ಹುಣಸೂರು: ವೀಕೆಂಡ್ ಕಪ್ಯೂ೯ ಹಿನ್ನೆಯಲ್ಲಿ ತಾಲೂಕಿನ ದೊಡ್ಡಹೆಜ್ಜೂರು ವೀರಾಂಜನೇಯ ಸ್ವಾಮಿ ಜಾತ್ರೆ ರದ್ದಾದ ಹಿನ್ನೆಲೆಯಲ್ಲಿ, ಮುಂಜಾನೆಯೇ ಗ್ರಾಮಸ್ಥರು ಧಾರ್ಮಿಕ ವಿಧಿಯಂತೆ ಪೂಜೆ, ಹೋಮ ಹವನ ನಡೆಸಿ ವೀರಾಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಸಿದರು.
ಸಂಕ್ರಾಂತಿ ಮಾರನೆಯ ದಿನವಾದ ಭಾನುವಾರ ಜಾತ್ರಾಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಆಯೋಜಿಸಲಾಗಿತ್ತು. ಈ ನಡುವೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕಫ್ಯೂ೯ ಘೋಷಣೆ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಹಿನ್ನೆಲೆಯಲ್ಲಿ, ಜಿಲ್ಲಾದ್ಯಾಂತ ಜಾತ್ರೆಗಳನ್ನು ರದ್ದುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ದೊಡ್ಡ ಹೆಜ್ಜೂರಿನ ಜಾತ್ರೆ ರದ್ದುಗೊಂಡಿದ್ದರಿಂದಾಗಿ ಗ್ರಾಮಸ್ಥರು ಸೇರಿ ಶೃಂಗರಿಸಿದ್ದ ಉತ್ಸವ ಮೂರ್ತಿಯನ್ನು ಮುಂಜಾನೆಯೇ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿದ ನಂತರ ರಥಕ್ಕೇರಿಸಿ ದೇವಾಲಯದ ಸುತ್ತ ರಥ ಎಳೆದು ಧನ್ಯತಾ ಭಾವ ಮೆರೆದರು.
ಮುಂಜಾನೆಯೇ ರಥೋತ್ಸವ ನಡೆಸಿದ್ದರೂ ಜಾತ್ರೆ ಮಾಳದಲ್ಲಿ ಅಂಗಡಿಗಳು ಕಟ್ಟದಂತೆ ಸಮಿತಿಯವರು ಮನವಿ ಮಾಡಿದ್ದರಿಂದ ಆಗಮಿಸಿದ್ದ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿದ್ದರು.
ಆದಿವಾಸಿಗಳ ನಿರಾಸೆ
ನಾಗರಹೊಳೆ ಉದ್ಯಾನವನದಂಚಿನಲ್ಲಿರುವ ದೊಡ್ಡ ಹೆಜ್ಜೂರಿನ ವೀರಾಂಜನೇಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ನಾಗರಹೊಳೆ ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕಿನ ವಿವಿಧ ಹಾಡಿಗಳಿಂದ ಕಾಡು ಕುಡಿಗಳು, ನವದಂಪತಿಗಳು ಆಗಮಿಸಿ, ಜಾತ್ರೆಯಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುವುದು ವಾಡಿಕೆ ಆದರೆ ಈ ಬಾರಿ ಜಾತ್ರೆ ರದ್ದಾಗಿದ್ದರಿಂದ ಆದಿವಾಸಿಗಳಲ್ಲಿ ಬೇಸರ ಮೂಡಿಸಿದೆ.