ಉಡುಪಿ: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ವೇ|ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವೇ|ಮೂ| ನಾರಾಯಣ ತಂತ್ರಿಗಳ ಪೌರೋಹಿತ್ಯದಲ್ಲಿ ದುರ್ಗಾಷ್ಟಮಿ ಪರ್ವಕಾಲದಲ್ಲಿ ಗಾಯತ್ರಿ ಧ್ಯಾನಪೀಠದಲ್ಲಿ ವೇದ ಮಾತೆ ಶ್ರೀ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ರವಿವಾರ ಶಿಲಾ ಮುಹೂರ್ತ ನೆರವೇರಿಸಿದರು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಮತ್ತು ನಾಗರಾಜ ಆಚಾರ್ಯ ಹಾಗೂ ಮುಂಬಯಿಯ ಸಂತೋಷ್ ಜನ್ನ ಅವರ ಸೇವಾರ್ಥ ಜೋಡಿ ಚಂಡಿಕಾ ಯಾಗ ಸಮರ್ಪಿಸ ಲ್ಪಟ್ಟಿತು. ರೋಹಿಣಿ ಶೆಟ್ಟಿಗಾರ್, ಲಾವಣ್ಯಾ, ಪ್ರಾಪ್ತಿ ಹಾಗೂ ರಕ್ಷಿತಾ ಮತ್ತು ಪ್ರಿತುಲ್ ಕುಮಾರ್ ಅವರ ತುಲಾಭಾರ ಸೇವೆ ನೆರವೇರಿತು.
ಸಂಜೀವ ಪೂಜಾರಿ ಬೈಲೂರು, ರಕ್ಷಿತಾ ಮತ್ತು ಪ್ರಿತುಲ್ ಕುಮಾರ್ ಸೇವಾರ್ಥ ದುರ್ಗಾನಮಸ್ಕಾರ ಪೂಜೆ ನಡೆಯಿತು. ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿಯವರು ಸ್ವಸ್ತಿಕ್ ಆಚಾರ್ಯರ ಸಹಕಾರದೊಂದಿಗೆ ಶ್ರೀ ದೇವಿಯನ್ನು ಗೌರಿಯಾಗಿ ಅಲಂಕರಿ ಸಿದ್ದರು. ಅರ್ಚಕ ಅನೀಶ್ ಭಟ್ ಪೂಜಾ ವಿಧಿ ನೆರವೇರಿಸಿದರು.
ದೇವಿಗೆ ಅಭಿಮುಖವಾಗಿ ನೃತ್ಯ ಸೇವೆಯನ್ನು ಬೆಂಗಳೂರಿನ ಶಾಂಭವಿ ಅಕಾಡೆಮಿಯ ಯೋಗಿ ಪುಲಕೇಶಿ ಅವರ ಶಿಷ್ಯ ಶ್ರವಣ್ ಕುಮಾರ್, ಬ್ರಾಹ್ಮರಿ ನಾಟ್ಯಾಲಯದ ಪ್ರಥಮ್, ಪ್ರಜ್ವಲ್, ಹಿಮಗೌರಿ, ಮಣಿಪಾಲ ಎಂಐಟಿ ವಿದ್ಯಾರ್ಥಿ ಇಶಾನ್ ಕೌಂಡಿನ್ಯ ಮೊದಲಾದವರು ಸಮರ್ಪಿಸಿದರು.
ನವಶಕ್ತಿ ವೇದಿಕೆಯಲ್ಲಿ ವಸಂತ್ ನೇತೃತ್ವದ “ವಿ-ರೋಕ್’ ಅವರಿಂದ ನೃತ್ಯ, ಉದ್ಯಾವರ ಬಾಲಗಣಪತಿ ಮಂಡಳಿ ಯಿಂದ ಕುಣಿತ ಭಜನೆ ಜರಗಿತು.
ಉತ್ತರಾಯಣದಲ್ಲಿ ಪ್ರತಿಷ್ಠೆ
ಗಾಯತ್ರಿ ದೇವಿಯು “ವೇದ ಮಾತೆ’ ಎಂದು ಕರೆಯಲ್ಪಡುತ್ತಾಳೆ. ಈಕೆಯನ್ನು ಪುರುಷ ರೂಪ ಮತ್ತು ಸ್ತ್ರೀರೂಪದಲ್ಲಿಯೂ ಪೂಜಿಸುವವರಿದ್ದಾರೆ. ವಿಶೇಷವಾದ ಜ್ಞಾನ, ಬುದ್ಧಿ ಶಕ್ತಿಯನ್ನು ಅನುಗ್ರಹಿಸುವ ವರದಾತೆಯೂ ಹೌದು. ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಗಳ ಸಾನ್ನಿಧ್ಯವಿದೆ. ಅಂತಹ ಮಹಿಮಾನ್ವಿತ ಮಹರ್ಷಿಗಳನ್ನು ಅನುಗ್ರಹಿಸಿದ ದೇವಿಗೂ ಸ್ಥಾನ ಸಂಕಲ್ಪಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ಈ ಸಾನ್ನಿಧ್ಯವು ಉತ್ತರಾಯಣ ಕಾಲದಲ್ಲಿ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ತಿಳಿಸಿದ್ದಾರೆ.
ತ್ರಿಗುಣಾತ್ಮಿಕ ಶಕ್ತಿ ಮಹಾಯಾಗ
ಅ. 24ರ ವಿಜಯದಶಮಿ ಪರ್ವಕಾಲದಲ್ಲಿ “ತ್ರಿಗುಣಾತ್ಮಿಕ ಶಕ್ತಿ ಸಂಪ್ರೀತಯೇ ತ್ರಿಕುಂಡ ತ್ರಿಚಂಡಿಕಾಯಾಗ’ ನಡೆಯಲಿದೆ. ಸಾಮೂಹಿಕ ಪ್ರಾರ್ಥನೆಯೊಂದಿಗೆ ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಆರಂಭಗೊಳ್ಳಲಿರುವ ಯಾಗವು ಮೂರೂ ಕುಂಡಗಳಲ್ಲಿ ಏಕಕಾಲದಲ್ಲಿ ಪೂರ್ವಾಹ್ನ 10.30ಕ್ಕೆ ಪೂರ್ಣಾಹುತಿಗೊಳ್ಳಲಿದೆ.