Advertisement

ಇಡ್ಲಿ ಬೇಕೆಂದವನ ತರಾತುರಿ ನಿರ್ಧಾರ !

03:51 PM Apr 28, 2020 | mahesh |

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಕೋವಿಡ್ ಸೋಂಕಿತನದ್ದು “ತರಾತುರಿಯ ನಿರ್ಧಾರ’ ಎಂದು ಆರೋಗ್ಯ ಇಲಾಖೆ ಮಾನಸಿಕ ತಜ್ಞರು ಹಾಗೂ ಆಸ್ಪತ್ರೆ ಮಾನಸಿಕ ಆಪ್ತ ಸಮಾಲೋಚಕರು ಅಭಿಪ್ರಾಯಪಟ್ಟಿದ್ದಾರೆ. ಮೃತವ್ಯಕ್ತಿಗೆ ನಿತ್ಯ ಆಪ್ತ ಸಮಾಲೋಚನೆ ಮಾಡಲಾಗುತ್ತಿತ್ತು. ಈ ವೇಳೆ ಜೀವನ ಜಿಗುಪ್ಸೆ ಬಗ್ಗೆ ಅಥವಾ ಕಷ್ಟದ ಬಗ್ಗೆ
ಹೇಳಿಕೊಂಡಿರಲಿಲ್ಲ. ಮಧು ಮೇಹ, ಹೆಪಟೈಟಿಸ್‌ ಬಿ ರೋಗದಿಂದ ಬಳಲುತ್ತಿದ್ದು, ಗುಣವಾಗುತ್ತದೆ ಎಂಬುದಾಗಿ ಸಲಹೆ ನೀಡಿದ್ದೆವು. ರೋಗಿ ಬಹುತೇಕ ಧನಾತ್ಮಕ ಭಾವನೆ ಹೊಂದಿದ್ದರು. ಆದರೆ, ಸೋಮವಾರ ಕ್ಷಣ ಮಾತ್ರದಲ್ಲಿ ತರಾತುರಿ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿದ್ದು, ನಮಗೂ ಅಚ್ಚರಿ ಆಗಿದೆ ಎನ್ನುತ್ತಾರೆ ಆಸ್ಪತ್ರೆ ವೈದ್ಯರು. 50 ವರ್ಷದ ಈ ರೋಗಿ ಆಟೋ ಡ್ರೈವರ್‌ ಆಗಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಸೋಂಕು ಪರೀಕ್ಷೆ ಮಾಡಿಸಲಾಗಿದೆ.

Advertisement

ಏ.24ರಂದು ಸೋಂಕು ದೃಢಪಟ್ಟಿದ್ದು, ಅಂದಿನಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಹಿನ್ನೆಲೆ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. “ಶನಿವಾರ ಒಮ್ಮೆ ಡಯಾಲಿಸಿಸ್‌ ಮಾಡಲಾಗಿತ್ತು. ಭಾನುವಾರ ಆಪ್ತ ಸಮಾಲೋಚನೆ ಮಾಡಿದಾಗಲೂ ಯಾವುದೇ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಅಂತೆಯೇ ಸೋಮವಾರ ಬೆಳಗ್ಗೆಯೂ ಉಪಾಹಾರವಾಗಿ ಇಡ್ಲಿ ಸೇವಿಸಿದ್ದರು. ಕೊಟ್ಟ ಉಪಾಹಾರ ಕಡಿಮೆಯಾಗಿದ್ದು, ಇನ್ನೊಂದೆರೆಡು ಇಡ್ಲಿ ಬೇಕು ಎಂದು ಕೇಳಿದ್ದರು. ಸರಿ ಎಂದು ತರಿಸಿಕೊಡಲು ಸಹಾಯಕ ಸಿಬ್ಬಂದಿಗೆ ಹೇಳಿ ಇತ್ತ ಮತ್ತೂಬ್ಬ ಸೋಂಕಿತರ ಆರೋಗ್ಯ ತಪಾಸಣೆಗೆ ಮುಂದಾದೆವು. ಅಷ್ಟರಲ್ಲಾಗಲೇ ಶೌಚಾಲಯಕ್ಕೆ ತೆರಳುವ ನೆಪದಲ್ಲಿ ಹೊರಗೆ ಹೋಗಿ ಆಸ್ಪತ್ರೆ ತುರ್ತು ದ್ವಾರದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೋಗಿ ಇಂತಹ ನಿರ್ಧಾರ ಕೈಗೊಳ್ಳಬಹುದು ಎಂದು ಊಹಿಸಿಯೂ ಇರಲಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಆಪ್ತ ಸಮಾಲೋಚಕರು “ಉದಯವಾಣಿ’ಗೆ ತಿಳಿಸಿದ್ದಾರೆ.

ನಿತ್ಯ ಕರೆ, ವಾರ್ಡ್‌ಗೆ ಭೇಟಿ ನೀಡಿ ಸಮಾಲೋಚನೆ 
ಕೋವಿಡ್ ಸೋಂಕಿತರು ಮಾನಸಿಕವಾಗಿ ಕುಗ್ಗಿರುತ್ತಾರೆ. ಅವರಿಗೆ ಧೈರ್ಯ ತುಂಬಲು ನಿಯಮಿತವಾಗಿ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕರೆ ಮಾಡಿ ಅಥವಾ ಆಪ್ತಸಮಾಲೋಚಕರನ್ನು ಮಾತಾಡಿಸಿ ಎಂದು ಹೇಳಲಾಗಿರುತ್ತದೆ. ಶಂಕಿತರಿಗೆ, ಗುಣಮುಖರಾ ದವರಿಗೆ ನಿತ್ಯ ಕರೆ ಮಾಡಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೆ ದಿನಕ್ಕೆ ಒಮ್ಮೆ ಬೆಳಗಿನ ಅವಧಿಯಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತದೆ. ಪ್ರತಿ ಆಸ್ಪತ್ರೆಯಲ್ಲಿಯೂ ಆಪ್ತ ಸಮಾಲೋಚಕರ ತಂಡವಿದೆ. ರೋಗಿಗಳು ಶೌಚಾಲಯ ಸ್ವತ್ಛತೆಯಿಂದ ಹಿಡಿದು ಹಾಸಿಗೆ ಬದಲಿಸುವ, ಸೋಪು ಬದಲಿಸುವ ಬಗ್ಗೆ ದೂರು, ಇಷ್ಟದ ಆಹಾರ ತಿನ್ನುವ ಬಗ್ಗೆ ಆಸೆಗಳನ್ನು ನಮ್ಮ ಬಳಿ ಹಂಚಿಕೊಂಡು ವೈದ್ಯರ ಸೂಚನೆ ಮೇರೆಗೆ ಪೂರೈಸಿಕೊಳ್ಳುತ್ತಿರುತ್ತಾರೆ. ಈವರೆಗೂ ಕೊರೊನಾ ಸೋಂಕು ಶಂಕಿತರು, ಸೋಂಕಿತರು, ಗುಣಮುಖರಾದವರನ್ನು ಸೇರಿಸಿ ಒಟ್ಟಾರೆ 51,266 ಆಪ್ತ ಸಮಾಲೋಚನೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾನಸಿಕ ಆರೋಗ್ಯ ವಿಭಾಗ ಉಪನಿರ್ದೇಶಕಿ ಡಾ.ರಜನಿ ತಿಳಿಸಿದ್ದಾರೆ.

ಸೋಂಕಿತರ ಸಾವು ಪ್ರಭಾವ?
ಆತ್ಮಹತ್ಯೆಯಿಂದ ಮೃತಪಟ್ಟ ವ್ಯಕ್ತಿ ಚಿಕಿತ್ಸೆ ಪಡೆಯುತಿದ್ದ ತುರ್ತು ನಿಗಾ ಘಟಕದಲ್ಲಿಯೇ ಭಾನುವಾರ ಕೋವಿಡ್  ಸೋಂಕಿತ ಮಹಿಳೆ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದರು. ಒಂದೇ ಕಡೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಮಹಿಳೆ ಸಾವು ಈ ವ್ಯಕ್ತಿ ಮೇಲೆ ಗಾಢ ಪರಿಣಾಮ ಬೀರಿರುವ ಸಾಧ್ಯತೆ ಇರಬಹುದು ಎಂದು ಊಹಿಸಲಾಗಿದೆ.

ಆಸ್ಪತ್ರೆ ಆಪ್ತಸಮಾಲೋಚಕ
ಸಿಬ್ಬಂದಿ ಬಳಿ ಮಾತನಾಡಿದ್ದು, ಇದೊಂದು ತರಾತುರಿಯಲ್ಲಿ ಕೈಗೊಂಡ ನಿರ್ಧಾರ ಎಂದು ಮೇಲ್ನೋಟಕ್ಕೆ ಅಭಿಪ್ರಾಯಪಡಬಹುದು. ಅಲ್ಲಿನ ಸಿಬ್ಬಂದಿಯೂ ಘಟನೆಯನ್ನು ಊಹಿಸಿರಲಿಲ್ಲ, ಎಲ್ಲರಿಗೂ ಅಚ್ಚರಿಯಾಗಿದೆ.
 ಡಾ.ರಜನಿ, ಉಪನಿರ್ದೇಶಕಿ, ಮಾನಸಿಕ ಆರೋಗ್ಯ ವಿಭಾಗ, ಆರೋಗ್ಯ ಇಲಾಖೆ

Advertisement

● ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next