“ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’ ಮತ್ತು “ರಾಜಕುಮಾರ’ ಎಂಬ ಎರಡು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂತೋಷ್ ಆನಂದ್‌ರಾಮ್ ಇದೀಗ ಡಬ್ಬಲ್ ಖುಷಿಯ ಸಂಭ್ರಮದಲ್ಲಿದ್ದಾರೆ. ಸಂತೋಷ್‌ಗೆ ಸಂಭ್ರಮಪಡುವಂತದ್ದೇನಾಗಿದೆ ಎಂದರೆ ಇಲ್ಲಿ ಕೇಳಿ. ಮೊದಲನೆಯದಾಗಿ “ರಾಜಕುಮಾರ’ ಚಿತ್ರದ ಅತ್ಯಂತ ಯಶಸ್ವಿ ಹಾಡಾದ “ಬೊಂಬೆ ಹೇಳುತೈತೆ …’ಯು ಯೂಟ್ಯೂಬ್‌ನಲ್ಲಿ 40 ಮಿಲಿಯನ್ ಹಿಟ್ಸ್‌ಗಳನ್ನು ಸಂಪಾದಿಸಿದೆ.
ಅದೂ ಕೇವಲ ಎಂಟು ತಿಂಗಳಲ್ಲೇ ಇನ್ನು “ಬೊಂಬೆ ಹೇಳುತೈತೆ …’ಯ ವೀಡಿಯೋ ಹಾಡು ಕಳೆದ ನಾಲ್ಕು ತಿಂಗಳುಗಳಲ್ಲಿ ಐದು ಮಿಲಿಯನ್ ಹಿಟ್ಸ್ ಸಂಪಾದಿಸಿದೆ. ಇದು ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆಯಾಗಿದ್ದು, ಈ ದಾಖಲೆಯಿಂದ ಸಂತೋಷ್ ಸಖತ್ ಖುಷಿಯಾಗಿ ಹೋಗಿದ್ದಾರೆ.
ಸಂತೋಷ್ ಅವರ ಇನ್ನೊಂದು ಖುಷಿಯೆಂದರೆ, ಅವರು ಮುಂದಿನ ದಿನಗಳಲ್ಲಿ ಮದುವೆಯಾಗಲಿದ್ದು, ಸದ್ಯದಲ್ಲಿಯೇ ಎಂಗೇಜ್ ಆಗುತ್ತಿದ್ದಾರೆ. ಇದೇ ತಿಂಗಳ 26ರಂದು ಸಂತೋಷ್ ಅವರ ನಿಶ್ಚಿತಾರ್ಥ ಸುರಭಿ ಜೊತೆಗೆ ಬಳ್ಳಾರಿಯಲ್ಲಿ ನಡೆಯಲಿದೆಯಂತೆ. ಅಂದು ಸಂತೋಷ್ ಹಾಗೂ ಸುರಭಿ ಅವರ ಮದುವೆ ದಿನಾಂಕ ಸಹ ಹೊರಬೀಳಲಿದೆ.
ಸಾಮಾನ್ಯವಾಗಿ ಸಿನಿಮಾದವರು ತಮ್ಮ ಮದುವೆಯ ವಿಷಯವನ್ನು ಹೇಳುವುದಿಲ್ಲ. ಸುದ್ದಿ ನಿಜವಾದರೂ, ಈಗಾಗಲೇ ಎಲ್ಲಾ ಪಕ್ಕಾ ಆಗಿದ್ದರೂ, ಮದುವೆಯಾಗುತ್ತಿರುವ ವಿಷಯವನ್ನು ನಾನಾ ಕಾರಣಗಳಿಗಾಗಿ ಬಹಿರಂಗಗೊಳಿಸುವುದಿಲ್ಲ. ಹಾಗಿರುವಾಗ ಸಂತೋಷ್ ಖುದ್ದು ಟ್ವೀಟ್ ಮಾಡಿ ತಮ್ಮ ಮದುವೆಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಹೊಸ ಬದುಕಿಗೆ ಹಾರೈಕೆಗಳನ್ನು ಕೇಳಿದ್ದಾರೆ.