ಒಂದು ಮೊಬೈಲ್ ಫೋನ್ ಕೊಳ್ಳುವಾಗ ಒಬ್ಬೊಬ್ಬರು ಒಂದೊಂದು ಅಂಶಕ್ಕೆ ಆದ್ಯತೆ ನೀಡುತ್ತಾರೆ. ಕೆಲವರಿಗೆ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಬೇಕು. ಕೆಲವರಿಗೆ ಗೇಮ್ ಆಡಲು ಪೊ›ಸೆಸರ್ ಸಶಕ್ತವಾಗಿರಬೇಕು. ಇನ್ನು ಕೆಲವರಿಗೆ ಮೊಬೈಲ್‌ನ ಪರದೆ ದೊಡ್ಡದಿರಬೇಕು. ಮತ್ತೆ ಕೆಲವರಿಗೆ ಮೊಬೈಲ್ ಹೇಗಾದರೂ ಇರಲಿ,
ಬೆಲೆ ಎಷ್ಟಾದರೂ ಇರಲಿ ಬ್ರಾಂಡ್ ಮುಖ್ಯ! ಹಲವರು ಗಮನಿಸದ ಅಂಶವೊಂದಿದೆ. ಬಹಳಷ್ಟು ಜನರಿಗೆ ಅದರಲ್ಲೂ ಮೊಬೈಲ್‌ನಲ್ಲಿ ಇಯರ್‌ಫೋನ್ ಮೂಲಕ ಹಾಡು, ಸಂಗೀತ ಆಲಿಸುವವರಿಗೆ ಅದರ ಲ್ಲಿರುವ ಆಡಿಯೋ ಗುಣಮಟ್ಟ ಚೆನ್ನಾಗಿರಬೇಕು. ಹೀಗೆ ಆಡಿಯೋ ಗುಣಮಟ್ಟ ಚೆನ್ನಾಗಿರಬೇಕಾ ದರೆ, ಆ ಮೊಬೈಲ್‌ನಲ್ಲಿ ಉತ್ತಮ ಗುಣಮಟ್ಟದ ಆಡಿಯೋಎಂಜಿನ್ (ಚಿಪ್) ಇರಬೇಕು. ಮೊಬೈಲ್ ಫೋನ್‌ಗಳಲ್ಲಿ ಉತ್ತಮ ಆಡಿಯೋ ಎಂಜಿನ್ ಅಳವಡಿಸುವುದಕ್ಕೆ ಕೆಲವು ಕಂಪನಿಗಳು ಆದ್ಯತೆ ನೀಡುತ್ತವೆ. ಮತ್ತೆ ಅದಕ್ಕೆ ಪೂರಕವಾಗಿ ಉತ್ತಮ ಸಾಫ್ಟ್ವೇರ್‌ಗಳನ್ನು ಅಳವಡಿಸಿ ಗ್ರಾಹಕನಿಗೆ ಉತ್ತಮ ಸಂಗೀತ ಆಲಿಸುವ ಅವಕಾಶ ನೀಡುತ್ತವೆ. ನೀವು ಎಷ್ಟೇ ಬೆಲೆಯ ಇಯರ್ ಫೋನ್ ಕೊಂಡಿದ್ದರೂ ಮೊಬೈಲ್‌ಫೋನಿನಲ್ಲಿ ಅದಕ್ಕೇ ಮೀಸಲಾದ ಉತ್ತಮ ಆಡಿಯೋ ಚಿಪ್ ಇಲ್ಲದಿದ್ದರೆ ಏನೂ ಪ್ರಯೋಜನವಿಲ್ಲ. ಡಿರಾಕ್ ಎಂಬ ಅಮೆರಿಕ ಕಂಪನಿಯ ಆಡಿಯೋ ಚಿಪ್ ಗಳನ್ನು ಹಲವು ಮೊಬೈಲ್‌ಗಳಲ್ಲಿ ಬಳಸಲಾಗುತ್ತದೆ. ನಿಜಕ್ಕೂ ಇದರ ಆಡಿಯೋ ಅನುಭವ ಚೆನ್ನಾಗಿರುತ್ತದೆ. ಸೈಬರ್ ಮೀಡಿಯಾ ರೀಸರ್ಚ್ (ಸಿಎಂಆರ್) ಎಂಬ ಸಂಸ್ಥೆ ನಡೆಸಿದ ಹೊಸ ಅಧ್ಯಯನದ ಪ್ರಕಾರ, ಭಾರ ತೀಯ ಗ್ರಾಹಕರು ಸ್ಮಾರ್ಟ್‌ಫೋನ್ ಕೊಳ್ಳುವಾಗ ಕ್ಯಾಮೆರಾ ಮತ್ತು ಬ್ಯಾಟರಿಗಿಂತ ಮುಖ್ಯವಾಗಿ ಆಡಿಯೊ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಸ್ಮಾರ್ಟ್ ಫೋನ್ ಆಯ್ಕೆ ಮಾಡಿಕೊಳ್ಳುವಾಗ ಪ್ರತಿ ನಾಲ್ವರು ಬಳಕೆದಾರರಲ್ಲಿ ಒಬ್ಬರು ಸ್ಮಾರ್ಟ್ ಫೋನ್ ಆಯ್ಕೆಯ ವಿಷಯಕ್ಕೆ ಬಂದಾಗ ಎಲ್ಲ ಮಾನದಂಡಗಳಲ್ಲೂ ಆಡಿಯೊ ಗುಣಮಟ್ಟ ಮುಖ್ಯವಾಗಿದೆ ಎಂದಿದ್ದಾರೆ. ಶೇ. 66 ಜನರಿಗೆ ಆಡಿಯೋ ಮುಖ್ಯ ಸಿಎಂಆರ್ ಸಂಸ್ಥೆ ಭಾರತೀಯರಿಗಾಗಿ ನಡೆಸಿದ ಸಮೀಕ್ಷೆಯಲ್ಲಿ ಶೇ.66 ಜನರು ಆಡಿಯೊ ಗುಣಮಟ್ಟಕ್ಕೆ, ಶೇ.61ರಷ್ಟು ಜನರು ಬ್ಯಾಟರಿ ಬಾಳಿಕೆಗೆ, ಶೇ.60 ಜನರು ಕ್ಯಾಮೆರಾಕ್ಕೆ ಆದ್ಯತೆ ನೀಡಿದ್ದಾರೆ.
ಆಡಿಯೋ ಮತ್ತು ವಿಡಿಯೋ ಆಲಿಕೆ ಮತ್ತು ವೀಕ್ಷಣೆ ಮಾಡುವವರ ಪೈಕಿ, ಶೇ.94 ಜನರು ಕೇವಲ ಸಂಗೀತ ಆಲಿಸಿದರೆ, ಶೇ.88 ಜನರು ಸಿನಿಮಾ ನೋಡುವುದಕ್ಕೆ, ಶೇ.79 ಜನರು ಲೈವ್ ಟಿವಿಗಳನ್ನು ನೋಡುವುದಕ್ಕೆ, ಶೇ.75ರಷ್ಟು ಜನರು ಓಟಿಟಿಗಳ ವೀಕ್ಷಣೆಗೆ, ಶೇ.73 ಜನರು ವಿಡಿಯೋ ಕಾಲ್ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ. ಇನ್ನೊಂದು ಆಸಕ್ತಿದಾಯಕ ಅಂಶವೆಂದರೆ, ಏನೇ ಟ್ರೂ ವಯರ್‌ಲೆಸ್ ಇಯರ್‌ಬಡ್‌ಗಳು ಬಂದರೂ, ಭಾರತೀಯರು ವೈರ್ ಇರುವ ಇಯರ್‌ಫೋನ್‌ಗಳಿಗೆ ಆದ್ಯತೆ ನೀಡಿದ್ದಾರೆ. ಶೇ.78 ಗ್ರಾಹಕರು ವೈರ್ಡ್ ಇಯರ್ ಪ್ಲಗ್‌ಗಳಿಗೆ ಆದ್ಯತೆ ನೀಡಿದ್ದಾರೆ. ಹಾಗಾಗಿಯೇ ಅನೇಕ ಕಂಪನಿಗಳು ಈಗಲೂ 3.5 ಎಂ.ಎಂ. ಆಡಿಯೋ ಜಾಕ್ ಆಯ್ಕೆ ಇರಿಸಿಕೊಂಡಿವೆ!
ಹಲವು ಕಂಪನಿಗಳು ತಮ್ಮ ಫೋನ್‌ಗಳಲ್ಲಿ ಆಡಿಯೋಗೆ ಅಷ್ಟೊಂದು ಪ್ರಾಮುಖ್ಯತೆ ನೀಡದ ಕಾರಣ, ಪ್ರತಿ ಏಳು ಮಂದಿ ಬಳಕೆದಾರರಲ್ಲಿ ಮೂವರು ಸ್ಮಾರ್ಟ್‌ಫೋನ್ ಆಡಿಯೊದಲ್ಲಿ ಕೆಲ ಸಮಸ್ಯೆಗಳನ್ನು ನಿಯಮಿತವಾಗಿ ಎದುರಿಸುತ್ತಿದ್ದಾರೆ. ತಮ್ಮ ಫೋನಿನಲ್ಲಿ ಆಡಿಯೋ ಅಷ್ಟೊಂದು ಚೆನ್ನಾಗಿ ಬರುವುದಿಲ್ಲ ಎಂದು ಶೇ.33ರಷ್ಟು ಜನರು ಹೇಳಿದ್ದಾರೆ! ಫೋನಿನ ಆಡಿಯೋ ತುಂಬಾ ಜೋರು. ಆದರೆ ಅದರಲ್ಲಿ ಗುಣಮಟ್ಟವಿಲ್ಲ ಎಂದು ಶೇ.30ರಷ್ಟು ಜನರು ಹೇಳಿದರೆ, ಕರ್ಕಶವಾಗಿ ಬರುತ್ತದೆ ಎಂದು ಶೇ.24 ಜನರು ತಿಳಿಸಿದ್ದಾರೆ! ಮೊಬೈಲ್‌ನಲ್ಲಿ ಸಿನಿಮಾ ವೀಕ್ಷಿಸುವಾಗ ಡೈಲಾಗ್ ಗಳೇ ಕೇಳಿಸುವುದಿಲ್ಲ ಎಂದು ಶೇ.15 ಜನರು ತಿಳಿಸಿದರೆ, ಶೇ.12 ಜನರು ಒಟ್ಟಾರೆ ಆಡಿಯೋ ಸರಿಯಾಗಿ ಕೇಳಿಸುವುದಿಲ್ಲ ಎಂದಿದ್ದಾರೆ!
– ಕೆ.ಎಸ್. ಬನಶಂಕರ ಆರಾಧ್ಯ