆ. ಅದು ಸ್ಥಳೀಯ ಸಂಸ್ಥೆಗಳ ಆಡಳಿತದವರೆಗೂ ಆ ಚಟವಿದೆ. ಹಲವು ಜನಪ್ರತಿನಿಧಿಗಳೂ, ಹಿಂದಿನವರಿಗೆ ಕೀರ್ತಿ ಬರುತ್ತದೆಂದು ಹಳೆಯ ಯೋಜನೆಗಳನ್ನು ಬೆಂಬಲಿಸದಿರುವ ಪ್ರಸಂಗಗಳಿಗೆ ಬರವಿದೆಯೇ? ಟ್ರಂಪ್‌ರ ನಡವಳಿಕೆಯೂ ಅಂಥದ್ದೇ ಒಂದು ಪುನರಾವರ್ತನೆ ಎನ್ನಿಸುತ್ತಿದೆ. ಟ್ರಂಪ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಒಬಾಮಾರ ಆರೋಗ್ಯ ಯೋಜನೆಯನ್ನು ಹೀಗಳೆದು ಮೂಲೆಗೆಸೆದರು. ಬಳಿಕ ಹಲವು ನೀತಿಗಳನ್ನು ತಿರುಗು ಮುರುಗು ಮಾಡಿದರು. ಈಗ ಪ್ಯಾರಿಸ್‌ ಒಪ್ಪಂದದ ಕಥೆ. ಇಲ್ಲಿಯೂ ಒಬಾಮರು ಸಹಿ ಮಾಡಿದ್ದಾರೆಂಬುದಕ್ಕೇ ಟ್ರಂಪ್‌ ಪ್ಯಾರಿಸ್‌ ಒಪ್ಪಂದಕ್ಕೆ ಕೈ ಮುಗಿಯುತ್ತಿದ್ದಾರೆ ಎಂದೂ ಹೇಳಬಹುದು. ಅದನ್ನು ಹೊರತುಪಡಿಸಿದಂತೆ ಯಾವುದೇ ಮೌಲ್ಯಯುತ ಕಾರಣಗಳೇ ಕಾಣುತ್ತಿಲ್ಲ. ಅಲ್ಲಿಗೆ ನಮ್ಮಲ್ಲಿರುವ ಪ್ರವೃತ್ತಿಯೇ ಅಲ್ಲಿಗೂ ಬಂತೇ ಎಂಬುದೇ ಅಚ್ಚರಿಯ ಸಂಗತಿ.

ಸುಸ್ಥಿರ ನಗರೀಕರಣ: ಈ ಟ್ರಂಪ್‌ ನಿರ್ಧಾರ, ಜಾಗತಿಕ ತಾಪಮಾನ, ಪ್ಯಾರಿಸ್‌ ಒಪ್ಪಂದ ಇತ್ಯಾದಿಗಳ ಮಧ್ಯೆ ನಾವು ಜಪಿಸಬೇಕಾಗಿರುವುದು ಸುಸ್ಥಿರ ನಗರೀಕರಣದ ಬಗ್ಗೆಯೇ. ಇಂದು ಅಮೆರಿಕ ಹೊರಗೆ ಹೋದರೂ, ಶಾಶ್ವತವಾಗಿ ಹೊರಗಿರುತ್ತದೆಂದು ಹೇಳಲಾಗದು. ಅಷ್ಟೇ ಅಲ್ಲ. ಅದು ಸಾಧ್ಯವೇ ಇಲ್ಲ. ಮಾಲಿನ್ಯವೆಂಬ ಭಸ್ಮಾಸುರನನ್ನು ಸೃಷ್ಟಿಸಿದ್ದು ಶ್ರೀಮಂತ ರಾಷ್ಟ್ರಗಳೇ. ಆ ರಾಕ್ಷಸ ಈಗ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕುಣಿಯುತ್ತಾ ಇದ್ದಂತೆ ಕಂಡುಬಂದರೂ ಸೃಷ್ಟಿಸಿದವರನ್ನೂ ಬಿಡಲಾರ. ಅದೇ ಭೀತಿಯಲ್ಲಿ ರಾಕ್ಷಸನನ್ನು ಕೊಲ್ಲಲು ಅಮೆರಿಕ ಮುಂದೆ ಬರಲೇಬೇಕು. 

ಮುಂದಿನ ಚುನಾವಣೆಯಲ್ಲಿ ಟ್ರಂಪ್‌ರ ಈಗಿನ ನಿರ್ಧಾರವೂ ಮುಳುವಾದರೆ ಅಚ್ಚರಿಯಿಲ್ಲ. ಆದ ಕಾರಣ, ಭಾರತವೂ ಸೇರಿದಂತೆ ನಾವೀಗ ನಡೆಯಬೇಕಾದದ್ದು ಸದ್ಯಕ್ಕೆ ಒಪ್ಪಿಕೊಂಡ ದಾರಿಯಲ್ಲೇ ಹೊರತು ಅಮೆರಿಕದ ಹಾದಿಯಲ್ಲಲ್ಲ. ಈಗ ಭಾರತದ ನಡೆಯೂ ಕುತೂಹಲ ಮೂಡಿಸಿದೆ. ಕಾದು ನೋಡಬೇಕು.

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next