Advertisement

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

06:11 PM Nov 17, 2024 | Team Udayavani |

ಸ್ಟ್ರೀಟ್ ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ನಮ್ಮ ಮನೆಯ ಸುತ್ತಲಿರುವ ಔಷಧೀಯ ಗುಣಗಳಿರುವ ಸೊಪ್ಪುಗಳನ್ನು ಬಳಸಿಕೊಂಡು ಖಾದ್ಯಗಳನ್ನು ತಯಾರಿಸುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ, ಹಾಗಾದರೆ ಯಾವುದು ಆ ಔಷಧೀಯ ಗುಣವಿರುವ ಎಲೆ ಅಂತೀರಾ ಅದೇ ದೊಡ್ಡ ಪತ್ರೆ…

Advertisement

ದೊಡ್ಡ ಪತ್ರೆಯಲ್ಲಿ ವಿಟಮಿನ್‌ ಸಿ, ಫೈಬರ್‌ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡ ಪತ್ರೆ ಎಲೆ ಉತ್ತಮ ಮನೆ ಮದ್ದಾಗಿದ್ದು, ತಲೆನೋವು, ಶೀತದಂತ ರೋಗಗಳಿಗೆ ಸೂಕ್ತವಾದ ಮದ್ದು ಅಂದರೆ ದೊಡ್ಡಪತ್ರೆಯ ಕಷಾಯ.

ಈ ಎಲೆಯನ್ನು ಆಹಾರ ರೂಪದಲ್ಲಿ ಅಂದರೆ ರಸಂ ,ಚಟ್ನಿ, ಪಕೋಡ, ತಂಬುಳಿ ಹೀಗೆ ಹಲವು ಬಗೆಯಲ್ಲಿ ಉಪಯೋಗಿಸಬಹುದು, ಹೀಗೆ ಮಾಡಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಸುಧಾರಿಸಲು ಇದು ಸಹಕಾರಿಯಾಗುತ್ತದೆ. ಆದ್ದರಿಂದ ನಮ್ಮ ಮನೆಯ ಸುತ್ತ ಮುತ್ತ ದೊಡ್ಡ ಪತ್ರೆ ಎಲೆ ಇದ್ದರೆ ಅದನ್ನು ಜೋಪಾನ ಮಾಡಿ ಉಳಿಸಿದರೆ ಉತ್ತಮ.

ಹಾಗೆಯೇ ನಾವಿಂದು ದೊಡ್ಡಪತ್ರೆ ಎಲೆದಿಂದ ತಯಾರಿಸಲಾಗುವ 2 ಖಾದ್ಯಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ ನೀವೂ ಮನೆಯಲ್ಲಿ ಇದನ್ನು ಟ್ರೈ ಮಾಡಬಹುದು, ಬನ್ನಿ ಹಾಗಾದರೆ ದೊಡ್ಡಪತ್ರೆ ಎಲೆಯಿಂದ ತಯಾರಿಸಬಹುದಾದ ಚಟ್ನಿ ಮತ್ತು ತಂಬುಳಿ ಹೇಗೆ ತಯಾರಿಸುವುದೆಂದು ತಿಳಿದುಕೊಂಡು ಬರೋಣ…

Advertisement

ದೊಡ್ಡಪತ್ರೆ ಎಲೆ ಚಟ್ನಿ
ಬೇಕಾಗುವ ಸಾಮಗ್ರಿಗಳು
ದೊಡ್ಡಪತ್ರೆ ಎಲೆ-1ಕಪ್‌,ತೆಂಗಿನ ತುರಿ-ಅರ್ಧ ಕಪ್‌, ಒಣಮೆಣಸು-3, ಹುಣಸೇ ಹುಳಿ-ಸ್ವಲ್ಪ, ಜೀರಿಗೆ-1ಚಮಚ, ಕಡ್ಲೆಬೇಳೆ-2ಚಮಚ,ಬೆಲ್ಲ-ನಿಂಬೆ ಗಾತ್ರದಷ್ಟು, ಉದ್ದಿನಬೇಳೆ-1ಚಮಚ, ಬೆಳ್ಳುಳ್ಳಿ-6ಎಸಳು, ರುಚಿಗೆ ತಕ್ಕಷ್ಟು-ಉಪ್ಪು.
ಒಗ್ಗರಣೆಗೆ: ಸಾಸಿವೆ,ಕಡ್ಲೆಬೇಳೆ,ಕರಿಬೇವಿನ ಎಲೆ,ಒಣಮೆಣಸು-1,ಇಂಗು.

ತಯಾರಿಸುವ ವಿಧಾನ
ಮೊದಲಿಗೆ ದೊಡ್ಡಪತ್ರೆ ಎಲೆಯನ್ನು ಚೆನ್ನಾಗಿ ತೊಳೆಯಿರಿ.ನಂತರ ಒಂದು ಬಾಣಲೆಗೆ ಎರಡು ಚಮಚದಷ್ಟು ಎಣ್ಣೆಯನ್ನು ಹಾಕಿ,ಅದಕ್ಕೆ ದೊಡ್ಡಪತ್ರೆ ಎಲೆಯನ್ನು ಹಾಕಿ ಹುರಿಯಿರಿ (ಎಲೆಯಲ್ಲಿರುವ ನೀರಿನಾಂಶ ಹಾಗೂ ಎಲೆಯ ಹಸಿ ವಾಸನೆ ಹೋಗುವ ತನಕ).ನಂತರ ಹಸಿಮೆಣಸು,ಬೆಳ್ಳುಳ್ಳಿ,ತೆಂಗಿನ ತುರಿ, ಉದ್ದಿನಬೇಳೆ,ಕಡ್ಲೆಬೇಳೆ ಮತ್ತು ಜೀರಿಗೆ ಹಾಕಿ ಪುನಃ ಚೆನ್ನಾಗಿ ಹುರಿಯಿರಿ.ತದನಂತರ ಒಂದು ಮಿಕ್ಸಿಜಾರಿಗೆ ಹುರಿದಿಟ್ಟ ಮಸಾಲಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಆಬಳಿಕ ಒಂದು ಬಾಣಲೆಗೆ 2ಚಮಚದಷ್ಟು ಎಣ್ಣೆಯನ್ನು ಹಾಕಿ ಕಾದಮೇಲೆ ಸಾಸಿವೆ, ಕಡ್ಲೆಬೇಳೆ,ಕರಿಬೇವಿನ ಎಲೆ,ಒಣಮೆಣಸು ಹಾಗೂ ಇಂಗು ಹಾಕಿ,ನಂತರ ರುಬ್ಬಿಟ್ಟ ದೊಡ್ಡಪತ್ರೆ ಮಸಾಲೆಯನ್ನು ಒಗ್ಗರಣೆಗೆ ಸೇರಿಸಿ ನಿಂಬೆ ಗಾತ್ರದಷ್ಟು ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ 5ನಿಮಿಷಗಳವರೆಗೆ ಫ್ರೈ ಮಾಡಿದರೆ ಆರೋಗ್ಯಕರವಾದ ದೊಡ್ಡಪತ್ರೆ ಎಲೆಯ ಚಟ್ನಿ ಸವಿಯಲು ಸಿದ್ಧ.

ದೊಡ್ಡಪತ್ರೆ ತಂಬುಳಿ
ಬೇಕಾಗುವ ಸಾಮಗ್ರಿಗಳು
ದೊಡ್ಡಪತ್ರೆ ಎಲೆ-8ರಿಂದ10,ಮೊಸರು-ಅರ್ಧ ಕಪ್‌, ಜೀರಿಗೆ-1ಚಮಚ, ಹಸಿಮೆಣಸು-3,ತೆಂಗಿನ ತುರಿ-5ಚಮಚ, ತುಪ್ಪ-4ಚಮಚ, ಸಾಸಿವೆ-ಸ್ವಲ್ಪ, ಕರಿಬೇವು,ಇಂಗು,ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ.ನಂತರ ಒಂದು ಪ್ಯಾನ್‌ಗೆ ಒಂದು ಚಮಚದಷ್ಟು ತುಪ್ಪವನ್ನು ಹಾಕಿ ಅದಕ್ಕೆ ದೊಡ್ಡಪತ್ರೆ ಎಲೆಗಳನ್ನು ಹಾಕಿ (ಎಲೆಯಲ್ಲಿರುವ ನೀರಿನಾಂಶ ಹಾಗೂ ಹಸಿವಾಸನೆ ಹೋಗುವ ತನಕ)ಹುರಿದು ಒಂದು ಬೌಲ್‌ಗೆ ಹಾಕಿ.ನಂತರ ಅದೇ ಪ್ಯಾನ್‌ ಒಂದು ಚಮಚದಷ್ಟು ತುಪ್ಪವನ್ನು ಹಾಕಿ,ಜೀರಿಗೆ ಮತ್ತು ಹಸಿಮೆಣಸು ಸೇರಿಸಿ ಹುರಿಯಿರಿ.ತದನಂತರ ಒಂದು ಮಿಕ್ಸಿಜಾರಿಗೆ ತೆಂಗಿನ ತುರಿ,ಹುರಿದಿಟ್ಟ ದೊಡ್ಡಪತ್ರೆ ಹಾಗೂ ಜೀರಿಗೆ -ಹಸಿಮೆಣಸಿನವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಒಂದು ಬೌಲ್‌ ಗೆ ಒಂದು ಕಪ್‌ ನಷ್ಟು ಮೊಸರನ್ನು ಹಾಕಿ,ಅದಕ್ಕೆ ರುಬ್ಬಿಟ್ಟ ದೊಡ್ಡಪತ್ರೆ ಮಿಶ್ರಣ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ.ನಂತರ ಒಂದು ಬಾಣಲೆಗೆ ಎರಡು ಚಮಚದಷ್ಟು ತುಪ್ಪ ಹಾಕಿ ಸಾಸಿವೆ,ಜೀರಿಗೆ,ಕರಿಬೇವು ಹಾಗೂ ಇಂಗು ಸೇರಿಸಿ ಒಗ್ಗರಣೆ ಹಾಕಿದರೆ ದೊಡ್ಡಪತ್ರೆ ತಂಬುಳಿ ಸವಿಯಲು ಸಿದ್ಧ. ಇದು ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತೆ.

-ಶ್ರೀರಾಮ್ ಜಿ .ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next